ಬೆಂಗಳೂರು: ಶಾಲಾ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ನಗರ ಸಂಚಾರ ಪೊಲೀಸರು, ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ ಮಾಡುತ್ತಿದ್ದ 23 ಮಂದಿ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ.
ಶಾಲಾ ವಾಹನ ಚಾಲಕರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ಹಾಗೂ ಪೋಷಕರಿಂದ ಕೆಲ ದಿನಗಳಿಂದಲೂ ನಿರಂತರವಾಗಿ ದೂರುಗಳು ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ 9.30 ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ಒಟ್ಟು 3,016 ವಾಹನಗಳ ತಪಾಸಣೆ ನಡೆಸಿದ್ದಾರೆ. ಈ ಪೈಕಿ 23 ಬಸ್‌ಗಳ ಚಾಲಕರು ಮದ್ಯ ಸೇವಿಸಿ ವಾಹನ ಚಾಲನೆ ಮಾಡಿರುವುದು ಮದ್ಯ ಸೇವನಾ ಪರೀಕ್ಷಾ ಯಂತ್ರದಲ್ಲಿ ಪತ್ತೆಯಾಗಿದೆ.
ಈ 23 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅವರ ಚಾಲನಾ ಪರವಾನಗಿೆಯನ್ನು ಅಮಾನತುಗೊಳಿಸಲು ಆರ್‌ಟಿಓ ಕಚೇರಿಗೆ ಪತ್ರ ಬರೆಯಲಾಗಿದೆ. ಜತೆಗೆ ವಾಹನಗಳ ಜಪ್ತಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಇದರೊಂದಿಗೆ ತಪಾಸಣೆ ವೇಳೆ ವಾಹನಗಳ ಸಾಮಾರ್ಥ್ಯ ಪ್ರಮಾಣ ಪತ್ರ(ಫಿಟ್ನೆಸ್ ಸರ್ಟಿಫಿಕೆಟ್) ಹೊಂದಿರದ 11 ವಾಹನಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಜಪ್ತಿ ಮಾಡಿ, ಆರ್‌ಟಿಓ ಅಧಿಕಾರಿಗಳ ವಶಕ್ಕೆ ನೀಡಲಾಯಿತು. ಮುಂದಿನ ದಿನಗಳಲ್ಲಿಯೂ ಈ ವಿಶೇಷ ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದರು.
ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ
ಕುಡಿದು ಶಾಲಾ ವಾಹನ ಓಡಿಸುವ ಚಾಲಕರು ಹಾಗೂ ಈ ಕುರಿತು ನಿರ್ಲಕ್ಷ್ಯ ವಹಿಸಿದ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಬಸ್ ಶುಲ್ಕವೆಂದು ಪ್ರತಿ ತಿಂಗಳು ಸಾವಿರಾರು ರೂ. ಪಡೆಯುವ ಶಾಲೆಗಳುಲಾ ಆಡಳಿತ ಮಂಡಳಿ, ಚಾಲಕರ ಪೂರ್ವಪರ ವಿಚಾರಣೆ ನಡೆಸದೆ ನೇಮಿಸಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.