Advertisement

ಜೀತ ವಿಮುಕ್ತರಿಗೆ ಅನೂಕೂಲ ಕಲ್ಪಿಸಿ

09:38 PM Mar 15, 2020 | Lakshmi GovindaRaj |

ಚಾಮರಾಜನಗರ: ತಾಲೂಕಿನ ಜೀತ ವಿಮುಕ್ತರಿಗೆ ಮಂಜೂರಾಗಿರುವ ಭೂಮಿಯೇ ಇಲ್ಲ. ಈ ಕುರಿತು ಜಿಲ್ಲಾ ಮಟ್ಟದ ಸಮಿತಿಗೆ ವರದಿ ನೀಡಲಾಗಿದೆ ಎಂದು ತಹಶೀಲ್ದಾರ್‌ ಮಹೇಶ್‌ ತಿಳಿಸಿದರು. ನಗರದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.

Advertisement

ತಾಲೂಕಿನ 205 ಜೀತವಿಮುಕ್ತರಿಗೆ ನೀಡಿದ ಭೂಮಿ ಅಳತೆ ಮಾಡಲು ಹೋದಾಗ ಭೂಮಿ ಇಲ್ಲದಿರುವುದು ನನ್ನ ಗಮನಕ್ಕೆ ಬಂತು. ಈ ಕುರಿತು ವರದಿ ನೀಡಿದ್ದು, ಅವರಿಗೆ ಪರ್ಯಾಯವಾಗಿ ಭೂಮಿ ನೀಡಬೇಕೆ ಅಥವಾ ಪರಿಹಾರ ನೀಡಬೇಕೇ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದರು.

ಪರಭಾರೆಗೆ ಅವಕಾಶ ಇಲ್ಲ: ಇದಕ್ಕೂ ಮೊದಲು ಈ ಕುರಿತು ಪ್ರಸ್ತಾಪಿಸಿದ ದಲಿತ ಮುಖಂಡ ಪಿ.ಸಂಘಸೇನ, ಚಿಕ್ಕಮೂಡಹಳ್ಳಿ ಗ್ರಾಮದಲ್ಲಿ 1969ರಲ್ಲಿ ಎಸ್‌ಸಿ, ಎಸ್‌ಟಿ ಗಳಿಗೆ 500 ಎಕರೆ ಜಮೀನು ವಿತರಿಸಿ ಸಾಮೂಹಿಕವಾಗಿ ಕೃಷಿ ಮಾಡಲಾಗುತ್ತಿತ್ತು. ಕಂದಾಯ ಇಲಾಖೆಯ ಅಧಿಕಾರಿಗಳೇ ಭೂಗಳ್ಳ ಪರವಾಗಿ ನಿಂತು ಬೇರೆಯವರಿಗೆ ಪರಭಾರೆ ಮಾಡಿದ್ದಾರೆ ಎಂದು ಸಭೆ ಗಮನಕ್ಕೆ ತಂದರು. ಪರಭಾರೆಗೆ ಅವಕಾಶ ಇಲ್ಲ.

ಈ ಬಗ್ಗೆ ಲಿಖೀತ ದೂರು ಕೊಡಿ ಕ್ರಮಕೈಗೊಳ್ಳುತ್ತೇನೆ ಎಂದು ತಹಶೀಲ್ದಾರ್‌ ಮಹೇಶ್‌ ತಿಳಿಸಿದರು. ಇದೇ ವಿಚಾರದ ಬಗ್ಗೆ ಮಾತನಾಡಿದ ಮುಖಂಡ ಅರಕಲವಾಡಿ ನಾಗೇಂದ್ರ ಅವರು, 1987ರಲ್ಲಿ ಜೀತ ವಿಮುಕ್ತರಿಗೆ ಮಂಜೂರಾಗಿದ್ದ ಭೂಮಿ ಇಲ್ಲ ಎನ್ನುತ್ತಿದ್ದೀರಿ. ಆದರೆ, ಈ ಭೂಮಿಯಿದ್ದು, ಬೇರೆಯವರ ಪಾಲಾಗಿದೆಯೇ ಅಥವಾ ಇನ್ನೇನಾಗಿದೆ ಎಂಬುದರ ಬಗ್ಗೆ ಮಾಹಿತಿ ಕೊಡಿ ಎಂದು ಒತ್ತಾಯಿಸಿದರು.

ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ: ಮಂಜೂರಾಗಿರುವ ಭೂಮಿಯೇ ಇಲ್ಲ ಎಂದು ಈಗಾಗಲೇ ಜಿಲ್ಲಾ ಸಮಿತಿಗೆ ವರದಿ ನೀಡಿದ್ದೇವೆ. ಅಲ್ಲಿ ಏನು ನಿರ್ಧಾರ ತೆಗೆದುಕೊಳ್ಳಲಾಗುತ್ತದೋ ನೋಡಬೇಕಾಗಿದೆ ಎಂದರು. ಭೂಮಿ ಹಂಚಿಕೆ ವಿಚಾರವು 30 ವರ್ಷಗಳಿಂದ ಚರ್ಚೆಯಾಗುತ್ತಿದೆ. ಸಮಸ್ಯೆ ಮಾತ್ರ ಪರಿಹಾರವಾಗಲಿಲ್ಲ. ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಇದೊಂದು ದೊಡ್ಡ ಅಪಮಾನದ ಸಂಗತಿಯಾಗಿದೆ ಎಂದು ಅರಕಲವಾಡಿ ನಾಗೇಂದ್ರ ಹೇಳಿದರು.

Advertisement

ಕೊಳವೆ ಬಾವಿಗೆ ವಿದ್ಯುತ್‌ ಸಂಪರ್ಕವಿಲ್ಲ: ಸಣ್ಣ ನೀರಾವರಿ ಇಲಾಖೆಯಿಂದ 2016-17ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗೆ ಇನ್ನು ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಅಧಿಕಾರಿಗಳಿಗೆ ಇಷ್ಟೊಂದು ನಿರ್ಲಕ್ಷ್ಯವೇಕೆ ಎಂದು ಮುಖಂಡರು ಪ್ರಶ್ನಿಸಿದರು. ಈ ಕುರಿತು ಉತ್ತರಿಸಿದ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ ರಾಜಶೇಖರ್‌, ನಾವು ಸೆಸ್ಕಾಂಗೆ ಸಂಪರ್ಕ ಕೋರಿ ಹಣ ನೀಡಿರೂ ಅವರು ಕಲ್ಪಿಸಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಸೆಸ್ಕಾಂ ಇಂಜಿನಿಯರ್‌ ಮಾತನಾಡಿ, ಫ‌ಲಾನುಭವಿಗಳ ಹೆಸರು ಅದಲು ಬದಲಾದ ಕಾರಣ ವಿಳಂಬವಾಗಿತ್ತು. ಈಗ ಸರಿಪಡಿಸಲಾಗಿದ್ದು, ಸದ್ಯವೇ ಸಂಪರ್ಕ ನೀಡಲಾಗುವುದು ಎಂದರು. 2019-18ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯ ಫ‌ಲಾನುಭವಿಗಳ ಪಟ್ಟಿ ಏನಾಯಿತು ಎಂಬ ಮುಖಂಡ ಸಿ.ಎಂ ಶಿವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ರಾಜಶೇಖರ್‌ ಅವರು, 2017-18ರ ನಂತರ ನಮ್ಮಗೆ ಕೊಳವೆ ಬಾವಿ ಕೊರೆಸಲು ಅನುದಾನ ನೀಡುತ್ತಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಹಿಂದಿನ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅವರಿಂದ ಹಣ ದುರುಪಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಉದ್ಯೋಗಿನಿ ಯೋಜನಗೆ ಫ‌ಲಾನುಭವಿಗಳ ಆಯ್ಕೆಯಲ್ಲಿ ಪರಿಶಿಷ್ಟ ಜಾತಿಗೆ ಅನ್ಯಾಯ ಮಾಡಿರುವುದು ಹಾಗೂ ಇತರೆ ವಿಷಯಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ತಾಪಂ ಇಒ ಪ್ರೇಮ ಕುಮಾರ್‌, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಮಸ್ವಾಮಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next