ಕೋಲ್ಕತಾ:ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ತೃಣಮೂಲ ಕಾಂಗ್ರೆಸ್ ಹಿರಿಯ ಮುಖಂಡ ಸುಬ್ರತಾ ಮುಖರ್ಜಿ ಸಾವನ್ನಪ್ಪಿರುವ ಘಟನೆ ಕೋಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಇದನ್ನೂ ಓದಿ:ಹೊರಬಂತು ‘ಒಂಬತ್ತನೇ ದಿಕ್ಕು’ ಟ್ರೇಲರ್: ಹೊಸ ದಿಕ್ಕಿನತ್ತ ಯೋಗಿ ಚಿತ್ತ
ಸುಬ್ರತಾ ಮುಖರ್ಜಿ (75ವರ್ಷ) ರಾಜ್ಯ ಪಂಚಾಯತ್ ಖಾತೆ ಸಚಿವರಾಗಿದ್ದರು. ಮುಖರ್ಜಿ ಪತ್ನಿ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ. ಪಂಚಾಯತ್ ಖಾತೆಯಲ್ಲದೇ ಇತರ ಮೂರು ಇಲಾಖೆಗಳ ಉಸ್ತುವಾರಿ ಕೂಡಾ ಮುಖರ್ಜಿ ನಿರ್ವಹಿಸುತ್ತಿದ್ದರು ಎಂದು ವರದಿ ಹೇಳಿದೆ.
ಇತ್ತೀಚೆಗಷ್ಟೇ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದ ಮುಖರ್ಜಿ ಅವರು ಗುರುವಾರ ರಾತ್ರಿ 9.22ಕ್ಕೆ ತೀವ್ರ ಹೃದಯ ಸ್ತಂಭನದಿಂದ ನಿಧನರಾಗಿರುವುದಾಗಿ ರಾಜ್ಯ ಸಚಿವ ಫಿರ್ಹಾದ್ ಹಕೀಮ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಳಿಘಾಟ್ ನಿವಾಸದಲ್ಲಿ ಕಾಳಿ ಪೂಜೆ ನೆರವೇರಿಸುತ್ತಿದ್ದ ಸಂದರ್ಭದಲ್ಲಿ ಮುಖರ್ಜಿ ನಿಧನದ ಸುದ್ದಿ ಕೇಳಿ ಕೂಡಲೇ ಎಸ್ ಎಸ್ ಕೆಎಂ ಆಸ್ಪತ್ರೆಗೆ ಭೇಟಿ ನೀಡಿದ್ದರು. ನನಗೆ ಮುಖರ್ಜಿ ಸಾವನ್ನು ನಂಬಲು ಸಾಧ್ಯವಾಗುತ್ತಿಲ್ಲ, ಅವರೊಬ್ಬ ಪಕ್ಷದ ನಿಷ್ಠಾವಂತ ಮುಖಂಡ. ನನಗೆ ವೈಯಕ್ತಿಕವಾಗಿ ತುಂಬಲಾರದ ನಷ್ಟ ಎಂದು ಮಮತಾ ಬ್ಯಾನರ್ಜಿ ಈ ಸಂದರ್ಭದಲ್ಲಿ ಹೇಳಿದರು.