ಕೋಲ್ಕತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಮಂಗಳವಾರ (ಸೆ.03) ವಿಧಾನಸಭೆ ಕಲಾಪದಲ್ಲಿ ಅತ್ಯಾ*ಚಾರ ತಡೆ (ಅಪರಾಜಿತಾ) ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಅಪ್ರಾಪ್ತೆಯರ ವಿರುದ್ಧ ಲೈಂಗಿಕ ಕಿರುಕುಳ, ಸಾಮೂಹಿಕ ಅತ್ಯಾ*ಚಾರ, ಅತ್ಯಾ*ಚಾರದಂತಹ ಪ್ರಕರಣದ ಕಾಯ್ದೆಗೆ ತಿದ್ದುಪಡಿ ತಂದ ಮೊದಲ ರಾಜ್ಯ ಪಶ್ಚಿಮಬಂಗಾಳವಾಗಿದೆ.
ಅಂಗೀಕೃತ ಮಸೂದೆಯನ್ನು ಇನ್ನು ಪಶ್ಚಿಮಬಂಗಾಳ ರಾಜ್ಯಪಾಲ ಸಿವಿ ಆನಂದ್ ಬೋಸ್ ಅವರಿಗೆ ಕಳುಹಿಸಲಾಗುವುದು, ನಂತರ ಅದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತಕ್ಕಾಗಿ ಕಳುಹಿಸಲಾಗುತ್ತದೆ.
ಈ ಮಸೂದೆ ಕಳೆದ ತಿಂಗಳು ಸರ್ಕಾರಿ ಆಡಳಿತದ ಆರ್ ಜಿ ಕರ್ ಮೆಡಿಕಲ್ ಸೆಂಟರ್ ಮತ್ತು ಆಸ್ಪತ್ರೆಯಲ್ಲಿ ಅತ್ಯಾ*ಚಾರಕ್ಕೊಳಗಾಗಿ ಕೊ*ಲೆಯಾದ ಟ್ರೈನಿ ವೈದ್ಯೆಗೆ ಗೌರವಾರ್ಥವಾಗಿದ್ದು, ಇದೊಂದು ಐತಿಹಾಸಿಕ ಹಾಗೂ ಮಾದರಿಯಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಬಣ್ಣಿಸಿರುವುದಾಗಿ ವರದಿ ವಿವರಿಸಿದೆ.
ಈ ತಿದ್ದುಪಡಿ ಮಸೂದೆ, “ಅಪರಾಜಿತಾ ಮಹಿಳಾ ಮತ್ತು ಮಕ್ಕಳ ಮಸೂದೆ(ಪಶ್ಚಿಮಬಂಗಾಳ ಕ್ರಿಮಿನಲ್ ಕಾಯ್ದೆ ಮತ್ತು ತಿದ್ದುಪಡಿ) 2024ರ ಪ್ರಕಾರ, ಒಂದು ವೇಳೆ ಅತ್ಯಾ*ಚಾರ ಪ್ರಕರಣದಲ್ಲಿ ವ್ಯಕ್ತಿಯ ಮೇಲಿನ ಆರೋಪ ಸಾಬೀತಾಗಿ ಅಪರಾಧಿ ಎಂದಾದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲು ಅವಕಾಶವಿದೆ.