ಕೋಲ್ಕತ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ಆರೋಪಿಸಿ ಭಾರತೀಯ ಜನತಾ ಪಕ್ಷ ಮಂಗಳವಾರ ಪ್ರತಿಭಟನಾ ಜಾಥಾ ನಡೆಸಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ʼಬಾಹುಬಲಿʼ,ʼಆರ್.ಆರ್.ಆರ್ʼ ಗಿಂತ ಭಿನ್ನವಾಗಿರಲಿದೆ ರಾಜಮೌಳಿ ಮುಂದಿನ ಚಿತ್ರ
ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಕೇವಲ ಬಿಜೆಪಿ ಕಾರ್ಯಕರ್ತರನ್ನು ಮತ್ತು ಬೆಂಬಲಿಗರನ್ನು ಬಂಧಿಸುತ್ತಿರುವುದಾಗಿ ಬಿಜೆಪಿ ದೂರಿದೆ. ಪನಾಗಢ್ ರೈಲ್ವೆ ನಿಲ್ದಾಣದಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.
ಬಿಜೆಪಿಯ ಬೃಹತ್ ಜಾಥಾದಲ್ಲಿ ಪಾಲ್ಗೊಳ್ಳಲು ನೂರಾರು ಕಾರ್ಯಕರ್ತರು ರೈಲಿನಲ್ಲಿ ಆಗಮಿಸುತ್ತಿದ್ದು, ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆ ಹಿಡಿದಿರುವುದಾಗಿ ವರದಿ ತಿಳಿಸಿದೆ.
ರಾಣಿಗಂಜ್ ರೈಲ್ವೆ ನಿಲ್ದಾಣದಲ್ಲಿ ಕೋಲ್ಕತದಲ್ಲಿ ನಡೆಯಲಿರುವ ಬಿಜೆಪಿ ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಕಾರ್ಯಕರ್ತರನ್ನು ತಡೆದಾಗ, ಈ ಸಂದರ್ಭದಲ್ಲಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ದುರ್ಗಾಪುರ್ ರೈಲ್ವೆ ನಿಲ್ದಾಣದಲ್ಲಿ ಸುಮಾರು 20 ಮಂದಿ ಬಿಜೆಪಿ ಕಾರ್ಯಕರ್ತರನ್ನು ತಡೆದು ನಿಲ್ಲಿಸಿದ್ದಾರೆ. ನಾನು ಕೂಡಾ ದುರ್ಗಾಪುರದತ್ತ ತೆರಳುತ್ತಿದ್ದು, ಅವರನ್ನು ಬದಲಿ ಮಾರ್ಗದಲ್ಲಿ ಕರೆತರುವುದಾಗಿ ಬಿಜೆಪಿ ಮುಖಂಡ ಅಭಿಜಿತ್ ದತ್ತ ತಿಳಿಸಿದ್ದಾರೆ.