Advertisement

ಮನೆಮದ್ದಾಗಿ ತುಳಸಿಯ ಬಳಕೆ

02:39 PM Jul 17, 2021 | Team Udayavani |

ಆರೋಗ್ಯವೇ ಭಾಗ್ಯ ಎಂಬ ಸಾಲುಗಳು ಹೇಳುವಂತೆ ನಮ್ಮ ದೇಹದ ಚೆನ್ನಾಗಿದ್ದರೆ ಅದು ನಮ್ಮ ಬದುಕಿನ ಭಾಗ್ಯವೇ ಸರಿ. ಉತ್ತಮ ಆರೋಗ್ಯವನ್ನು ಹೊಂದಿರುವವರು ತಮ್ಮ ಬದುಕಿನಲ್ಲಿ ಯಾವದೇ ರೀತಿಯ ಸಮಸ್ಯೆಗಳು ಎದುರಾದರೂ ಅದನ್ನು ಅತ್ಯಂತ ಸುಲಭವಾಗಿ ನಿವಾರಿಸುತ್ತಾರೆ. ಪುರಾತನ ಕಾಲದಿಂದಲೂ ಮನುಷ್ಯ ತನ್ನ ಆರೋಗ್ಯಕ್ಕೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡುತ್ತಾ ಬಂದಿದ್ದು, ನಮ್ಮ ಸುತ್ತಮುತ್ತಲಿನ ಸಸ್ಯ ಸಂಕುಲ ಇದಕ್ಕೆ ತನ್ನದೆ ಆದ ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿದೆ.

Advertisement

ಸಾಮಾನ್ಯವಾಗಿ ಪೂಜಾ ಕೈಂಕರ್ಯಗಳಲ್ಲಿ ಅತೀ ಹೆಚ್ಚಾಗಿ ಬಳಸುವ, ದೇವತೆಗಳಿಗೆ ಅತ್ಯಂತ ಪ್ರಿಯವಾದ ತುಳಸಿ ಮನುಷ್ಯನ ಹಲವಾರು ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ತುಳಸಿಯನ್ನು ನಾನಾ ವಿಧವಾದ ಔಷಧಿಗಳಲ್ಲಿ ಬಳಸಲಾಗುತ್ತಿದ್ದು, ಇದು ಮನುಕುಲದ ಆರೋಗ್ಯಕ್ಕೆ ಆದಾರವಾಗಿ ತನ್ನನ್ನು ತಾನು ಗುರುತಿಸಿಕೊಂಡಿದೆ.

ತುಳಸಿಯ ಉಪಯೋಗಗಳು
ಜ್ವರ ನಿವಾರಕ
ಒಂದು ಹಿಡಿಯಷ್ಟು ತುಳಸಿಯನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಹೀಗೆ ಕುದಿಸಿ ಅದು ಅರ್ದ ಲೋಟದಷ್ಟು ಆದ ಮೇಲೆ ಅದಕ್ಕೆ ಬೆಲ್ಲ ಬೆರೆಸಿ ಪ್ರತಿ ಬಾರಿ ನಾಲ್ಕು ಚಮಚದಂತೆ ದಿನಕ್ಕೆ ಮೂರು ಬಾರಿ ಕುಡಿದರೆ ಜ್ವರ ಗುಣಮುಖವಾಗುತ್ತದೆ. ಮಕ್ಕಳಿಗೆ ಜ್ವರ ಬಂದಿದ್ದರೆ ಒಂದು ಸಲಕ್ಕೆ ಎರಡು ಚಮಚ ಕುಡಿಸಿದರೆ ಸಾಕಾಗುತ್ತದೆ.

ಗಂಟಲು ನೋವು ನಿವಾರಕ
ತುಳಸಿ ಎಲೆ ಮತ್ತು ದೊಡ್ಡ ಪತ್ರೆ ಎಲೆಗಳನ್ನು ಜಜ್ಜಿ ಅರ್ಧ ಲೀಟರ್ ನೀರಿನಲ್ಲಿ ಬೆರೆಸಿ ಕುದಿಸಬೇಕು.ಈ ನೀರು ಅರ್ಧಕ್ಕಿಳಿದ ನಂತರ ಸ್ವಲ್ಪ ಉಪ್ಪು ಬೆರೆಸಿ ದಿನಕ್ಕೆ ಮೂರು ಬಾರಿ ಊಟಕ್ಕೆ ಮುನ್ನ ಕುಡಿದರೆ ಗಂಟಲು ನೋವು ಅತ್ಯಂತ ಬೇಗ ನಿವಾರಣೆಯಾಗುತ್ತದೆ.

ಹೊಟ್ಟೆ ನೋವು ಉಪಶಮನ
ತುಳಸಿ ರಸಕ್ಕೆ ಹಸಿ ಶುಂಠಿ ಸೇರಿಸಿ ಬಿಸಿ ಮಾಡಿ ನಾಲ್ಕು ಚಮಚದಂತೆ ದಿನಕ್ಕೆ ಎರಡು ಬಾರಿ ಸೇವನೆ ಮಾಡುವುದರಿಂದಾಗಿ ಹೊಟ್ಟೆ ನೋವು ಗುಣಮುಖವಾಗುತ್ತದೆ.

Advertisement

ಅಜೀರ್ಣ ಸಮಸ್ಯೆ
ತುಳಸಿ ಎಲೆಯನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಬೆರೆಸಿಟ್ಟು ಮೂರರಿಂದ ನಾಲ್ಕು ಗಂಟೆಯ ಬಳಿಕ ಸೇವಿಸಿದರೆ ಅಜೀರ್ಣದ ಸಮಸ್ಯೆ ಬಹುಬೇಗ ನಿವಾರಣೆಯಾಗುತ್ತದೆ.

ಬಾಯಿ ದುರ್ನಾತ ನಿವಾರಕ
ತುಳಸಿ ಎಲೆಯನ್ನು ಬೆಳಿಗ್ಗೆ ಹಾಗೂ ರಾತ್ರಿ ಆಹಾರದ ನಂತರ ಸೇವನೆ ಮಾಡುವುದರಿಂದ ಬಾಯಿಯಿಂದ ಬರುವ ದುರ್ನಾತ ನಿವಾರಣೆಯಾಗುತ್ತದೆ.

ಕೀಲುನೋವಿಗೆ ರಾಮಬಾಣ
ಸುಮಾರು 20 ರಿಂದ 30 ತುಳಸಿ ಎಲೆಗಳನ್ನು ಮತ್ತು 5 ಕಾಳಮೆಣಸನ್ನು ಸೇರಿಸಿ ಅರೆದು ಈ ಮಿಶ್ರಣಕ್ಕೆ ಒಂದು ಚಮಚ ತುಪ್ಪ ಸೇರಿಸಿ ಬೆಳಿಗ್ಗೆ ಮತ್ತು ರಾತ್ರಿ ವೇಳೆ ಸೇವನೆ ಮಾಡುವುದರಿಂದಾಗಿ ಕೀಲುನೋವು ನಿವಾರಣೆಯಾಗುತ್ತದೆ.

ಉಬ್ಬಸ ಉಪಶಮನ
ತುಳಸಿ ಎಲೆಯನ್ನು ಜಜ್ಜಿ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಕುದಿಸಿ, ಅದನ್ನು ಆಗಾಗ ಕುಡಿಯುತ್ತಿದ್ದರೆ ಉಬ್ಬಸದ ಸಮಸ್ಯೆ ಪರಿಹಾರವಾಗುತ್ತದೆ.

ಮೂಲವ್ಯಾಧಿ ನಿವಾರಕ
ಸುಮಾರು 10 ಗ್ರಾಂ ತುಳಸಿ ಬೀಜದ ಪುಡಿಗೆ ಒಂದು ಚಮಚ ಬೆಣ್ಣೆ, ಸ್ಪಲ್ಪ ಬೆಲ್ಲವನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಸೇವನೆ ಮಾಡುವುದರಿಂದ ಮೂಲವ್ಯಾಧಿ ಗುಣಮುಖವಾಗುತ್ತದೆ.

ಹುಳುಕಡ್ಡಿ ನಿವಾರಕ
ತುಳಸಿ ಮತ್ತು ಬ್ರಾಹ್ಮಿ ಎಲೆಗಳನ್ನು ಸೇರಿಸಿ ಅರೆದು ಅದನ್ನು ಹುಳುಕಡ್ಡಿ ಇರುವ ಜಾಗಕ್ಕೆ ಲೇಪನ ಮಾಡುವುದರಿಂದ ಸಮಸ್ಯೆ ಬಹುಬೇಗ ನಿವಾರಣೆಯಾಗುತ್ತದೆ. ಅಲ್ಲದೆ ತುಳಸಿ ಎಲೆಯನ್ನು ಅರೆದು ಅದಕ್ಕೆ ಸ್ಪಲ್ಪ ಉಪ್ಪನ್ನು ಸೇರಿಸಿ ಹುಳುಕಡ್ಡಿ ಇರುವ ಜಾಗಕ್ಕೆ ಲೇಪನ ಮಾಡುವುದರಿಂದಲೂ ಸಮಸ್ಯೆ ನಿವಾರಣೆಯಾಗುತ್ತದೆ.

*ಆದರ್ಶ

Advertisement

Udayavani is now on Telegram. Click here to join our channel and stay updated with the latest news.

Next