Advertisement

ಹದಿನೇಳು ವರ್ಷ ಕಳೆದರೂ ಫಲಾನುಭವಿಗೆ ದಕ್ಕದ ಮನೆ

04:41 PM Mar 10, 2020 | Suhan S |

ಗಂಗಾವತಿ: ಗುಡಿಸಲು ರಹಿತ ರಾಜ್ಯ ನಿರ್ಮಾಣಕ್ಕೆ ಸರಕಾರಗಳು ಬಜೆಟ್‌ನಲ್ಲಿ ಅನುದಾನ ಘೋಷಿಸುತ್ತವೆ. ಆಶ್ರಯ ಮನೆ ನಿರ್ಮಿಸಲು ಪ್ರತಿವರ್ಷ ಕೋಟ್ಯಂತರ ರೂ. ಖರ್ಚೂ ಮಾಡುತ್ತವೆ. ಆದರೆ ಅಧಿಕಾರಿಗಳು ಸ್ಪಂದಿಸದಿದ್ದರೆ ಸರಕಾರದ ಯೋಜನೆ ಅನುಷ್ಠಾನ ಕಷ್ಟವೆನಿಸುತ್ತದೆ. ಆ ಯೋಜನೆಯ ಫಲ ಆಯಾ ಫಲಾನುಭವಿಗಳಿಗೆ ತಲುಪುವುದೇ ಇಲ್ಲ.

Advertisement

ಹೌದು. ಗಂಗಾವತಿಯ ನೇಕಾರ ಓಣಿಯ ಸೊಂಡುರು ಸ್ವಾಮಿಯವರು ಮನೆಗಾಗಿ ಕಳೆದ 17 ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಹಿಂದೆ ಸುತ್ತಾಡಿದರೂ ಸರ್ಕಾರದ ಯೋಜನೆಯ ಫಲ ಇನ್ನೂ ದೊರಕಿಯೇ ಇಲ್ಲ. 2003ರಲ್ಲಿ ಅಂದಿನ ಎಸ್‌.ಎಂ. ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ಮತ್ತು ಮನೆ ನಿರ್ಮಾಣಕ್ಕೆ ಸರಕಾರ ಆಶ್ರಯ ಯೋಜನೆ ಕಲ್ಪಿಸಿತ್ತು. ಇದರಲ್ಲಿ ಗಂಗಾವತಿ ನೇಕಾರ ಓಣಿಯ ಸೊಂಡುರು ಸ್ವಾಮಿ ಕೂಡ ಫಲಾನುಭವಿಯಾಗಿದ್ದರು. ಕಂಪ್ಲಿ ರಸ್ತೆಯಲ್ಲಿ ಆಟೋನಗರ ನಿರ್ಮಿಸಿ ಆಟೋ ಚಾಲಕರು ಮತ್ತು ಬಡವರಿಗೆ ನಿವೇಶನವನ್ನೂ ಕಲ್ಪಿಸಲಾಯಿತು. ನಂತರ ಅಂಬೇಡ್ಕರ್‌ ನಿಗಮದ ಮೂಲಕ 4.5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳುವ ಯೋಜನೆಯಲ್ಲಿ ನಿವೇಶನ ಪಡೆದ ಕೆಲ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಅದರಲ್ಲಿ ಸೊಂಡುರು ಸ್ವಾಮಿಯವರೂ ಆಯ್ಕೆಯಾದರು. ಆಟೋನಗರದಲ್ಲಿ ಮೂಲಸೌಕರ್ಯ ಇಲ್ಲದ ಕಾರಣಕ್ಕೆ ಮನೆ ನಿರ್ಮಿಸಿಕೊಡಲು ನಗರಸಭೆ ಅಧಿಕಾರಿಗಳು ಹಿಂದೇಟು ಹಾಕಿದರು.

ಅದಾದ ನಂತರ 17 ವರ್ಷ ಕಳೆದರೂ ಯಾರೂ ಗಮನ ಹರಿಸಲಿಲ್ಲ. ಸೊಂಡುರು ಸ್ವಾಮಿ ಅವರು ಶಾಸಕರು, ಸಂಸದರು, ಸಚಿವರು, ವಿಪಕ್ಷ ನಾಯಕರು, ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದೂ ಆಯ್ತು. ಕೊನೆಗೆ ದೆಹಲಿಗೆ ತೆರಳಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೂ ಆಯ್ತು. ಆದರೆ ನಗರಸಭೆ ಅಧಿಕಾರಿಗಳು ಮಾತ್ರ ಮನೆ ನಿರ್ಮಿಸಿಕೊಡಲು ಮನಸ್ಸು ಮಾಡಿಲ್ಲ. ಇದರ ಮಧ್ಯೆಯೇ ಸೊಂಡುರು ಸ್ವಾಮಿಯವರ ಪತ್ನಿ ಹೃದಯಾಘಾತದಿಂದ ಮೃತಪಟ್ಟರು. ಮಕ್ಕಳ ಮದುವೆ ಮಾಡಿ ಒಬ್ಬಂಟಿಯಾದ ಸೊಂಡುರು ಸ್ವಾಮಿ ಅನ್ಯರ ಮನೆಯಲ್ಲಿ ಸಾಮಾನುಗಳನ್ನಿಟ್ಟು ಕೂಲಿ-ನಾಲಿ ಮಾಡುತ್ತ ಗುಡಿ-ಗುಂಡಾರ, ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.

2003ರಲ್ಲಿ ಸರಕಾರ ನಿವೇಶನ ಮತ್ತು ಮನೆ ಮಂಜೂರು ಮಾಡಿದ್ದರೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಇನ್ನೂ ಮನೆ ನಿರ್ಮಾಣವಾಗಿಲ್ಲ. ಪತ್ನಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕಳುಹಿಸಿದ್ದು, ಈಗ ಒಬ್ಬಂಟಿಯಾಗಿದ್ದೇನೆ. ಆಟೋ ನಗರದಲ್ಲಿ ಮೂಲಸೌಕರ್ಯಕ್ಕಾಗಿ 25 ಲಕ್ಷ ರೂ. ಮಂಜೂರು ಮಾಡಿಸಿದರೂ ಆಶ್ರಯ ಕಾಲೋನಿಯಲ್ಲಿ ಯಾವುದೇ ಸೌಕರ್ಯಗಳಿಲ್ಲ. ಮನೆ ನಿರ್ಮಿಸುವವರೆಗೂ ಹೋರಾಟ ನಡೆಸುತ್ತೇನೆ. ನನ್ನಂತೆ ಸಾವಿರಾರು ಫಲಾನುಭವಿಗಳು ಅಧಿಕಾರಿಗಳ ಧೋರಣೆಗೆ ಹಿಡಿಶಾಪ ಹಾಕುತ್ತಿದ್ದಾರೆ.-ಸೊಂಡುರುಸ್ವಾಮಿ, ಫಲಾನುಭವಿ.

ಕಂಪ್ಲಿ ರಸ್ತೆಯಲ್ಲಿರುವ ಆಟೋ ನಗರದಲ್ಲಿ ಸೊಂಡುರು ಸ್ವಾಮಿ ಅವರಿಗೆ 2003ರಲ್ಲಿ ನಿವೇಶನ ಮಂಜೂರಿಯಾಗಿದೆ. 2017-18ರಲ್ಲಿ ಅಂಬೇಡ್ಕರ್‌ ನಿಗಮದಿಂದ ಮನೆಯೂ ಮಂಜೂರಿಯಾಗಿದೆ. ಮೂಲಸೌಕರ್ಯ ಇಲ್ಲದ ಕಾರಣದಿಂದ ಇನ್ನೂ ಮನೆ ನಿರ್ಮಿಸಿಲ್ಲ. ಆಟೋ ನಗರದಲ್ಲಿ ಶೀಘ್ರ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಅಲ್ಲಿ ನಿವೇಶನ ಪಡೆದ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತದೆ.-ಶೇಖರಪ್ಪ ಈಳಿಗೇರ್‌, ಪೌರಾಯುಕ್ತ

Advertisement

 

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next