ಬೆಂಗಳೂರು: ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿ ಜೈಲಿಗೆ ಕರೆದೊಯ್ಯುವಾಗ ತನ್ನ ಗುದದ್ವಾರದಲ್ಲಿ ಮೊಬೈಲ್‌ಗಳನ್ನು ಇಟ್ಟುಕೊಂಡು ಹೋಗುತ್ತಿದ್ದ ವಿಚಾರಣಾಧೀನ ಕೈದಿಯೊಬ್ಬ ಕಾರಾಗೃಹ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದಾನೆ. ರಘುವೀರ್ ಸಿಕ್ಕಿ ಬಿದ್ದ ಕೈದಿ.
ಆರೋಪಿಯ ಗುದದ್ವಾರದಲ್ಲಿದ್ದ 2 ಮೊಬೈಲ್ ಜಪ್ತಿ ಮಾಡಲಾಗಿದೆ. ಆತನ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಹಿಂದೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ರಘುವೀರ್‌ನನ್ನು ಜು.2ರಂದು ಕಾನ್‌ಸ್ಟೇಬಲ್ ಶ್ರೀಕೃಷ್ಣ ಕೋರ್ಟ್‌ಗೆ ಹಾಜರು ಪಡಿಸಿ ವಾಪಸ್ ಜೈಲಿಗೆ ಕರೆದೊಯ್ಯುತ್ತಿದ್ದರು. ಮಾರ್ಗ ಮಧ್ಯೆ ಹೊಟ್ಟೆ ನೋವು ಎಂದು ಗೋಳಾಡಿದ್ದಾನೆ. ನಂತರ ಜೈಲಿನ ಬಳಿ ಹೋದಾಗ, ಕಾನ್‌ಸ್ಟೇಬಲ್ ಶ್ರೀಕೃಷ್ಣ, ಜೈಲಿನ ಅಧಿಕಾರಿಗಳಿಗೆ ಕೈದಿ ಹೊಟ್ಟೆ ನೋವು ಎಂದು ಹೇಳುತ್ತಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಕೂಡಲೇ ಆತನನ್ನು ಒಳಗೆ ಕರೆದೊಯ್ಯುವಾಗ ಲೋಹ ಪರಿಶೋಧಕ ಯಂತ್ರದಲ್ಲಿ ಶಬ್ಧ ಬಂದಿದ್ದು, ಅನುಮಾನಗೊಂಡು ಬೇರೆ ಉಪಕರಣದಿಂದ ಸ್ಕ್ಯಾನ್ ಮಾಡಿದಾಗ, ಆತನ ಗುದದ್ವಾರದಲ್ಲಿ ಶಬ್ಧ ಬಂದಿದೆ.
ಬಳಿಕ ಆರೋಪಿಯನ್ನು ಕೂಡಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಎಕ್ಸ್‌ರೇ ಮಾಡಿದಾಗ, ಆತನ ಗುದದ್ವಾರದಲ್ಲಿ ಮೊಬೈಲ್‌ಗಳು ಇರುವುದು ಪತ್ತೆಯಾಗಿದೆ. ಬಳಿಕ ಶಸ್ತ್ರ ಚಿಕಿತ್ಸೆ ಮಾಡಿ ಮೊಬೈಲ್‌ಗಳನ್ನು ಹೊರಗಡೆ ತೆಗೆಯಲಾಗಿದೆ. ಈತನ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ, ಜೈಲಿನಲ್ಲಿರುವ ಕೆಲ ವ್ಯಕ್ತಿಗಳಿಗೆ ಲಕ್ಷಾಂತರ ರೂ.ಗೆ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಎಂಬುದು ಗೊತ್ತಾಗಿದೆ.
ಆ ಕೈದಿಗಳು ಯಾರೆಂದು ಪತ್ತೆ ಹಚ್ಚಬೇಕಿದೆ ಎಂದು ಪೊಲೀಸರು ಹೇಳಿದರು.