Advertisement

Bengaluru: ನಮ್ಮ ಕ್ಲಿನಿಕ್‌ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ

03:18 PM Sep 20, 2024 | Team Udayavani |

ಬೆಂಗಳೂರು: ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿಯ ಹಗ್ಗ-ಜಗ್ಗಾಟದಲ್ಲಿ ಯಶವಂತ ಪುರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸೇವೆಯು “ನಮ್ಮ ಕ್ಲಿನಿಕ್‌’ಗೆ ಸೀಮಿತವಾಗಿದ್ದು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಕಟ್ಟಡ ಉದ್ದೇಶಿತ ಸೇವೆಗೆ ಬಳಕೆಯಾಗುತ್ತಿಲ್ಲ.

Advertisement

ಸುಸಜ್ಜಿತ ಬಹುಮಹಡಿ ಕಟ್ಟಡ, ಶಸ್ತ್ರಚಿಕಿತ್ಸಾ ವಿಭಾಗ, ತುರ್ತು ಚಿಕಿತ್ಸೆ ಹಾಗೂ ಪ್ರಯೋಗಾಲ ಯದ ಸೇವೆ ಹಾಗೂ ಹೊಸದಾಗಿ ಖರೀದಿಸಿದ್ದ ಹಾಸಿಗೆಗಳಿದ್ದರೂ, ಯಶವಂತಪುರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅನಾಥವಾಗಿದೆ. ಪ್ರತಿದಿನ ಹತ್ತಾರು ಬಡ ಗರ್ಭಿಣಿಯರು ಒಪಿಡಿ ಹಾಗೂ ಹೆರಿಗೆ ಸೇವೆಗಾಗಿ ಅಲೆದಾಡುವ ಪರಿಸ್ಥಿತಿ ಇದೆ.

ಸುವರ್ಣ ಸಂಭ್ರಮ: 1975ರಿಂದ ಸೇವೆ ಸಲ್ಲಿಸುತ್ತಿದ್ದ ಯಶವಂತಪುರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇನ್ನೊಂದು ವರ್ಷವಾಗಿದ್ದರೆ ಸುವರ್ಣ ಸಂಭ್ರಮವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ, 2016ರಲ್ಲಿ ದುರಸ್ತಿ ಹೆಸರಿನಲ್ಲಿ ಸೇವೆ ಸ್ಥಗಿತಗೊಳಿಸಿ, ಆಸ್ಪತ್ರೆಯ ವೈದ್ಯರು ಹಾಗೂ ಇತರೆ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಲಾಗಿತ್ತು. ಈಗ ಕಟ್ಟಡಕ್ಕೆ ಹೊಸ ಕಳೆ ಬಂದಿದೆ. ಹೊಸ ಉಪಕರಣಗಳೂ ಬಂದಿವೆ. 2020ರಲ್ಲಿ ಇದನ್ನೇ ಕೋವಿಡ್‌ ಆಸ್ಪತ್ರೆಯ ನ್ನಾಗಿ ಪರಿವರ್ತಿಸಲಾಯಿತು. ಆ ಬಳಿಕವೂ ಇದು ಹೆರಿಗೆ ಆಸ್ಪತ್ರೆಯಾಗಿ ಕಾರ್ಯಾನಿರ್ವಹಿಸಲೇ ಇಲ್ಲ.

ತಿಂಗಳಿಗೆ 300 ಹೆರಿಗೆ: ಯಶವಂತಪುರ, ಪೀಣ್ಯ, ಪೀಣ್ಯ ಕೈಗಾರಿಕೆ ವಲಯ, ದಾಸರಹಳ್ಳಿ, ಮತ್ತಿಕೆರೆ, ಜಾಲಹಳ್ಳಿ, ಜಾಲಹಳ್ಳಿ ಕ್ರಾಸ್‌ ಸೇರಿದಂತೆ ಹತ್ತಾರು ಬಡಾವಣೆಯಲ್ಲಿ ಕೂಲಿ ಕೆಲಸ, ಗಾರ್ಮೆಂಟ್ಸ್‌ಗಳಿಗೆ ಹೋಗುವವರ ಸಂಖ್ಯೆ ಹೆಚ್ಚಿದೆ. ಬಡಕೂಲಿ ಕಾರ್ಮಿಕ ಹಾಗೂ ಕೆಳಮಧ್ಯಮ ವರ್ಗದ ಮಹಿಳೆಯರು ಈ ಹೆರಿಗೆ ಆಸ್ಪತ್ರೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿ ದ್ದರು. ಪ್ರತಿ ದಿನ 10ರಂತೆ ತಿಂಗಳಿಗೆ ಸರಾಸರಿ 300 ಹೆರಿಗೆಗಳನ್ನು ಮಾಡಿಸಲಾಗುತ್ತಿತ್ತು. ಈಗ ಈ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಬರುವ ಗರ್ಭಿಣಿಯರನ್ನು ಆಶಾ ಕಾರ್ಯಕರ್ತೆಯರು ಶ್ರೀರಾಮಪುರದ ಆಸ್ಪತ್ರೆಗೆ ಶಿಫಾರಸು ಮಾಡುತ್ತಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗಳಿಗೆ ದುಪ್ಪಟ್ಟು ಹಣ ವ್ಯಯಿಸಬೇಕಾಗಿದೆ. ಇನ್ನು ಅನೇಕರ ಮಂದಿ ದೂರದ ಕೆ.ಸಿ.ಜನರಲ್‌, ವಾಣಿವಿಲಾಸ್‌ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಆಸ್ಪತ್ರೆ

ವಿದ್ಯಾರ್ಥಿಗಳ ಪಾಠ ಶಾಲೆ!: ಪ್ರಸ್ತುತ ಆಸ್ಪತ್ರೆ ಹಿಂಭಾಗದ ಕಟ್ಟಡದಲ್ಲಿ ಬಿಬಿಎಂಪಿ ವ್ಯಾಪ್ತಿಯ ಮತ್ತಿಕೆರೆ ಶಾಲೆಯ ತರಗತಿಗಳು ನಡೆಯುತ್ತಿವೆ. ಮುಂಭಾಗದಲ್ಲಿ ನಮ್ಮ ಕ್ಲಿನಿಕ್‌ ಕಾರ್ಯಾಚರಿಸುತ್ತಿದೆ. ಆಸ್ಪತ್ರೆಯ ಹೊರ ವಲಯದಿಂದ ನೋಡಿದರೆ ನಮ್ಮ ಕ್ಲಿನಿಕ್‌ ಇರುವಿಕೆಯ ಕುರುವೇ ಇಲ್ಲ. ಆಸ್ಪತ್ರೆಯ ಮುಂಭಾಗವು ಖಾಸಗಿ ಆಟೋ, ಬೈಕ್‌ಗಳ ಪಾರ್ಕಿಂಗ್‌ ಸ್ಥಳವಾಗಿ ಪರಿವರ್ತನೆಗೊಂಡಿದೆ.

Advertisement

ಬಿಬಿಎಂಪಿ-ಆರೋಗ್ಯ ಇಲಾಖೆ ನಡುವೆ ಗೊಂದಲ?

2020ರ ಕೋವಿಡ್‌ ಬಳಿಕ ನೂತನ ಆಸ್ಪತ್ರೆಯನ್ನು ಹೆರಿಗೆ ಆಸ್ಪತ್ರೆಯಾಗಿ ಉಳಿಸಿಕೊಳ್ಳಬೇಕೋ ಅಥವಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಬೇಕೆ ಎನ್ನುವ ಗೊಂದಲವಿತ್ತು. ಈ ನಡುವೆ ಆರೋಗ್ಯ ಇಲಾಖೆ ಈ ಆಸ್ಪತ್ರೆಯನ್ನು ನಡೆಸಲು ಮುಂದಾಗಿತ್ತಾದರೂ, ಕೆಲ ತಾಂತ್ರಿಕ ಕಾರಣಗಳಿಂದ ನಿರ್ಧಾರ ಕೈಬಿಡಲಾಗಿದೆ. ಇದೀಗ ಮತ್ತೂಮ್ಮೆ ಆಸ್ಪತ್ರೆಯನ್ನು ಸುರ್ಪದಿಗೆ ಪಡೆಯುವ ಕೆಲಸಗಳಾಗುತ್ತಿವೆ. ಆರೋಗ್ಯ ಇಲಾಖೆ ಆಸ್ಪತ್ರೆಯನ್ನು ಸುರ್ಪದಿ ಪಡೆದುಕೊಂಡರೆ ಈ ಆಸ್ಪತ್ರೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉಳಿಯೋದು ಸ್ವಲ್ಪ ಅನುಮಾನವಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸುವ ಚಿಂತನೆ ಇದೆ.

ಯಶವಂತಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯು ಬಡ ಹೆಣ್ಣು ಮಕ್ಕಳಿಗೆ ಸಾಕಷ್ಟು ಅನುಕೂಲ ಕಲ್ಪಿಸಿತ್ತು. ಆಸ್ಪತ್ರೆ ದುರಸ್ತಿಗೊಂಡು 8 ವರ್ಷಗಳು ಪೂರ್ಣಗೊಂಡರು ಹೆರಿಗೆ ಆಸ್ಪತ್ರೆ ಪ್ರಾರಂಭವಾಗಿಲ್ಲ. ಇದರಿಂದಾಗಿ ಬಡ ಹೆಣ್ಣುಮಕ್ಕಳು ತುರ್ತು ಸಂದರ್ಭದಲ್ಲಿ ದೂರದ ಆಸ್ಪತ್ರೆಗೆ ತೆರಳು ಪರಿಸ್ಥಿತಿ ಇದೆ. ●ನಿರ್ಮಲಾ, ಆಲ್‌ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ಉಪಾಧ್ಯಕ್ಷೆ

ಪ್ರತಿದಿನ ಹತ್ತಾರು ಹೆರಿಗೆಯಾಗುತ್ತಿದ್ದ ಆಸ್ಪತ್ರೆಯು ಇದೀಗ ನಮ್ಮ ಕ್ಲಿನಿಕ್‌ ಆಗಿದೆ. ಈ ಪ್ರದೇಶದ ಗರ್ಭಿಣಿಯರು ದೂರ ಪ್ರದೇಶಕ್ಕೆ ತೆರಳಿ ತಪಾಸಣೆ ಹಾಗೂ ಹೆರಿಗೆ ಮಾಡಿಸಿಕೊಳ್ಳಲು ಅನಿವಾರ್ಯತೆ ಇದೆ. ●ಆನಂದ, ಸ್ಥಳೀಯರು.

ಯಶವಂತಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯನ್ನು ಆರೋಗ್ಯ ಇಲಾಖೆ ಸುರ್ಪದಿಗೆ ತೆಗೆದು ಕೊಳ್ಳಲಿದೆ. ಅದಕ್ಕೆ ಸಂಬಂಧಿಸಿದ ಕೆಲಸಗಳಾಗುತ್ತಿವೆ. ಆಸ್ಪತ್ರೆಯು ಶೀಘ್ರದಲ್ಲಿ ಕಾರ್ಯಾಚರಣೆ ಮಾಡಲಿದೆ. ತಾತ್ಕಾಲಿಕವಾಗಿ ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ನಮ್ಮ ಕ್ಲಿನಿಕ್‌ ಪ್ರಾರಂಭಿಸಲಾಗಿದೆ. ●ವಿಕಾಸ್‌ ಕಿಶೋರ್‌ ಸುರಾಳ್ಕರ್‌, ಬಿಬಿಎಂಪಿ ಆರೋಗ್ಯ ಆಯುಕ್ತರು

■ ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next