ಲಂಡನ್: ಕೋವಿಡ್ ಕಾರಣದಿಂದ ಸದ್ಯ ಅಮಾನತಾಗಿರುವ ಐಪಿಎಲ್ ಮತ್ತೆ ನಡೆದರೂ ನಾವುಗಳು ಪಾಲ್ಗೊಳ್ಳವುದು ಕಷ್ಟ ಎಂದು ಇಂಗ್ಲೆಂಡ್ ತಂಡದ ಪ್ರಮುಖ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೇಳಿದ್ದಾರೆ. ಬೆನ್ ಸ್ಟೋಕ್ಸ್ ಅವರು ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡುತ್ತಾರೆ.
ಐಪಿಎಲ್ ಮತ್ತೆ ನಡೆಯತ್ತದೆ ಅಥವಾ ಯಾವಾಗ ನಡೆಯುತ್ತದೆ ಎನ್ನುವುದರ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ. ಆದರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹೇಳಿದಂತೆ ನಮಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನ ಮಧ್ಯೆ ಸಮಯ ಹೊಂದಿಸುವುದು ಕಷ್ಟವಾಗಬಹುದು ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ಇದನ್ನೂ ಓದಿ:ಚೋಪ್ರಾ ರಚಿಸಿದ ಟೀಮ್ ಇಂಡಿಯಾ ತಂಡಕ್ಕೆ ಶಿಖರ್ ಧವನ್ ನಾಯಕ
ದೇಶದಲ್ಲಿ ಕೋವಿಡ್ 19 ಸೋಂಕಿನ ಪ್ರಮಾಣ ಹೆಚ್ಚಾದಂತೆ ಐಪಿಎಲ್ ರದ್ದು ಮಾಡಲು ಒತ್ತಡ ಹೆಚ್ಚಾಗಿತ್ತು. ಆಟಗಾರರಿಗೆ ಸೋಂಕು ದೃಢವಾದ ಬೆನ್ನಲ್ಲೇ ಬಿಸಿಸಿಐ ಮೇ. 4ರಂದು ಐಪಿಎಲ್ ಅಮಾನತು ಮಾಡಿತ್ತು, ಐಪಿಎಲ್ ನ 29 ಪಂದ್ಯಗಳು ಮಾತ್ರ ಮುಗಿದಿವೆ.
ಸಪ್ಟೆಂಬರ್ – ಅಕ್ಟೋಬರ್ ನಲ್ಲಿ ಐಪಿಎಲ್ ಮುಂದುವರಿದರೆ ನಮ್ಮ ಆಟಗಾರರು ಪಾಲ್ಗೊಳ್ಳುವುದು ಕಷ್ಟವಾಗಬಹುದು ಎಂದು ಇಂಗ್ಲೆಂಡ್ ಬೋರ್ಡ್ ಹೇಳಿದೆ. ಕಿವೀಸ್ ಕ್ರಿಕೆಟ್ ಮಂಡಳಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ.