Advertisement

ಬಿಜೆಪಿಗೆ ಲಾಭ, ಕಾಂಗ್ರೆಸ್‌ಗೆ ನಷ್ಟ?

06:42 AM Aug 23, 2017 | Team Udayavani |

ಉತ್ತರ ಪ್ರದೇಶ ಚುನಾವಣೆಯಲ್ಲೇ ತ್ರಿವಳಿ ತಲಾಖ್‌ ಕುರಿತ ಚರ್ಚೆ ಬಿಜೆಪಿಗೆ ಲಾಭ ತಂದುಕೊಟ್ಟಿತ್ತು. ಕಳೆದ ಅಕ್ಟೋಬರ್‌ನಲ್ಲೇ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತ್ರಿವಳಿ ತಲಾಖ್‌ ಅನ್ನು ವಿರೋಧಿಸಿ ಅಫಿಡವಿಟ್‌ ಹಾಕಿತ್ತು. ತ್ರಿವಳಿ ತಲಾಖ್‌ನಿಂದಾಗಿ ಮುಸ್ಲಿಂ ಸಮುದಾಯದ ಮಹಿಳೆಯರು ಅನುಭವಿಸುತ್ತಿರುವ ಸಂಕಷ್ಟಗಳು ಮತ್ತು ಆಕೆಯ ಗೌರವದ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಮೂಲಕ ಆ ಧರ್ಮದ ಮಹಿಳೆಯರ ಮತ ಸೆಳೆಯುವಲ್ಲಿಯೂ ಯಶಸ್ವಿಯಾಗಿದ್ದರು ಎಂಬ ಮಾತುಗಳಿವೆ. ಇದಕ್ಕೆ ಪೂರಕವಾಗಿ ಯೋಗಿ ಆದಿತ್ಯನಾಥ್‌ ಗೆದ್ದ ಮೇಲೆ ತಮಗೆ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಬೆಂಬಲ ಸಿಕ್ಕಿತ್ತು ಎಂದಿದ್ದರು. ಮೇಲಿನ ಬೆಳವಣಿಗೆಗಳು ಉತ್ತರ ಪ್ರದೇಶ ಚುನಾವಣೆಗೂ ಮೊದಲಿನವು. ಆದರೆ ಈಗ ಸುಪ್ರೀಂಕೋರ್ಟ್‌ ತ್ರಿವಳಿ ತಲಾಖ್‌ ಇಸ್ಲಾಂ ಧರ್ಮದ ವಿರುದ್ಧವಾಗಿದೆ ಎಂದು ಹೇಳಿದೆ. ಇದು ಕೋರ್ಟ್‌ ತೀರ್ಪಾಗಿದ್ದು, ಸರ್ಕಾರದ ಸಾಧನೆಯಲ್ಲದಿದ್ದರೂ, ನಮ್ಮ ವಾದವೇ ಕೋರ್ಟ್‌ನಲ್ಲಿ ಗೆದ್ದಿತಲ್ಲ ಎಂದು ಬಿಜೆಪಿ ಹೇಳಿಬಿಡಬಹುದು. ರಾಜಕೀಯ ವಿಶ್ಲೇಷಕರ ಪ್ರಕಾರ, ಸದ್ಯದಲ್ಲೇ ನಡೆಯಲಿರುವ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಈ ತೀರ್ಪು ಬಿಜೆಪಿಗೆ ಲಾಭ ತಂದುಕೊಡಲಿದೆ.  

Advertisement

“ಗೋದ್ರೋತ್ತರ ಗಲಭೆ ಬಳಿಕ ಗುಜರಾತ್‌ನಲ್ಲಿ ಕೋಮುಗಲಭೆಗಳ ಸಂಖ್ಯೆ ಕಡಿಮೆಯಾಗಿದೆ. ಇದೇ ಗುಜರಾತ್‌ನಲ್ಲಿ ಕಾಂಗ್ರೆಸ್‌ ಆಳ್ವಿಕೆ ಮಾಡುತ್ತಿದ್ದಾಗ ಆರು ತಿಂಗಳಿಗೊಮ್ಮೆ ಕೋಮು ಗಲಭೆಗಳಾಗುತ್ತಲೇ ಇದ್ದವು. ನಾವು ಗುಜರಾತ್‌ನಲ್ಲಿರುವ ಎಲ್ಲ ಸಮುದಾಯಗಳಿಗಾಗಿ ಅಧಿಕಾರ ನಡೆಸುತ್ತಿದ್ದೇವೆ’ ಎಂದು ಗುಜರಾತ್‌ನ ಸಿಎಂ ವಿಜಯ್‌ ರೂಪಾನಿ ಹೇಳಿದ್ದರು. ಹೀಗಾಗಿ, ಸದ್ಯಕ್ಕೆ ಗುಜರಾತ್‌ನಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತರ ತುಷ್ಠಿàಕರಣ ಮಾಡಿಕೊಂಡು ಹೋಗುವುದು ಅಸಾಧ್ಯ. ಅಲ್ಲದೆ ಗೋದ್ರೋತ್ತರ ಗಲಭೆ ಬಗ್ಗೆ ಹೇಳಿದರೆ, ಜನ ಈಗ ಕೇಳುವುದಿಲ್ಲವೆಂಬುದೂ ಕಾಂಗ್ರೆಸ್‌ ನಾಯಕರಿಗೆ ಗೊತ್ತಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ. ಇಲ್ಲೂ ಬಿಜೆಪಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಾನೂನು ಸುವ್ಯವಸ್ಥೆ ಮುಂದಿಟ್ಟುಕೊಂಡೇ ಚುನಾವಣೆಗೆ ಹೋಗಲಿದೆ. ಇದೆಲ್ಲಾ ಹಾಗಿರಲಿ, ತ್ರಿವಳಿ ತಲಾಖ್‌ ವಿಚಾರದಲ್ಲಿ ಕಾಂಗ್ರೆಸ್‌ಗೆ ಈಗಾಗಲೇ ಹೊಡೆತ ಬಿದ್ದಾಗಿದೆ. ಹಿರಿಯ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಅವರೇ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪರವಾಗಿ ಸುಪ್ರೀಂಕೋರ್ಟ್‌ ನಲ್ಲಿ ವಾದ ಮಂಡಿಸಿದ್ದರು. ಸಿಬಲ್‌ ಜತೆಯಲ್ಲಿ ಅಮಿಕಸ್‌ ಕ್ಯೂರಿಯಾಗಿದ್ದ ಸಲ್ಮಾನ್‌ ಖುರ್ಷಿದ್‌ ಕೂಡ ತ್ರಿವಳಿ ತಲಾಖ್‌ ನಿಷೇಧಕ್ಕೆ ತೀವ್ರವಾಗಿ ವಿರೋಧಿಸಿದ್ದರು. 

ಆದರೆ, ದೇಶದಲ್ಲಿ ಮುಸ್ಲಿಂ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದರೆ, ಸ್ವತಃ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೇ ಬದಲಾವಣೆಗೆ ಸಿದ್ಧವೆಂಬ ಉತ್ತರ ನೀಡಿದೆ. ಹೀಗಾಗಿ ಕೋರ್ಟ್‌ನಲ್ಲಿ ಕಾಂಗ್ರೆಸ್‌ ನಾಯಕರೆನಿಸಿಕೊಂಡವರೇ ವಿರೋಧಿಸಿದ್ದು, ಈ ಅಂಶವನ್ನೂ ಬಿಜೆಪಿ ಲಾಭಕ್ಕಾಗಿ ಬಳಸಿಕೊಳ್ಳಬಹುದು ಎನ್ನಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next