ನಾಗ್ಪುರ: ಈ ಬಾರಿಯ ಪ್ರೊ ಕಬಡ್ಡಿ ಪಂದ್ಯಾವಳಿ ಸುದೀರ್ಘ 3 ತಿಂಗಳ ಕಾಲ ಸಾಗಲಿದೆ. ಸಹಜವಾಗಿಯೇ ಆಟಗಾರರು ಫಿಟ್‌ನೆಸ್ ಸಮಸ್ಯೆಯ ಆತಂಕದಲ್ಲಿದ್ದಾರೆ. ಆದರೆ ಪಂದ್ಯಗಳ ನಡುವೆ ಸಾಕಷ್ಟು ವಿರಾಮ ಇರುವುದರಿಂದ ಅಂಥ ಸಮಸ್ಯೆ ಕಾಡದು ಎನ್ನುತ್ತಾರೆ ಯು ಮುಂಬಾ ತಂಡದ ನಾಯಕ ಅನೂಪ್ ಕುಮಾರ್. ಹಿಂದಿನ ಪಂದ್ಯಗಳ ತಪ್ಪುಗಳನ್ನು ಅವಲೋಕಿಸಲು, ಮುಂದಿನ ಪಂದ್ಯದ ಕಾರ್ಯತಂತ್ರ ರೂಪಿಸಲು ಇದರಿಂದ ಅನುಕೂಲವಾಗುತ್ತದೆ ಎಂಬುದು ಅನೂಪ್ ಅಭಿಪ್ರಾಯ.
“ಪಂದ್ಯಗಳ ನಡುವೆ ಸಾಕಷ್ಟು ದಿನಗಳ ಬ್ರೇಕ್ ಇರುವುದರಿಂದ ತಂಡಗಳಿಗೆ ಅನುಕೂಲ. ಇಂಥ ತೀವ್ರ ಸ್ಪರ್ಧಾತ್ಮಕ ಪಂದ್ಯಾವಳಿಯಲ್ಲಿ 4-5 ದಿನಗಳ ವಿರಾಮ ಅಳವಡಿಸಿರುವುದರಿಂದ ಆಟಗಾರರೆಲ್ಲ ಹೆಚ್ಚು ನಿರಾಳರಾಗಿರುತ್ತಾರೆಂಬುದು ನನ್ನ ಅನಿಸಿಕೆ. ಈ ಅವಧಿಯನ್ನು ನಾವು ಸಂಪೂರ್ಣವಾಗಿ ಅಭ್ಯಾಸಕ್ಕೆ ಬಳಸಿಕೊಳ್ಳುತ್ತೇವೆ. ಹಾಗೆಯೇ ವಿವಿಧ ಆಟಗಾರರ ಕಾಂಬಿನೇಶನ್ ಬಗ್ಗೆಯೂ ಪ್ರಯೋಗ ನಡೆಸುತ್ತೇವೆ. ಯಾವುದು ಸೂಕ್ತವೆನಿಸುತ್ತದೆ ಎಂಬುದನ್ನು ತಿಳಿಯಲು ಇದು ಬಹಳ ಅನುಕೂಲ. ಹಿಂದಿನ ಪಂದ್ಯಗಳಲ್ಲಿ ಮಾಡಿದ ತಪ್ಪುಗಳನ್ನು ಅವಲೋಕಿಸಿ, ಇದನ್ನು ತಿದ್ದಿಕೊಂಡು, ಮುಂದಿನ ಪಂದ್ಯಕ್ಕೆ ಬಲಿಷ್ಠವಾಗಿ ಮರಳಲು ಈ ವಿರಾಮ ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಅನೂಪ್.
“ಆಟಗಾರರು ಸಣ್ಣ ಪುಟ್ಟ ಗಾಯದ ಸಮಸ್ಯೆಗೆ ಸಿಲುಕಿದರೆ ಚೇತರಿಕೆಗೆ ಈ ಅವಧಿ ಧಾರಾಳ…’ ಎನ್ನುವುದು ಅನೂಪ್ ಅನಿಸಿಕೆ.
“ನಮ್ಮ ತಂಡದ ರಕ್ಷಣಾ ವಿಭಾಗ ಬಲಿಷ್ಠವಾಗಿಲ್ಲ. ಈವರೆಗಿನ ಪಂದ್ಯಗಳಲ್ಲಿ ಇದು ಸಾಬೀತಾಗಿದೆ. ಕೇವಲ ಶೇ. 50-60ರಷ್ಟು ಸಾಮರ್ಥ್ಯವಷ್ಟೇ ಹೊರಹೊಮ್ಮಿದೆ. ಹೀಗಾಗಿ ಎದುರಾಳಿಯನ್ನು ಅಚ್ಚರಿಗೊಳಪಡಿಸುವ ನಮ್ಮ ಕಾರ್ಯಯೋಜನೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ. ಮುಂದಿನ ಪಂದ್ಯಗಳಲ್ಲಿ ರಕ್ಷಣಾ ವಿಭಾಗವನ್ನು ಗಟ್ಟಿಗೊಳಿಸಿಕೊಳ್ಳುವುದು ಮುಖ್ಯ’ ಎಂದರು.
“ತಂಡದ ರಕ್ಷಣಾ ಹೋರಾಟದ ಬಗ್ಗೆ ನಾವು ಪ್ರತಿ ಪಂದ್ಯದಲ್ಲೂ ಕಲಿಯುವುದು ಸಾಕಷ್ಟಿರುತ್ತದೆ. ಅತೀ ಶೀಘ್ರದಲ್ಲಿ ನಮ್ಮ ಡಿಫೆನ್ಸ್ ವಿಭಾಗ ಎಂದಿನ ಲಯಕ್ಕೆ ಮರಳಲಿದೆ’ ಎಂಬ ಆಶಾವಾದ ಅನೂಪ್ ಕುಮಾರ್ ಅವರದು.