Advertisement

ಫಲಾನುಭವಿ ಆಯ್ಕೆ ಪಾರದರ್ಶಕವಾಗಿರಲಿ: ದಯಾನಂದ್‌

04:17 PM Sep 25, 2018 | |

ಶಿವಮೊಗ್ಗ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನವನ್ನು ತ್ವರಿತಗೊಳಿಸಿ ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ಇಲಾಖೆಗಳು 2018-19ನೇ ಸಾಲಿನ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಕ್ರಿಯಾ ಯೋಜನೆಯನ್ನು ತಕ್ಷಣ ಅಂತಿಮಗೊಳಿಸಿ ಕಾರ್ಯಕ್ರಮ ಅನುಷ್ಠಾನ ಆರಂಭಿಸಬೇಕು. ಡಿಸೆಂಬರ್‌ ಅಂತ್ಯದ ಒಳಗಾಗಿ ಬಹುತೇಕ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಇರುವ ಕಾಲೋನಿಗಳಲ್ಲಿ
ಮಾತ್ರ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕಾರ್ಯಕ್ರಮ ಅನುಷ್ಠಾನದ ಮೊದಲು ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸ್ಥಳೀಯ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಒದಗಿಸಬೇಕು ಎಂದು ತಿಳಿಸಿದರು. 

ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ: ಸಫಾಯಿ ಕರ್ಮಚಾರಿಗಳಿಗೆ ಕೆಲಸದ ಸ್ಥಳದಲ್ಲಿ ಸೂಕ್ತ ಪರಿಕರಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು. ಒಳಚರಂಡಿ ದುರಸ್ತಿ ಇತ್ಯಾದಿ ಕೆಲಸಗಳನ್ನು ಯಂತ್ರಗಳ ಮೂಲಕ ಮಾತ್ರ ಮಾಡಬೇಕು. ಇಂತಹ ಕಾರ್ಯಗಳಿಗೆ ಸಫಾಯಿ ಕರ್ಮಚಾರಿಗಳನ್ನು ಬಳಸಿಕೊಂಡರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವತ್ಛತಾ ಕಾರ್ಯದಲ್ಲಿ ತೊಡಗಿರುವ ಸಫಾಯಿ ಕರ್ಮಚಾರಿಗಳಿಗೆ ಕನಿಷ್ಠ ವೇತನವನ್ನು ಖಾತ್ರಿ ಪಡಿಸಬೇಕು. ಅವರಿಗೆ ಇಎಸ್‌ಐ ಮತ್ತು ಪಿಎಫ್‌ಐ ಸೌಲಭ್ಯವನ್ನು ಸರಿಯಾಗಿ ಒದಗಿಸಬೇಕು. ಸಫಾಯಿ ಕರ್ಮಚಾರಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸದಿದ್ದರೆ ಇಲಾಖಾ ಮುಖ್ಯಸ್ಥರನ್ನು ಜವಾಬ್ದಾರಿ ಮಾಡಲಾಗುವುದು ಎಂದರು.

Advertisement

ಸಫಾಯಿ ಕರ್ಮಚಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಸೂಕ್ತ ನಿವೇಶನ ಗುರುತಿಸಿ ಅಂತಿಮಗೊಳಿಸುವಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಗ್ರಾಮ ಪಂಚಾಯತ್‌ ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಇದನ್ನು ಆದ್ಯತೆ ಮೇರೆಗೆ ತೆಗೆದುಕೊಂಡು ಅಂತಿಮಗೊಳಿಸಬೇಕು ಎಂದು ಸೂಚನೆ ನೀಡಿದರು.

ಶಾಸಕರಾದ ಕುಮಾರ ಬಂಗಾರಪ್ಪ, ಅಶೋಕ ನಾಯ್ಕ, ವಿಧಾನ ಪರಿಷತ್‌ ಸದಸ್ಯ ಪ್ರಸನ್ನ ಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.  

ಸಫಾಯಿ ಕರ್ಮಚಾರಿಗಳಿಗೆ ಕೆಲಸದ ಸ್ಥಳದಲ್ಲಿ ಸೂಕ್ತ ಪರಿಕರಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು. ಒಳಚರಂಡಿ ದುರಸ್ತಿ ಇತ್ಯಾದಿ ಕೆಲಸಗಳನ್ನು ಯಂತ್ರಗಳ ಮೂಲಕ ಮಾತ್ರ ಮಾಡಬೇಕು. ಇಂತಹ ಕಾರ್ಯಗಳಿಗೆ ಸಫಾಯಿ ಕರ್ಮಚಾರಿಗಳನ್ನು ಬಳಸಿಕೊಂಡರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು.
 ಕೆ.ಎ.ದಯಾನಂದ್‌, ಜಿಲ್ಲಾಧಿಕಾರಿ. 

Advertisement

Udayavani is now on Telegram. Click here to join our channel and stay updated with the latest news.

Next