Advertisement

ದಾಹ ನೀಗಿಸುವ ಪಯಸ್ವಿನಿ ಈಗ ಅಶುದ್ಧ

12:16 AM Jan 15, 2020 | mahesh |

ಸುಳ್ಯ ತಾಲೂಕಿನ ಜೀವನದಿ “ಪಯಸ್ವಿನಿ’ಯ ಒಡಲು ಮಲಿನವಾಗುತ್ತಿದೆ. ಮೂರು ಜಿಲ್ಲೆಗಳಲ್ಲಿ ಒಟ್ಟು 87 ಕಿ.ಮೀ. ಹರಿಯುವ ನದಿ ತನ್ನೊಡಲಿನಲ್ಲಿ ತ್ಯಾಜ್ಯವನ್ನು ತುಂಬಿಕೊಂಡು ಸಂಕಟಪಡುತ್ತಿದೆ. ಈ ನದಿಯನ್ನು ಶುದ್ಧ ರೂಪದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉದಯವಾಣಿ ಸುದಿನ ಪ್ರಯತ್ನ ಆರಂಭಿಸಿದೆ. ಈ ನಿಟ್ಟಿನಲ್ಲಿ ಓದುಗರೂ ತಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ನಿಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಬರೆದು ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಭಾವಚಿತ್ರದೊಂದಿಗೆ ನಮಗೆ ಕಳುಹಿಸಿ. ಆಯ್ದ ಅಭಿಪ್ರಾಯಗಳನ್ನು ಸುದಿನದಲ್ಲಿ ಪ್ರಕಟಿಸಲಾಗುವುದು. ನಮ್ಮ ವಾಟ್ಸ್‌ಆ್ಯಪ್‌ ಸಂಖ್ಯೆ: 9108051452

Advertisement

ಸುಳ್ಯ: ಮೂರು ಜಿಲ್ಲೆಗಳಲ್ಲಿ ಮೂರು ಹೆಸರುಗಳಿಂದ ಕರೆಸಿಕೊಳ್ಳುವ, ವರ್ಷವಿಡೀ ಸಾವಿರಾರು ಜನರ, ಕೃಷಿ ಭೂಮಿಯ ದಾಹ ನೀಗಿಸುವ ಪಯಸ್ವಿನಿ ನದಿ ಈಗ ಶುದ್ಧವಾಗಿ ಉಳಿದಿಲ್ಲ. ಕೊಡಗಿನ ಹುಟ್ಟು ಸ್ಥಳದಿಂದ ತೊಡಗಿ ಕೇರಳದಲ್ಲಿ ಸಮುದ್ರದಲ್ಲಿ ಲೀನವಾಗುವ ತನಕ ಅಲ್ಲಲ್ಲಿ ತನ್ನೊಡಲಿಗೆ ಮಾನವ ಪ್ರೇರಿತ ಕಶ್ಮಲ ತುಂಬಿಕೊಂಡು ಹರಿಯುತ್ತಿದೆ. ಬೇಸಗೆ ಕಾಲದ ಸಂದರ್ಭ ನಗರ ಹಾಗೂ ನದಿ ದಂಡೆಯ ಆಸುಪಾಸಿನ ಪ್ರದೇಶಗಳಿಗೆ ಜೀವನದಿ ಆಗಿದ್ದರೂ ಈ ಬಗ್ಗೆ ಎಚ್ಚೆತ್ತುಕೊಳ್ಳದೆ ಅಶುದ್ಧ ನೀರನ್ನೇ ಸೇವಿಸಿ ಅನಾರೋಗ್ಯಕ್ಕೆ ದಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಸಾರಿ ಹೇಳುತ್ತಿದೆ ನದಿ ತಟದ ಈಗಿನ ಚಿತ್ರಣ.

ನದಿ ಹಿನ್ನೆಲೆ
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಾಳತ್‌ಮನೆ ಬಳಿ ಹುಟ್ಟುವ ಈ ನದಿಗೆ “ನೊರಜೆಕಲ್ಲು’ ಎನ್ನುವುದು ಮೂಲದ ಹೆಸರು. ಅಲ್ಲಿಂದ ಸುಳ್ಯಕ್ಕೆ ತಲುಪಿದಾಗ ಪಯಸ್ವಿನಿ, ಕೇರಳ ಸೇರುವಾಗ ಚಂದ್ರಗಿರಿ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತದೆ. ಕಲ್ಲುಗುಂಡಿ, ಮತ್ಸéತೀರ್ಥ, ಅರಂತೋಡು, ಶೆಟ್ಟಿಅಡ್ಕ, ಕಂದಡ್ಕದಲ್ಲಿ ಒಟ್ಟು ಐದು ಉಪನದಿಗಳು ಪಯಸ್ವಿನಿಗೆ ಸೇರುತ್ತವೆ. ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು, ಆಲೆಟ್ಟಿ, ಸುಳ್ಯ, ಮಂಡೆಕೋಲು, ಜಾಲೂರು, ಅಜ್ಜಾವರ ಹಾಗೂ ಸುಳ್ಯ ನಗರಕ್ಕೆ ವರ್ಷವಿಡೀ ಇದೇ ಜೀವನದಿ. ಇದರ ಹರಿಯುವ ದೂರ ಸುಮಾರು 87 ಕಿ.ಮೀ.

ತ್ಯಾಜ್ಯದ ಒಡಲು
ಪರಿಸರ ಅಧ್ಯಯನಕಾರರು ಹೇಳುವ ಪ್ರಕಾರ, ನದಿ ಹುಟ್ಟುವ ತಾಳತ್‌ಮನೆಯಿಂದಲೇ ತ್ಯಾಜ್ಯ ನದಿಯ ಒಡಲು ಸೇರಲು ಆರಂಭಿಸುತ್ತಿದೆ. ಅಲ್ಲಿ ಮಾನವ ನಿರ್ಮಿತ ಕಶ್ಮಲ, ಕಲ್ಲುಗುಂಡಿಯಲ್ಲಿ ಊಟ- ಉಪಾಹಾರದ ತ್ಯಾಜ್ಯ, ಅರಂಬೂರಿನಲ್ಲಿ ವಾಹನದ ತ್ಯಾಜ್ಯ, ಪೆರಾಜೆ ಬಳಿ ಹಸಿ – ಒಣ ಕಸ ತುಂಬುವ ಡಂಪಿಂಗ್‌ ಕೇಂದ್ರದ ತ್ಯಾಜ್ಯ, ನಾಗಪಟ್ಟಣದ ಬಳಿ ರಬ್ಬರ್‌ ಫ್ಯಾಕ್ಟರಿ ತ್ಯಾಜ್ಯ, ಕಾಂತಮಂಗಲ ಬಳಿ ಕೋಳಿ ಮಾಂಸದ ತ್ಯಾಜ್ಯ – ಹೀಗೆ ನದಿ ಉದ್ದಕ್ಕೂ ಬಗೆ ಬಗೆಯ ಕಲುಷಿತ ಪದಾರ್ಥಗಳು ನದಿ ಒಡಲಿಗೆ ಸೇರುತ್ತಿವೆ.

ಜಲಚರ ನಾಶ
ಬೇಸಗೆಯಲ್ಲಿ ಹೊರ ಜಿಲ್ಲೆಯಲ್ಲಿ ಬಂದು ನದಿ ಆಳಕ್ಕೆ ವಿಷವಿಕ್ಕಿ, ಬಲೆ ಹಾಕಿ ಜಲಚರ ನಾಶ ಮಾಡಿ ಆದಾಯ ಗಳಿಸುವ ಕಾರಣ ಇಡೀ ಪಯಸ್ವಿನಿ ನದಿ ವಿಷದ ಒಡಲಾಗಿ ಬದಲಾಗುತ್ತಿದೆ. ಇದನ್ನು ಸೇವಿಸುವ ಜನರಿಗೂ ಬಗೆ ಬಗೆಯ ರೋಗ – ರುಜಿನಗಳು ಕಾಡುತ್ತಿವೆ. ನದಿ ನೀರಿಗೆ ತ್ಯಾಜ್ಯ, ವಿಷ ಸುರಿಯುವ ಕಾರಣ ಕಾಂತಮಂಗಲದಿಂದ ಆಲೆಟ್ಟಿ ಸೇತುವೆ ತನಕ ನದಿ ನೀರಲ್ಲಿರುವ ದೇಶದಲ್ಲೇ ಅಪೂರ್ವ ಎನ್ನಲಾದ ಸಣ್ಣ ಜಾತಿಯ ಮೀನಿನ ಸಂತತಿ ವಿನಾಶದಂಚಿಗೆ ತಲುಪಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

Advertisement

ನೀರಿನ ಮೂಲ
ಏಳು ಗ್ರಾಮಗಳ ಕೃಷಿ, ದಿನಬಳಕೆ ಹಾಗೂ ಸುಳ್ಯ ನಗರಕ್ಕೆ ವರ್ಷವಿಡಿ ನೀರೊದಗಿಸುವುದು ಪಯಸ್ವಿನಿ. ಹಾಗಾಗಿ ಇದರ ಪ್ರಾಮುಖ್ಯ ನದಿಯಂತೆಯೇ ವಿಸ್ತಾರವಾದದ್ದು. ನಗರದ ಕಲ್ಲುಮುಟ್ಲು ಬಳಿ ಪಂಪ್‌ ಬಳಸಿ ನೀರು ಶುದ್ಧೀಕರಿಸಿ ಮನೆ, ಶಾಲೆ, ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಬೇಸಗೆಯಲ್ಲಂತೂ ಮರಳಿನ ಕಟ್ಟ ಹಾಕಿ ನೀರು ಸಂಗ್ರಹಿಸಿ ಪೂರೈಸಿ ನೀಡುತ್ತಿರುವುದು ನದಿಯ ಪ್ರಾಮುಖ್ಯಕ್ಕೆ ಉದಾಹರಣೆ. ಜತೆಗೆ ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ಅವಘಡಗಳ ಪರಿಣಾಮ ಕೆಸರು ಮಣ್ಣು, ಮರಳು ನದಿಯ ಆಳವನ್ನು ಮುಚ್ಚಿದೆ. ಜತೆಗೆ ಬೇಸಗೆಯಲ್ಲಿ ದಿನವಿಡೀ ಕೃಷಿ ಪಂಪ್‌ಸೆಟ್‌ಗಳು ನೀರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಹೀರಿಕೊಂಡಿವೆ. ಹೀಗಾಗಿ ಪಯಸ್ವಿನಿ ಒಂದರ್ಥ ದಲ್ಲಿ ಆತಂಕದ ಮಡುವಿನಲ್ಲಿ ಹರಿಯುತ್ತಿದೆ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next