Advertisement

ಶಿವಾನುಭವದಿಂದ ಜನಮನ ತಿದ್ದುವ ಕಾಯಕ

02:51 PM Apr 27, 2019 | Team Udayavani |

ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಮಠದಲ್ಲಿ ಕಳೆದ 45 ವರ್ಷಗಳಿಂದ ಆಯೋಜಿಸುತ್ತಿರುವ ಶಿವಾನುಭವ ಕಾರ್ಯಕ್ರಮ ಜನಮಾನಸ ತಿದ್ದುವ ಕೆಲಸ ಮಾಡುತ್ತಿದೆ. ಲಿಂ| ಡಾ| ತೋಂಟದ ಸಿದ್ಧಲಿಂಗ ಶ್ರೀಗಳ ಮಾರ್ಗದರ್ಶನದಲ್ಲಿ ಧರ್ಮ, ಸಾಹಿತ್ಯ, ಸಂಸ್ಕೃತಿ ನೆಲೆಗಟ್ಟಿನಲ್ಲಿ ಸಮಾಜಮುಖೀಯನ್ನಾಗಿಸಿದೆ ಎಂದು ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

Advertisement

ನಗರದ ತೋಂಟದಾರ್ಯ ಮಠದಲ್ಲಿ ನಡೆದ 2429ನೇ ಶಿವಾನುಭವ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ ಸೇವಾ ಹಸ್ತಾಂತರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಲಿಂಗೈಕ್ಯ ಗುರುಗಳಿಗೆ ರಾಷ್ಟ್ರೀಯ ಕೋಮು ಸೌಹಾರ್ದತಾ ಪ್ರಶಸ್ತಿ ಹಾಗೂ ಬಸವ ಪುರಸ್ಕಾರಗಳು ದೊರೆಯುವಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಪಾತ್ರ ಮಹತ್ವದ್ದಾಗಿದೆ. ವರ್ಗ-ವರ್ಣ, ಜಾತಿ-ಮತಗಳ ಸೀಮೆ ದಾಟಿ ಎಲ್ಲ ಕ್ಷೇತ್ರಗಳ ಪ್ರತಿಭೆಗಳಿಗೆ ವೇದಿಕೆ ನೀಡುವುದಲ್ಲದೇ ಉಪನ್ಯಾಸಗಳ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಲು ಸಂಘ ಕಟಿಬದ್ಧವಾಗಿದೆ. ಈಗಾಗಲೇ 2428ನೇ ಶಿವಾನುಭವಗಳು ಜರುಗಿದ್ದು, ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಇದೇ ರೀತಿ ಜನಪರ ಕಾರ್ಯಕ್ರಮ ಸಂಘಟಿಸುತ್ತ ಸಂಘದ ಹಿರಿಮೆ-ಗರಿಮೆ ಮತ್ತಷ್ಟು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ವಿಚಾರವಾದಿ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ| ಎಸ್‌. ಶಿವಾನಂದ ಮಾತನಾಡಿ, ಕಳೆದ 5 ದಶಕಗಳಿಂದ ನಿರಂತರವಾಗಿ ಸಂಸ್ಕೃತಿ-ಸಾಹಿತ್ಯ-ಕಲೆ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಲಿಂಗಾಯತ ಪ್ರಗತಿಶೀಲ ಸಂಘವು ನಾಡಿನಲ್ಲೇ ಅಪರೂಪ ಹಾಗೂ ವಿಶಿಷ್ಟ ಸಂಸ್ಥೆಯಾಗಿದೆ. ವೈದಿಕತೆ ವಿರೋಧಿಯಾಗಿ ಉದಿಸಿಬಂದ ಬಸವೇಶ್ವರರಿಂದ ಸ್ಥಾಪನೆಗೊಂಡ ಲಿಂಗಾಯತ ಧರ್ಮ ಕಾಯಕ-ದಾಸೋಹದಂಥ ಶ್ರೇಷ್ಠ ಮೌಲ್ಯ ಒಳಗೊಂಡಿದೆ. ನಾಡಿನ ಕೆಲವು ಮಠಾಧೀಶರು ಬಸವಣ್ಣನ ಹೆಸರಿನಲ್ಲಿ ವೈದಿಕ ಆಚರಣೆ ಆಚರಿಸುತ್ತಿರುವುದು ಅವರ ಅಜ್ಞಾನಕ್ಕೆ ಸಾಕ್ಷಿಯಾಗಿದೆ. ಲಿಂಗಾಯತ ಪ್ರಗತಿಶೀಲ ಸಂಘವು ಲಿಂಗಾಯತ ಧರ್ಮದ ನಿಜಾಚರಣೆ ಪಸರಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಆ ಕಾರ್ಯ ಹೀಗೆಯೇ ನಿರಂತರವಾಗಿರಲಿ ಎಂದರು.

2019ನೇ ಸಾಲಿಗೆ ಸಂಘಕ್ಕೆ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ, ಉಪಾಧ್ಯಕ್ಷ ಸಂಗಮೇಶ ದುಂದೂರ, ಗೌರಕ್ಕ ಬಡಿಗಣ್ಣವರ, ಕಾರ್ಯದರ್ಶಿ ವೀರಣ್ಣ ಗೊಡಚಿ, ಸಹ ಕಾರ್ಯದರ್ಶಿ ಪ್ರಭು ಗಂಜಿಹಾಳ, ವಿಜಯಕುಮಾರ ಹಿರೇಮಠ, ಕೋಶಾಧ್ಯಕ್ಷ ಶಶಿಧರ ಬೀರನೂರ, ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಸುಂಡಿ, ಶಿವಾನುಭವ ಸಮಿತಿ ಚೇರಮನ್ನರಾಗಿ ವಿವೇಕಾನಂದಗೌಡ ಪಾಟೀಲ ಆಯ್ಕೆಯಾದರು.

Advertisement

ನೂತನ ಪದಾಧಿಕಾರಿಗಳಿಗೆ ಡಾ| ತೋಂಟದ ಸಿದ್ಧರಾಮ ಶ್ರೀ ಪ್ರಮಾಣವಚನ ಬೋಧಿಸಿದರು. ದೀಪ್ತಿ ಪಾಠಕ ಹಾಗೂ ತಂಡದವರಿಂದ ವಚನ ಸಂಗೀತ ಜರುಗಿತು. ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು. ಪ್ರೊ|ಬಾಹುಬಲಿ ಜೈನರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next