ಕೋಲ್ಕತ್ತಾ: ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಬಂಗಾಳಿ ನಟ ಸೌಮಿತ್ರ ಚಟರ್ಜಿ ಇಂದು ನಿಧನ ಹೊಂದಿದ್ದಾರೆ.
85 ವರ್ಷದ ಸೌಮಿತ್ರ ಚಟರ್ಜಿ ಅವರಿಗೆ ಕಳೆದ ಅಕ್ಟೋಬರ್ 6ರಂದು ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿತ್ತು. ಅಂದಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಳೆದರೆಡು ದಿನದಿಂದ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು.
ಸೌಮಿತ್ರ ಚಟರ್ಜಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಒಂದಕ್ಕಿಂತ ಹೆಚ್ಚು ಲೈಫ್ ಸಪೋರ್ಟ್ ಯಂತ್ರಗಳನ್ನು ಅಳವಡಿಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಪವಾಡ ನಡೆಯದ ಹೊರತು ನಾವು ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಶನಿವಾರ ಹೇಳಿದ್ದರು.
ಇದನ್ನೂ ಓದಿ:ರಸ್ತೆಯಿಲ್ಲದ ಗದ್ದೆಯಲ್ಲಿ ಬಂದು ನಿಂತಿದೆ ಮಾಯಾವಿ ಕಾರು! ಪರ್ಕಳದ ಗದ್ದೆಯಲ್ಲಿ ನಿಗೂಢ ಕಾರು!
ಚಟರ್ಜಿ ಅವರ ಮೂತ್ರಪಿಂಡಗಳ ಕಾರ್ಯ ಸಂಪೂರ್ಣ ಹದಗೆಟ್ಟಿತ್ತು. ಗುರುವಾರ ಅವರಿಗೆ ಮೊದಲ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು. ಬುಧವಾರ ಟ್ರಾಕಿಯೊಸ್ಟೊಮಿ ನಡೆಸಲಾಗಿತ್ತು. ಆದರೆ ಅದು ಯಾವುದೂ ಪ್ರಯೋಜನವಾಗದೇ ಇಂದು (ರವಿವಾರ) ಮಧ್ಯಾಹ್ನ 12.15ರ ಸುಮಾರಿಗೆ ನಿಧನ ಹೊಂದಿದ್ದಾರೆ.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದಿದ್ದ ಸೌಮಿತ್ರ ಚಟರ್ಜಿ ಅವರಿಗೆ 2018 ರಲ್ಲಿ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಲೀಜನ್ ಆಫ್ ಆನರ್ ನೀಡಿ ಗೌರವಿಸಲಾಗಿತ್ತು.