ಚನ್ನಪಟ್ಟಣ: ಕಳೆದ ಒಂದೂವರೆ ವರ್ಷದಿಂದಲೂ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿಫಲಾನುಭವಿಗಳಿಗೆ ಹಣ ಬಿಡುಗಡೆಯಾಗದೆ, ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಾಲೂಕು ಗ್ರಾಪಂ ಅಧ್ಯಕ್ಷರ ಸಂಘದ ಅಧ್ಯಕ್ಷ ರಮೇಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾಪಂ ವ್ಯಾಪ್ತಿಯಲ್ಲಿ ಸೂರು ನಿರ್ಮಾಣದ ಕನಸು ಕಾಣುತ್ತಿರುವ ಫಲಾನುಭಭವಿಗಳಿಗೆ ಎರಡು ವರ್ಷ ಕಳೆಯುತ್ತಿದ್ದರೂ, ಅನುದಾನ ಬಿಡುಗಡೆಯಾಗಿಲ್ಲ. ಫಲಾನುಭವಿಗಳು ಇರುವ ಸೂರು ಕೆಡವಿ ಹೊಸ ಮನೆ ನಿರ್ಮಾಣ ಮಾಡಿಕೊಳ್ಳಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆ.ಬ್ಯಾಡರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಯಲಿಯೂರು ಜಯಕಾಂತ್ ಚಾಲುಕ್ಯ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಧಿಕಾರಾವಧಿ ಹಾಗೂ ಪ್ರಸಕ್ತ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಬಂದಾಗಿನಿಂದಲೂ ಆಶ್ರಯ ಮನೆ ನಿರ್ಮಾಣದ ಫಲಾನುಭವಿಗಳಿಗೆ ಯಾವ ಹಂತದಲ್ಲೂ ಹಣ ಬಿಡುಗಡೆಯಾಗಿಲ್ಲ ಎಂದರು.
ಆಶ್ರಯ, ಇಂದಿರಾ, ಅಟಲ್, ಬಸವ ವಸತಿ ಯೋಜನೆಯಲ್ಲಿ ಮಂಜೂರಾತಿ ಪಡೆದ ಫಲಾನುಭವಿಗಳು ಸರ್ಕಾರದಿಂದ ನಾಲ್ಕು ಹಂತದಲ್ಲಿ ಹಣವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಎಲ್ಲಾ ಫಲಾನುಭವಿಗಳು ತಮ್ಮ ಗುಡಿಸಲುಗಳನ್ನು ತೆರವು ಮಾಡಿ ಅಡಿಪಾಯ ಹಾಕಿಕೊಂಡಿದ್ದರೆ, ಕೆಲವರು ಅಡಿಪಾಯ ಹಾಕಿ ಗೊಡೆ ನಿರ್ಮಾಣ ಮಾಡಿಕೊಂಡಿದ್ದಾರೆ, ಕೆಲವು ಫಲಾನುಭವಿಗಳಿಗೆ ಒಂದೊಂದು ಹಂತದ ಹಣ ಬಿಡುಗಡೆಯಾಗಿದ್ದು, ಕೆಲವರಿಗ ಒಂದು ಹಂತದ ಹಣ ಕೂಡ ಬಿಡುಗಡೆಯಾಗಿಲ್ಲ, ಸರ್ಕಾರ ಕೂಡಲೇ ಅನುದಾನ ಬಿಡುಗಡೆಗೊಳಿಸಬೇಕೆಂದರು.
ತಗಚಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಿ.ಶಿವು ಮಾತನಾಡಿ, ವಸತಿ ಯೋಜನೆಯಡಿಯಲ್ಲಿ ನೀಡುವ ಅನುದಾನವು ಕೂಡ ತಾರತಮ್ಯದಿಂದ ಕೂಡಿದ್ದು, ನಗರ ಪ್ರದೇಶದ ಫಲಾನುಭವಿಗಳಿಗೆ ವಸತಿ ಯೋಜನೆಯಲ್ಲಿ ಪ್ರತಿ ಪಲಾನುಭವಿಗಳಿಗೆ ಮೂರು ಲಕ್ಷ ರೂ.ಗಳನ್ನು ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದವರಿಗೆ 1 ಲಕ್ಷದ 20 ಸಾವಿರರೂ.ಗಳನ್ನು ನೀಡುತ್ತಿರುವುದು ಎಷ್ಟು ಸರಿ ಎಂದು ಎಂದು ಸರ್ಕಾರಕ್ಕೆ ಪ್ರಶ್ನೆ ಹಾಕಿದರು. ಬಾಣಗಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಜೆ.ಬ್ಯಾಡರಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಲಕ್ಷೀ, ಮೈಲನಾಯ್ಕನಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಬೇವೂರು ಗ್ರಾಪಂ ಅಧ್ಯಕ್ಷ ಗುರುಲಿಂಗಯ್ಯ, ತಿಟ್ಟಮಾರನಹಳ್ಳಿ ಗ್ರಾಪಂ ಅಧ್ಯಕ್ಷ ಅಜೀತ್, ಎಂ.ಬಿ.ಹಳ್ಳಿ ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ್, ಕೋಡಂಬಳ್ಳಿ ಗ್ರಾಪಂ ಅಧ್ಯಕ್ಷೆ ಶ್ವೇತಬಾಬು, ವೈ.ಟಿ ಹಳ್ಳಿ ಗ್ರಾಪಂ ಸದಸ್ಯ ಬಸವರಾಜು, ನೀಲಸಂದ್ರ ಗ್ರಾಪಂ ಅದ್ಯಕ್ಷೆ ನಿರ್ಮಲ ಬಸವಲಿಂಗಯ್ಯ ಮತ್ತಿರರು ಹಾಜರಿದ್ದರು.