ನವದೆಹಲಿ: ನಿರೀಕ್ಷಿತ ಬೆಳವಣಿಗೆಯಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಮುಕುಲ್ ರಾಯ್ ಶುಕ್ರವಾರ(ಜೂನ್ 11) ಮರಳಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಪಕ್ಷದ ಕೇಂದ್ರ ಕಚೇರಿಯಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅಭಿಷೇಕ್ ಬ್ಯಾನರ್ಜಿ ಭರ್ಜರಿಯಾಗಿ ಪಕ್ಷಕ್ಕೆ ಸ್ವಾಗತಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:HDK ಬಗ್ಗೆ ಜಮೀರ್ ಹೇಳಿಕೆ ವೈಯಕ್ತಿಕ, ಪಕ್ಷಕ್ಕೂ ಹೇಳಿಕೆಗೂ ಸಂಬಂಧವಿಲ್ಲ; ಡಿಕೆಶಿ
“ಮಮತಾ ಬ್ಯಾನರ್ಜಿ ಪಶ್ಚಿಮಬಂಗಾಳದ ನಾಯಕಿಯೂ ಹೌದು, ಈ ದೇಶದ ನಾಯಕಿ ಕೂಡಾ ಆಗಿರುವುದಾಗಿ ಹೊಗಳಿದ ರಾಯ್, ನನ್ನ ಜೀವನದಲ್ಲಿ ಮತ್ತೆ ಹಳೆ ಮುಖಗಳನ್ನು ಕಾಣುತ್ತಿರುವುದು ತುಂಬಾ ಖುಷಿಯ ವಿಚಾರವಾಗಿದೆ ಎಂದರು.
2017ರಲ್ಲಿ ಮುಕುಲ್ ರಾಯ್ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ನಂತರ, ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಯ್ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
ಮಮತಾ ಬ್ಯಾನರ್ಜಿ ಆಪ್ತರಾಗಿದ್ದ ಸುವೇಂದು ಅಧಿಕಾರಿ ಸೇರಿದಂತೆ ಹಲವು ಸಚಿವರು, ಶಾಸಕರು ಬಿಜೆಪಿ ಸೇರಿದ್ದರು. ಆದರೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ನಿರೀಕ್ಷಿತ ಸ್ಥಾನ ಪಡೆಯಲಿಲ್ಲ, ಪ್ರಚಂಡ ಜಯಭೇರಿ ಬಾರಿಸುವ ಮೂಲಕ ಮಮತಾ ಬ್ಯಾನರ್ಜಿ ಮೂರನೇ ಬಾರಿ ಪಶ್ಚಿಮಬಂಗಾಳದ ಅಧಿಕಾರದ ಗದ್ದುಗೆ ಏರಿದ್ದರು. ಇದೀಗ ಬಿಜೆಪಿ ಸೇರ್ಪಡೆಯಾಗಿದ್ದ ಟಿಎಂಸಿ ಮುಖಂಡರು ಮತ್ತೆ ಟಿಎಂಸಿ ಕದ ತಟ್ಟುತ್ತಿರುವುದಾಗಿ ವರದಿ ತಿಳಿಸಿದೆ.