Advertisement

ಬೆನ್‌ ಸ್ಟೋಕ್ಸ್‌ ವಿಸ್ಡನ್‌ ವರ್ಷದ ಶ್ರೇಷ್ಠ ಕ್ರಿಕೆಟಿಗ

10:06 AM Apr 09, 2020 | Sriram |

ಲಂಡನ್‌: ಇಂಗ್ಲೆಂಡಿನ ಸ್ಫೋಟಕ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರು 2019ರ ಋತುವಿನಲ್ಲಿ ನೀಡಿದ ಅಮೋಘ ನಿರ್ವಹಣೆಯ ಆಧಾರದಲ್ಲಿ ವಿಸ್ಡನ್‌ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಹೆಸರಿಸಲಾಗಿದೆ. ಈ ಮೂಲಕ ಕಳೆದ ಮೂರು ವರ್ಷಗಳಿಂದ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಪ್ರಶಸ್ತಿ ಓಟಕ್ಕೆ ಬ್ರೇಕ್‌ ನೀಡಿದ್ದಾರೆ.

Advertisement

ಆಸ್ಟ್ರೇಲಿಯದ ಖ್ಯಾತ ಆಟಗಾರ್ತಿ ಎಲಿಸೆ ಪೆರ್ರಿ ಅವರು ವನಿತೆಯರ ವಿಭಾಗದಲ್ಲಿ ವಿಸ್ಡನ್‌ ವರ್ಷದ ಶ್ರೇಷ್ಠ ವನಿತಾ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಳೆದ ವರ್ಷ ಈ ಪ್ರಶಸ್ತಿಯನ್ನು ಭಾರತದ ಸ್ಮತಿ ಮಂದನಾ ಪಡೆದಿದ್ದರು.

ಬೆನ್‌ ಸ್ಟೋಕ್ಸ್‌ 2005ರ ಬಳಿಕ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಇಂಗ್ಲೆಂಡಿನ ಮೊದಲ ಆಟಗಾರರಾಗಿದ್ದಾರೆ. 2005ರಲ್ಲಿ ಮಾಜಿ ನಾಯಕ ಆ್ಯಂಡ್ರೂé ಫ್ಲಿಂಟಾಫ್ ಈ ಪ್ರಶಸ್ತಿಗೆ ಪಾತ್ರರಾಗಿದ್ದರು.

ಸ್ಟೋಕ್ಸ್‌ ಅವರ ಅಮೋಘ ಸಾಧನೆಯಿಂದಾಗ ಇಂಗ್ಲೆಂಡ್‌ ಕಳೆದ ವರ್ಷ ಚೊಚ್ಚಲ ಬಾರಿ ವಿಶ್ವಕಪ್‌ ಪ್ರಶಸ್ತಿ ಜಯಿಸಿತ್ತು.

ಲಾರ್ಡ್ಸ್‌ನಲ್ಲಿ ನಡೆದ ನ್ಯೂಜಿಲ್ಯಾಂಡ್‌ ವಿರುದ್ಧದ ಫೈನಲ್‌ನಲ್ಲಿ ಸ್ಟೋಕ್ಸ್‌ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದ್ದರು. ಆಬಳಿಕ ಆಸ್ಟ್ರೇಲಿಯ ವಿರುದ್ಧ ನಡೆದ ಆ್ಯಶಷ್‌ ಸರಣಿಯ ಮೂರನೇ ಪಂದ್ಯದಲ್ಲಿ ಅಜೇಯ 135 ರನ್‌ ಸಿಡಿಸಿ ಪಂದ್ಯ ಗೆಲ್ಲಲು ಕಾರಣರಾಗಿದ್ದರು.

Advertisement

28ರ ಹರೆಯದ ಸ್ಟೋಕ್ಸ್‌ 2019ರಲ್ಲಿ ನಡೆದ ಏಕದಿನ ಕ್ರಿಕೆಟ್‌ನಲ್ಲಿ 719 ರನ್‌ ಪೇರಿಸಿ ಕೊಹ್ಲಿ ಸಾಧನೆಯನ್ನು ಹಿಂದಿಕ್ಕಿದ್ದರು. ಕೊಹ್ಲಿ ಆ ವರ್ಷ 821 ರನ್‌ ಗಳಿಸಿದ್ದರು.

ಕೆಲವು ವಾರಗಳ ಅಂತರದಲ್ಲಿ ಬೆನ್‌ ಸ್ಟೋಕ್ಸ್‌ ಕ್ರಿಕೆಟ್‌ ಕ್ಷೇತ್ರದಲ್ಲಿ ಅದ್ಭುತ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ ಎಂದು ವಿಸ್ಡನ್‌ನ ಸಂಪಾದಕ ಲಾರೆನ್ಸ್‌ ಬೂತ್‌ ಅವರು ಹೇಳಿದ್ದಾರೆ.

ಪೆರ್ರಿ ಆಲ್‌ರೌಂಡ್‌ ನಿರ್ವಹಣೆ
ಆಸ್ಟ್ರೇಲಿಯದ ಆಲ್‌ರೌಂಡರ್‌ ಎಲಿಸೆ ಪೆರ್ರಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ್ದರಿಂದ ಈ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಕ್ಯಾಂಟರ್‌ಬರ್ರಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅವರು ಮಾರಕ ದಾಳಿ ಸಂಘಟಿಸಿ 22 ರನ್ನಿಗೆ 7 ವಿಕೆಟ್‌ ಉರುಳಿಸಿ ತಂಡದ ಭರ್ಜರಿ ಗೆಲುವಿಗೆ ಕಾರಣರಾಗಿದ್ದರು. ಟಾಂಟನ್‌ನಲ್ಲಿ ನಡೆದ ಏಕೈಕ ಟೆಸ್ಟ್‌ನಲ್ಲಿ ಅವರು 116 ಮತ್ತು ಅಜೇಯ 76 ರನ್‌ ಸಿಡಿಸಿ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next