ಕೊಲ್ಕತ್ತಾ: ಕೋಲ್ಕತ್ತಾದ ಆರ್.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ಬೆಂಗಾಲಿ ನಟಿ ಪಾಯೆಲ್ ಮುಖರ್ಜಿ ಮೇಲೆ ಬೈಕ್ ಸವಾರನೊಬ್ಬ ಹಲ್ಲೆ ನಡೆಸಿ ಬಳಿಕ ಆಕೆಯ ಕಾರನ್ನು ಧ್ವಂಸಗೊಳಿಸಿರುವ ಘಟನೆ ಶುಕ್ರವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಕೋಲ್ಕತ್ತಾದಲ್ಲಿ ಕಿರಿಯ ವೈದ್ಯೆ ಅತ್ಯಾಚಾರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತ್ತಾದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಜನ ಮಾತನಾಡುವಂತಾಗಿದೆ ಇದರ ನಡುವೆ ಶುಕ್ರವಾರ (ಆಗಸ್ಟ್ 23) ಸಂಜೆ ದಕ್ಷಿಣ ಕೋಲ್ಕತ್ತಾದ ಸದರ್ನ್ ಅವೆನ್ಯೂದಲ್ಲಿ ನಟಿಯ ಮೇಲೆ ಬೈಕ್ ಸವಾರ ಹಲ್ಲೆ ನಡೆಸಿ ಕಾರಿನ ಗಾಜು ಧ್ವಂಸಗೊಳಿಸಿರುವುದು ನೋಡಿದರೆ ಕೋಲ್ಕತ್ತಾದಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ ಎನ್ನುವ ಭಯ ಕಾಡಲಾರಂಭಿಸಿದೆ.
ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೀಡಿಯೊದಲ್ಲಿ ಬೈಕ್ ಸವಾರ ನಟಿಯ ಕಾರಿನ ಮುಂದೆ ಬೈಕ್ ನಿಲ್ಲಿಸಿ ಕಾರಿನ ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದಾನೆ ಇದರಿಂದ ಭಯಗೊಂಡ ನಟಿ ಬಾಗಿಲು ತೆರೆಯಲು ನಿರಾಕರಿಸಿದ್ದಾಳೆ ಇದಕ್ಕೆ ಪ್ರತಿಯಾಗಿ ಬೈಕ್ ಸವಾರ ನಟಿಯ ಕಾರಿನ ಗ್ಲಾಸ್ ಒಡೆದು ಹಲ್ಲೆ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ಪೊಲೀಸರು ಸ್ಥಳಕ್ಕೆ ಬಂದು ತನ್ನನ್ನು ರಕ್ಷಿಸಿದ್ದು ಬೈಕ್ ಸವಾರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸಿಎಂ ಮಮತಾ ವಿರುದ್ಧ ಬಿಜೆಪಿ ವಾಗ್ದಾಳಿ
ಒಂದೆಡೆ ಕಿರಿಯ ವೈದ್ಯೆ ಅತ್ಯಾಚಾರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ, ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು ಇದೀಗ ಬೆಂಗಾಲಿ ನಟಿಯ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮಮತಾ ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿ ಕೋಲ್ಕತ್ತಾದಲ್ಲಿ ಮಹಿಳೆಯರಿಗೆ ಎಲ್ಲಿದೆ ರಕ್ಷಣೆ ಎಂದು ಬರೆದುಕೊಂಡಿದ್ದಾರೆ.