Advertisement
ಒಂದು ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದವರೆಂದರೆ ವಿಶೇಷವಾದ ಸ್ಥಾನವಿತ್ತು. ಸಮಾಜದಲ್ಲಿ ಅವರು ಬಹಳ ಗೌರವಾದರಗಳಿಗೆ ಪಾತ್ರರಾಗುತ್ತಿದ್ದರು. ಆದರೆ ಈಗೀಗ ವರ್ಷದಿಂದ ವರ್ಷಕ್ಕೆ ನಿಧಾನವಾಗಿ ಮಹತ್ವ ಕಳೆದುಕೊಳ್ಳುತ್ತಿರುವುದು, ಸಾಮಾನ್ಯ ಎಂಬಂತಾಗಿರುವುದು ಬೇಸರ ತರುವಂಥದ್ದು. ನಿರ್ದಿಷ್ಟ ಸಂಖ್ಯೆಯಲ್ಲಿನ ಅಸ್ಪಷ್ಟತೆ, ಆಯ್ಕೆಯಲ್ಲಿನ ಪಾರದರ್ಶಕತೆ ಕೊರತೆ, ಆಯ್ಕೆಗೆ ವಿಶೇಷವಾದ ವ್ಯವಸ್ಥೆ ಇಲ್ಲದಿರುವುದು-ಇತ್ಯಾದಿ ಹಲವು ಅಂಶಗಳು ಪ್ರಶಸ್ತಿಯ ಮಹತ್ವವನ್ನು ಕುಂದಿಸುತ್ತಿವೆ. 2010ರಲ್ಲಿ 159 ಮಂದಿಯನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿತ್ತು.
Related Articles
Advertisement
ಹೀಗಾಗಿ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಒಂದಲ್ಲ ಒಂದು ವಿವಾದ ಸುತ್ತಿಕೊಳ್ಳುತ್ತದೆ. ಹೀಗಾಗಿ ಸರಕಾರ ಕೊಡುವ ಪ್ರಶಸ್ತಿ ಸ್ವೀಕರಿಸುವುದೆಂದರೆ ಒಂದು ಬಗೆಯ ಮುಜುಗರ ಸನ್ನಿವೇಶವಾಗಿಯೂ ಮಾರ್ಪಡುತ್ತಿದೆ. ಇದರಿಂದ ಪ್ರಶಸ್ತಿಯ ಮೌಲ್ಯ ಕಡಿಮೆಯಾಗುವುದಲ್ಲದೆ ಪ್ರಶಸ್ತಿ ಕೊಡುವವರ ಮೌಲ್ಯವೂ ನಗಣ್ಯವಾಗುತ್ತದೆ ಎಂಬುದನ್ನು ಆಡಳಿತಗಾರರು ಗಮನಿಸಬೇಕು. ಅರ್ಹತೆಯಿಂದಲೇ ಪ್ರಶಸ್ತಿ ಸಿಕ್ಕಿದ್ದರೂ ಅವರನ್ನು ಸಮಾಜ ಬೇರೆಯದ್ದೇ ದೃಷ್ಟಿಯಿಂದ ನೋಡುತ್ತದೆ.
ಹೀಗಾಗುವುದನ್ನು ತಪ್ಪಿಸಲು ಪ್ರಶಸ್ತಿ ಆಯ್ಕೆ ವಿಧಾನವನ್ನೇ ಆಮೂಲಾಗ್ರವಾಗಿ ಬದಲಾಯಿಸುವುದು ಅಗತ್ಯ. ಹೀಗಿರುವ ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆಯುವ ವಿಧಾನಕ್ಕಿಂತ ಭಿನ್ನವಾದ ವಿಧಾನವನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಪದ್ಮ ಪ್ರಶಸ್ತಿಗಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಕ್ರಮವನ್ನೂ ಗಮನಿಸಬಹುದು. ಪದ್ಮ ಪ್ರಶಸ್ತಿಗೆ ಯಾರು ಬೇಕಾದರೂ ಸಾಧಕರನ್ನು ಶಿಫಾರಸು ಮಾಡಬಹುದು ಎಂಬ ನಿಯಮ ಬಂದ ಬಳಿಕ ಅರ್ಹರಿಗೆ ಪ್ರಶಸ್ತಿ ಸಿಕ್ಕಿರುವುದನ್ನು ಗಮನಿಸಬಹುದು.
ಈ ವ್ಯವಸ್ಥೆಯ ಬಳಿಕ ಪದ್ಮ ಪ್ರಶಸ್ತಿಗಳು ವಿವಾದಕ್ಕೀಡಾಗಿಲ್ಲ ಎನ್ನುವುದೂ ಗಮನಾರ್ಹ ಅಂಶ. ಇದಕ್ಕಾಗಿ ಕೇಂದ್ರ ಸರಕಾರ ಆನ್‌ಲೈನ್ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ರಾಜ್ಯೋತ್ಸವವೂ ಈ ರೀತಿಯಾದ ನೂತನ ವ್ಯವಸ್ಥೆಗಳನ್ನು ಮಾಡಿಕೊಂಡರೆ ಪ್ರಶಸ್ತಿಗೂ ಮೌಲ್ಯ, ಕೊಡುವವರಿಗೂ ಮೌಲ್ಯ ಹಾಗೂ ಅದನ್ನು ಸ್ವೀಕರಿಸುವವರಿಗೂ ಗೌರವ ಸಿಕ್ಕೀತು. ರಾಜ್ಯೋತ್ಸವ ಪ್ರಶಸ್ತಿ ನಿಜವಾದ ಅರ್ಥದಲ್ಲಿ ಜನರ ಪ್ರಶಸ್ತಿಯಾದೀತು.