ಕಿತ್ತೂರರು ಕಬ್ಬಿನ ಬೆಳೆ ಹಾಕಿ ಸುಮ್ಮನೆ ಕೂರಲಿಲ್ಲ. ಅವುಗಳ ಅಂತರ ಜಾಸ್ತಿ ಮಾಡಿ, ಅಲ್ಲಿ ತರಕಾರಿ, ಸೊಪ್ಪುಗಳನ್ನೆಲ್ಲಾ ಬೆಳೆದು ಆದಾಯದ ಹಾದಿ ಹುಡುಕಿಕೊಂಡರು. ಅಂದಹಾಗೇ, ಇವರು ಕಬ್ಬನ್ನು ಯಾವುದೇ ಫ್ಯಾಕ್ಟರಿಗಳಿಗೆ ಹಾಕೋಲ್ಲ. ಬದಲಾಗಿ ಬೀಜ ತಯಾರಿಗೆ ಕೊಡುತ್ತಾರಂತೆ. ಹೀಗಾಗಿ, ಲಾಭವೋ ಲಾಭ.
ಬಾಗಲಕೋಟೆ ಜಿಲ್ಲೆಯ ತೇರದಾಳದ ಧರೆಪ್ಪ ಕಿತ್ತೂರ ಕಾಲತಿಪ್ಪಿ ಗ್ರಾಮದ ಸಾವಯವ ಕೃಷಿಕ. ಈತನ ವಿಶೇಷತೆ ಎಂದರೆ 18 ಹೆಚ್ಚು ಮಿಶ್ರ ಬೆಳೆಯನ್ನು ಬೆಳೆಯುತ್ತಿರುವುದು. ಈ ಸಾಧನೆಯ ಬಗ್ಗೆ ಕೇಳಿ, ಅಮೆರಿಕದಿಂದ ಆಗಮಿಸಿದ್ದ ಕೃಷಿ ತಜ್ಞ ಟೈಮೋಥಿ ರೆಬರ್ ಧರೆಪ್ಪ ತೋಟಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜಾಪುರದ ಸಿದ್ದೇಶ್ವರ ಶ್ರೀಗಳು ಕೂಡ ಬೆನ್ನುತಟ್ಟಿದ್ದಾರೆ. ಹಾಗಾದರೆ ಧರೆಪ್ಪ ಕಿತ್ತೂರ್ ಅಂತದ್ದೇನು ಮಾಡಿದ್ದಾರೆ ಅಂತ ನೋಡಲು ಹೋದಾಗ ಕಂಡದ್ದು ಇಷ್ಟು.
ಧರೆಪ್ಪನವರದು ಕಾಲತಿಪ್ಪಿ ರಸ್ತೆಗೆ ಹೊಂದಿಕೊಂಡಂತೆ ಒಂದೂವರೆ ಎಕರೆ ಜಮೀನಿದೆ. ಅದರಲ್ಲಿ ಕಬ್ಬು ನೆಟ್ಟಿದ್ದಾರೆ. ಇದಕ್ಕೂ ಮೊದಲು ನಾಲ್ಕು ಟನ್‌ನಷ್ಟು ತಿಪ್ಪೆಗೊಬ್ಬರ, ಕುರಿಗೊಬ್ಬರ, ಎರೆಹುಳು ಗೊಬ್ಬರ ಹಾಕಿದರು. 4 ಕ್ವಿಂಟಾಲ್ ಬೇವಿನ ಹಿಂಡಿ ಹಾಕಿ, 1110 ತಳಿಯ ಕಬ್ಬನ್ನು ಆರು ಅಡಿಗೆ ಒಂದು ಸಾಲು, ಎರಡು ಅಡಿಗೆ ಒಂದು ಕಣ್ಣಿನಂತೆ ನಾಟಿ ಮಾಡಿದರು. ಅದರ ಜೊತೆ ಚೆಂಡು ಹೂ, ಈರುಳ್ಳಿ, ಹೂಕೋಸು, ಎಲೆಕೋಸು, ಬದನೆ, ಶೇಂಗಾ, ಟೊಮೆಟೊ, ಬೆಂಡೆಕಾಯಿ, ಮೆಂತ್ಯ, ಚವಳಿ, ಸಬ್ಬಸಗಿ, ಕುಸಬಿ, ಕೊತ್ತಂಬರಿ, ಪಾಲಕ್, ಮೂಲಂಗಿ, ಮೆನಸಿನಕಾಯಿ ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆದರು. ತರಕಾರಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಬೇವಿನ ಎಣ್ಣಿ ಸಿಂಪಡಿಸಿ, ವಾರಕ್ಕೆ ಒಮ್ಮೆ ಸರದಿ ಪ್ರಕಾರ ಜೀವಾಮೃತ ನೀಡುತ್ತಿದ್ದಾರೆ.
ಕಿತ್ತೂರರಿಗೆ ನೀರಿನ ಸಮಸ್ಯೆ ಇಲ್ಲ. ಬೋರವೆಲ್ ಮೂಲಕ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಬ್ಬನ್ನು ಬಿಡಿ ಬಿಡಿಯಾಗಿ ಬೆಳೆಯುವುದರಿಂದ, ಗಾಳಿ ಬೆಳಕು ಹೆಚ್ಚಿಗೆ ಸಿಗುವುದರಿಂದ ಇಳುವರಿ ಹೆಚ್ಚಂತೆ.
ಅಂತರ ಬೆಳೆಯಾಗಿ ಬೆಳೆದ ಬೆಳೆಗಳಿಂದ ಕೈತುಂಬ ಲಾಭ. ಅದರಲ್ಲಿ ಚೆಂಡು ಹೂವಿನಿಂದ 40 ಸಾವಿರ, ಇತರೆ ಸ್ವೀಟ್‌ಕಾರ್ನ್ 20 ಸಾವಿರ ಹಾಗೂ ಎಲ್ಲ ಕಾಯಿ ಪಲ್ಲೆಗಳಿಂದ 20 ಸಾವಿರ ಜೊತೆಗೆ ಒಂದೂವರೆ ಎಕರೆಯಲ್ಲಿ ಬೆಳೆದ 1110 ತಳಿಯ 80-90 ಟನ್ ಕಬ್ಬನ್ನು ಬೀಜಕ್ಕಾಗಿ ಮಾರಾಟ ಮಾಡುವುದರಿಂದ ಎರಡೂವರೆ ಲಕ್ಷ ಆದಾಯ ಕಟ್ಟಿಟ್ಟ ಬುತ್ತಿ. ಈ ತಳಿಯ ಒಂದು ಕಬ್ಬು ಕನಿಷ್ಠ 2 ಕೆಜಿ ತೂಕ ಬರುತ್ತದೆ. ಆದ್ದರಿಂದ ಈ ಭಾಗದಲ್ಲಿ ಈ ತಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ನಾವು ಕಬ್ಬನ್ನು ಪ್ಯಾಕ್ಟರಿಗೆ ಕಳುಹಿಸದೇ, ಬೀಜಕ್ಕೆ ಮಾರಾಟ ಮಾಡುವುದರಿಂದ ಲಾಭ ಹೆಚ್ಚು ಎನ್ನುತ್ತಾರೆ ಧರೆಪ್ಪ.
ಅಂತರ ಬೆಳೆಗೆ ಹೂಡಿಕೆ ಮಾಡಿದ್ದು 20 ಸಾವಿರರೂ. ಒಟ್ಟು ಹನ್ನೊಂದು ತಿಂಗಳಲ್ಲಿ ಬೀಜಕ್ಕೆ ಮಾರಾಟ ಮಾಡಿದರೆ ಖರ್ಚು ವೆಚ್ಚಗಳನ್ನು ಕಳೆದರೂ ಅಂದಾಜು 3.20 ಲಕ್ಷ ರೂ. ನಿವ್ವಳ ಲಾಭವಂತೆ.
ಹೀಗಾಗಿ, ಧಾರವಾಡ, ಬೆಳಗಾವಿ, ವಿಜಾಪುರ, ಬಳ್ಳಾರಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದವರು, ಮಹಾರಾಷ್ಟ್ರ ರಾಜ್ಯದ ಹಲವು ರೈತರು ಭೇಟಿ ನೀಡಿ, ಕಿತ್ತೂರ ಅವರ ಕೃಷಿ ಪದ್ಧತಿಯನ್ನು ಶ್ಲಾಘಿಸಿದ್ದಾರೆ.
– ಕಿರಣ ಶ್ರೀಶೈಲ ಆಳಗಿ