Advertisement

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

11:05 AM Sep 20, 2024 | Team Udayavani |

ಬೆಂಗಳೂರು: ಉಪನಗರ ರೈಲು, ಮೆಟ್ರೋ ಸೇರಿದಂತೆ ಉದ್ಯಾನನಗರಿಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಲ್ಲಿ 9 ಸಾವಿರಕ್ಕೂ ಅಧಿಕ ಮರಗಿಡಗಳಿಗೆ ಕೊಡಲಿ ಪೆಟ್ಟು ಬಿದ್ದಿದ್ದು, ಸಿಲಿಕಾನ್‌ ಸಿಟಿಯ ಹಸಿರು ಹೊದಿಕೆಗೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಪರಿಸರಪ್ರೇಮಿಗಳು ಆತಂಕ ಹೊರಹಾಕಿದ್ದಾರೆ.

Advertisement

ಬಿಬಿಎಂಪಿಯ ಅಂಕಿ-ಅಂಶದ ಪ್ರಕಾರ, ಬೆಂಗಳೂರು ಉಪನಗರಗಳನ್ನು ಸಂಪರ್ಕಿಸುವ ರೈಲ್ವೆ ಯೋಜನೆ, ರಸ್ತೆ, ನಮ್ಮ ಮೆಟ್ರೋ ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಲುವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಿಂದ ಸುಮಾರು 9,703 ಕ್ಕೂ ಅಧಿಕ ಮರಗಳಿಗೆ ಕೊಡಲಿ ಪೆಟ್ಟು ನೀಡಲಾಗಿದೆ.

ನಮ್ಮ ಮೆಟ್ರೋ ಯೋಜನೆಯೊಂದರಿಂದಲೇ ಸುಮಾರು 4,078 ಮರಗಳ ಮಾರಣ ಹೋಮ ಆಗಿದ್ದು, ರೈಲ್ವೆ ಸವಲತ್ತು ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರೈಲ್ವೆ ಮೂಲ ಸೌಕರ್ಯ ಅಭಿವೃದ್ದಿ ಸಂಸ್ಥೆ (ಕೆಆರ್‌ಐಡಿಇ) ಸುಮಾರು 4,926 ಮರಗಳನ್ನು ಕಡಿದು ಹಾಕಿದೆ.

ಬಿಬಿಎಂಪಿಯಿಂದ 699 ಮರಗಳಿಗೆ ಕೊಡಲಿ: ಬಿಬಿಎಂಪಿ ಕೂಡ ಕಳೆದ 3 ವರ್ಷಗಳಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳ ಕಾರ್ಯಗತದ ಉದ್ದೇಶ ದಿಂದ ಸುಮಾರು 699 ಮರಗಳನ್ನು ಬುಡ ಸಮೇತ ತೆಗೆದಿದೆ. ಇದರ ಹೊರತಾಗಿ ಎಚ್‌ಎಎಲ್‌, ಜಲ ಮಂಡಳಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ ಸೇರಿದಂತೆ ಮತ್ತತಿರರ ಅಭಿವೃದ್ಧಿ ಕಾರ್ಯಗಳಿಗಾಗಿ ಮರಗಳನ್ನು ಕಡಿದು ಹಾಕಲಾಗಿದೆ ಎಂದು ಪಾಲಿಕೆ ಅರಣ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಡಿದ ಮರಗಳ ಬದಲಿಗೆ ಹೆಚ್ಚುವರಿ ಗಿಡ: ಈಗಾಗಲೇ ಬೆಂಗಳೂರಿನಲ್ಲಿ ಹಲವು ಅಭಿವೃದ್ಧಿ ಯೋಜನೆಗಳು ನಡೆದಿವೆ. ಅವುಗಳಿಗಾಗಿ ಕೆಲವು ಕಡೆಗಳಲ್ಲಿ ಮರವನ್ನು ಕಡಿಯಲಾಗಿದೆ. ಆ ಮರಗಳಿಗೆ ಬದಲಾಗಿ ಹೆಚ್ಚುವರಿ ಗಿಡಗಳನ್ನು ನಡೆಯುವ ಪ್ರಕ್ರಿಯೆ ಕೂಡ ನಡೆದಿದೆ. ವಿವಿಧ ಸಂಸ್ಥೆಗಳು ಮರಗಿಡಗಳನ್ನು ನೆಟ್ಟಿರುವ ಬಗ್ಗೆ ಖಾತರಿ ದೊರೆತ ನಂತರ ಮರಗಿಡಗಳಿಗೆ ಕತ್ತರಿ ಹಾಕಲು ಅನುವು ಮಾಡಿ ಕೊಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

“ಬಿಬಿಎಂಪಿಗೆ ಮರ ಸಂರಕ್ಷಣೆ ಬಗ್ಗೆ ಕಾಳಜಿಯಿಲ್ಲ

ಹವಾಮಾನ ವೈಪರೀತ್ಯವನ್ನು ತಡೆಯುವ ನಿಟ್ಟಿನಲ್ಲಿ ಮರಗಿಡಗಳು ಪ್ರಮುಖ ಪಾತ್ರ ವಹಿಸುತ್ತವೆ. ಭವಿಷ್ಯತ್ತಿನ ಹವಾಮಾನ ಬದಲಾವಣೆ ಕೇಂದ್ರೀ ಕರಿಸಿ ಪ್ಯಾರೀಸ್‌ ಒಪ್ಪಂದ ಜಾರಿಗೆ ತರಲಾಗಿದೆ. ಪ್ಯಾರೀಸ್‌ ಒಪ್ಪಂದಕ್ಕೆ ಸಹಿ ಹಾಕಿ ಜಾಗತಿಕ ತಾಪಮಾನ ತಡೆಗಟ್ಟಲು ಕೈ ಜೋಡಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ, ಸರ್ಕಾರದ ಆಡಳಿತ ಯಂತ್ರದ ಭಾಗವಾಗಿರುವ ಬಿಬಿಎಂಪಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಕೇವಲ ಮೂರೇ ವರ್ಷದಲ್ಲಿ 9 ಸಾವಿರ ಮರಗಳನ್ನು ನೆಲಸಮ ಮಾಡಲು ಅವಕಾಶ ಕೊಟ್ಟಿರುವುದನ್ನು ನೋಡಿದರೆ ನಿಜವಾದ ಪರಿಸರ ಉಳಿಸುವ ಕಾಳಜಿ ಇಲ್ಲದಂತೆ ತೋರುತ್ತದೆ ಎಂದು ಪರಿಸರವಾದಿ ಭಾರ್ಗವಿ ರಾವ್‌ ದೂರುತ್ತಾರೆ. ಜಾಗತಿಕ ತಾಪ ಮಾನದ ಬದಲಾವಣೆಯಿಂದಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ವಿಪತ್ತುಗಳು ಸಂಭವಿಸುತ್ತಿವೆ. ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಗಳು ನಗರದ ಹಸಿರು ಹೊದಿಕೆಯನ್ನು ಸುಧಾರಿಸಲು ಮತ್ತು ಉಳಿಸಿಕೊಳ್ಳಲು ಯೋಜನೆಯನ್ನು ಸಿದ್ಧಪಡಿಸ ಬೇಕಾಗಿದೆ ಎನ್ನುತ್ತಾರೆ.

ರಾಜಧಾನಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಾವಿರಾರು ಮರಗಳನ್ನು ಕಡಿಯುತ್ತಿದ್ದು, ಮುಂದಿನ ದಿನಗಳಲ್ಲಿ ನಾವೆಲ್ಲರೂ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ ತಲುಪಿದೆ. ಬಿಬಿಎಂಪಿ ಮರ ಸಮಿತಿಯು ಕಡಿದ ಮರಗಳಿಗೆ ಪರ್ಯಾಯವಾಗಿ ಎಷ್ಟು ಗಿಡಗಳನು ನೆಟ್ಟು ಬೆಳೆಸಿದೆ ಎಂಬುದರ ಪರಿಶೀಲನೆ ನಡೆಸಲು ಮುಂದಾಗಬೇಕು. ●ವಿಜಯ್‌ ನಿಶಾಂತ್‌, ಸಸ್ಯ ವೈದ್ಯ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next