Advertisement

ಪಿಂಚಣಿ ಇಲ್ಲದೆ ಫಲಾನುಭವಿಗಳ ಪರದಾಟ

09:09 AM Jun 27, 2020 | Suhan S |

ಸಿರುಗುಪ್ಪ: ತಾಲೂಕಿನಲ್ಲಿ ವೃದ್ಧಾಪ್ಯ, ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ ಸುಮಾರು 28,816 ಫಲಾನುಭವಿಗಳಿದ್ದು, ತಾಲೂಕಿನಲ್ಲಿ ಕಳೆದ 8 ತಿಂಗಳಿಂದ 6 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಮಾಸಾಶನ ಬಾರದೆ ನಿತ್ಯವೂ ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಖಜಾನೆ ಒಂದರ ಮೂಲಕ ಅಂಚೆ ಕಚೇರಿ ಸಿಬ್ಬಂದಿಯಿಂದ ಮಾಸಾಶನ ಪಡೆಯುತ್ತಿದ್ದ ಫಲಾನುಭವಿಗಳು ಕಡ್ಡಾಯವಾಗಿ ಕೆ-2 ಮೂಲಕ ಮಾಸಾಶನ ಪಡೆಯಬೇಕೆಂದು ಸರ್ಕಾರ ಆದೇಶ ನೀಡಿರುವುದರಿಂದ ಅಂಚೆ ಸಿಬ್ಬಂದಿ ಮೂಲಕ ಹಣ ಪಡೆಯುತ್ತಿದ್ದ ಫಲಾನುಭವಿಗಳ ಖಾತೆಗಳು ಕೆ-2ಗೆ ಬದಲಾವಣೆ ಆಗಿಲ್ಲದ ಕಾರಣ ಅವರಿಗೆ ಮಾಸಾಶನದ ಹಣ ಬಂದಿಲ್ಲ. ಅಂಚೆ ಸಿಬ್ಬಂದಿ ಮೂಲಕ ಹಣ ಪಡೆಯುತ್ತಿದ್ದ ಪ್ರತಿಯೊಬ್ಬ ಫಲಾನುಭವಿಯು ತಮ್ಮ ಬ್ಯಾಂಕ್‌ ಖಾತೆ ಸಂಖ್ಯೆ, ಅಂಚೆ ಕಚೇರಿಯಿಂದ ಹಣ ಪಡೆದ ರಸೀದಿ, ಆಧಾರ್‌ ಕಾರ್ಡ್‌ ದಾಖಲೆಗಳನ್ನು ತಾಲೂಕು ಕಚೇರಿಯಲ್ಲಿರುವ ಸಿಬ್ಬಂದಿಗೆ ಸಲ್ಲಿಸಬೇಕು. ಈ ದಾಖಲೆಗಳನ್ನು ಆನ್‌ ಲೈನ್‌ ಮೂಲಕ ಅಪ್‌ಲೋಡ್‌ ಮಾಡಿದ ನಂತರ ಕೆ-2 ತಂತ್ರಾಂಶಕ್ಕೆ ಬದಲಾವಣೆ ಮಾಡಲಾಗುತ್ತದೆ, ಕೆ-2 ತಂತ್ರಾಂಶಕ್ಕೆ ಬದಲಾದ ನಂತರ ಮಾಸಾಶನ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತದೆ. ಒಂದು ಬಾರಿ ದಾಖಲೆಗಳನ್ನು ನೀಡಿದರೆ ಸಾಕು ಅದನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುತ್ತೇವೆ. ಬೆಂಗಳೂರಿನಲ್ಲಿಯೇ ಕೆ-2 ತಂತ್ರಾಂಶಕ್ಕೆ ಸೇರಿದ ನಂತರ ಅವರವರ ಖಾತೆಗೆ ಹಣ ಜಮಾ ಆಗುತ್ತದೆ. ಆದ್ದರಿಂದ ಕಚೇರಿಯಲ್ಲಿ ದಾಖಲೆಗಳು ನೀಡಿದವರು ಕಚೇರಿಗೆ ಅಲೆಯುವ ಅವಶ್ಯಕತೆ ಇಲ್ಲ ಎಂದು ತಾಲೂಕು ಕಚೇರಿ ಸಿಬ್ಬಂದಿ ಹೇಳುತ್ತಾರೆ.

ಮೊದಲು ಖಜಾನೆ ಮೂಲಕ ವಿವಿಧ ಯೋಜನೆಗಳ ಮಾಸಾಶನ ಪಡೆಯುತ್ತಿದ್ದ ಹಣ ಸಂದಾಯವಾಗುತ್ತಿತ್ತು. ಆದರೆ ಕೆ-2ತಂತ್ರಾಂಶದ ಮೂಲಕ ಹಣ ಪಡೆಯುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಬ್ಯಾಂಕ್‌ ಖಾತೆ ಮೂಲಕ ಹಣ ಪಡೆಯುತ್ತಿರುವ ಫಲಾನುಭವಿಗಳಿಗೆ ಈಗಲೂ ಮಾಸಾಶನ ಬರುತ್ತಿದೆ. ಆದರೆ ಕೆ-2 ತಂತ್ರಾಂಶಕ್ಕೆ ಅಳವಡಿಸಲಾಗದ ಫಲಾನುಭವಿಗಳಿಗೆ ಮಾತ್ರ ಈಗ ಮಾಸಾಶನ ಬರಲು ಸಮಸ್ಯೆಯಾಗಿದೆ. ಆದ್ದರಿಂದ ದಾಖಲೆ ನೀಡಬೇಕು. ತಂತ್ರಾಂಶದಲ್ಲಿ ಅಳವಡಿಕೆಯಾದ ನಂತರ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುತ್ತದೆ. -ಎಸ್‌.ಬಿ.ಕೂಡಲಗಿ, ತಹಶೀಲ್ದಾರ್‌.

ಕಳೆದ 8 ತಿಂಗಳಿನಿಂದ ಮಗಳ ಅಂಗವಿಕಲ ವೇತನ ಬಂದಿಲ್ಲ. ತಾಲೂಕು ಕಚೇರಿ ಸಿಬ್ಬಂದಿ ಕೇಳಿದ ಅಗತ್ಯ ದಾಖಲೆಗಳನ್ನು ನೀಡಿದ್ದರೂ ಇಲ್ಲಿಯವರೆಗೆ ಮಾಸಾಶನ ಬಂದಿಲ್ಲ. ಈ ಬಗ್ಗೆ ಕೇಳಿದರೆ ಕೆ-2 ತಂತ್ರಾಂಶಕ್ಕೆ ಅಳವಡಿಕೆ ಮಾಡಲು ನಿಮ್ಮ ದಾಖಲೆಗಳನ್ನು ಬೆಂಗಳೂರಿಗೆ ಕಳುಹಿಸಿದ್ದೇವೆ. ಅಲ್ಲಿ ಮಂಜೂರು ಆಗಬೇಕೆಂದು ಹೇಳುತ್ತಿದ್ದಾರೆ. -ರಾಮರೆಡ್ಡಿ, ಅಂಗವಿಕಲೆ ತಂದೆ, ಕರೂರು ಗ್ರಾಮ.

Advertisement

Udayavani is now on Telegram. Click here to join our channel and stay updated with the latest news.

Next