Advertisement

ಗೋಳಿಯಂಗಡಿ –ತೊಂಭತ್ತು ರಸ್ತೆ ಬದಿ ತ್ಯಾಜ್ಯ ರಾಶಿ

10:28 PM Mar 12, 2020 | Sriram |

ಗೋಳಿಯಂಗಡಿ: ಕೆಲ ವರ್ಷಗಳ ಹಿಂದೆ ಹಚ್ಚ – ಹಸುರುನಿಂದ ಕೂಡಿದ್ದ ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಗೋಳಿಯಂಗಡಿಯಿಂದ ತೊಂಭತ್ತು ಕಡೆಗೆ ಸಂಚರಿಸುವ ರಸ್ತೆಯ ಮಕ್ಕಳ್‌ ಕೋಟಿ ಆಣಿ ಪ್ರದೇಶವೀಗ ಕಸ ಬಿಸಾಡುವ ಜಾಗವಾಗಿ ಪರಿವರ್ತನೆಗೊಂಡಿದೆ.

Advertisement

ಬೆಳ್ವೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಗೋಳಿಯಂಗಡಿ ಪೇಟೆಯಿಂದ 150 ಮೀ. ಸಾಗಿ ಎಡಕ್ಕೆ ತಿರುವು ತೆಗೆದುಕೊಂಡು ಮುಂದೆ 100 ಮೀ. ಹೋಗಿ ಬಲಕ್ಕೆ ತಿರುಗಿದರೆ ರಸ್ತೆಯ ಬದಿಯಲ್ಲಿ ಈ ಜಾಗ ಕಾಣಸಿಗುತ್ತದೆ. ಈ ಜಾಗಕ್ಕೆ ಮಕ್ಕಳ್‌ ಕೋಟಿ ಅಣಿ ಎಂದು ಕರೆಯುತ್ತಾರೆ. ಕಡಿದಾದ ಇಳಿಜಾರಿನಿಂದ ಕೂಡಿದ ತಿರುವು ಇದ್ದು, ಮುಂದೆ ಸಾಗಿದರೆ ತೊಂಭತ್ತು, ಹೆಂಗವಳ್ಳಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದೆ.

ಈ ಜಾಗವು ಎಲ್ಲಿಯೂ ಕೂಡ ಒಂದು ಪ್ಲಾಸ್ಟಿಕ್‌ ಚೂರು ಸಿಗದ ಸುಂದರ ಜಾಗವಾಗಿತ್ತು. ಆದರೆ ಬರು ಬರುತ್ತ ಪ್ಲಾಸ್ಟಿಕ್‌ ಬಳಕೆ ಹೆಚ್ಚಾದಂತೆ, ಕಸ ವಿಲೇವಾರಿಗೆ ಸೂಕ್ತ ಸ್ಥಳವೆಂದು ತಿಳಿದ ಜನರು ತಮ್ಮ ಮನೆಯ ಕಸ, ಅಂಗಡಿಯ ತ್ಯಾಜ್ಯ, ಕಸ ಮುಂತಾದವುಗಳನ್ನು ಇಲ್ಲಿ ತಂದು ಸುರಿದು ಅಕ್ಷರಶಃ ಡಂಪಿಂಗ್‌ ಯಾರ್ಡ್‌ ರೀತಿ ಮಾಡಿದ್ದಾರೆ. ಕೆಲವರು ಬೆಳಗ್ಗಿನ ವೇಳೆಯಲ್ಲಿ ಬಂದು ಕಸ ಎಸೆದು ಹೋಗುತ್ತಿದ್ದರೆ, ಕೆಲವರು ಸಂಜೆ ವೇಳೆ ವಾಹನದಲ್ಲಿ ಬಂದು ಇಲ್ಲಿ ಕಸ ಎಸೆದು ಹೋಗುತ್ತಿದ್ದಾರೆ. ಕೆಲ ಅಂಗಡಿಯವರು ಕೂಡ ಇಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ ಎನ್ನುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇದರ ಬಗ್ಗೆ ಸಂಬಂಧಪಟ್ಟ ಯಾವುದೇ ಆರೋಗ್ಯ ಅಧಿಕಾರಿಗಳು, ಪಂಚಾಯತ್‌ ಸದಸ್ಯರು, ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಕಸ ಎಸೆಯ ಬೇಡಿ ಅನ್ನುವ ಸೂಚನ ಫಲಕ ಸಹ ಅಳವಡಿಸಿಲ್ಲ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು, ಸ್ಥಳೀಯಾಡಳಿತ ಸಂಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

“ಸೂಕ್ತ ಕ್ರಮಕೈಗೊಳ್ಳಲಿ’
ಈ ಪ್ರದೇಶವು ಪ್ರಸ್ತುತ ಪ್ಲಾಸ್ಟಿಕ್‌, ಬಿಯರ್‌ ಬಾಟಲ್‌ ಮುಂತಾದ ಅನುಪಯುಕ್ತ ವಸ್ತುಗಳಿಂದ ಕೂಡಿದ ಸ್ಥಳವಾಗಿದೆ. ಜೋರಾದ ಗಾಳಿ ಬೀಸಿದರೆ ಗಾಳಿಗೆ ಪ್ಲಾಸ್ಟಿಕ್‌ ಹಾರಿ ಹೋಗಿ ತಗ್ಗು ಪ್ರದೇಶಗಳಲ್ಲಿ ಬೀಳುತ್ತದೆ. ಮೇವು ಅರಸಿ ಬರುವ ಜಾನುವಾರುಗಳಿಗೆ ಈ ಜಾಗವು ಕಂಟಕಪ್ರಾಯವಾಗಿದೆ. ಇಲ್ಲಿ ಕಸ ಎಸೆಯದಂತೆ ಸ್ಥಳೀಯಾಡಳಿತ ಸಂಸ್ಥೆಯು ಸೂಕ್ತ ಕ್ರಮವನ್ನು ಕೈಗೊಳ್ಳಲಿ.
– ಸುರೇಶ್‌ ಹೆಂಗವಳ್ಳಿ, ಸ್ಥಳೀಯರು

“ಪರಿಶೀಲನೆ ನಡೆಸಲಾಗುವುದು’
ಈ ಬಗ್ಗೆ ಪಂಚಾಯತ್‌ಗೆ ಯಾವುದೇ ಮಾಹಿತಿಯಿಲ್ಲ. ಈವರೆಗೆ ಗ್ರಾಮಸ್ಥರಿಂದ ಯಾವುದೇ ದೂರುಗಳು ಬಂದಿಲ್ಲ. ಕೂಡಲೇ ಪರಿಶೀಲನೆ ನಡೆಸಲಾಗುವುದು. ಬೆಳ್ವೆ, ಅಲಾºಡಿ, ಮಡಾಮಕ್ಕಿ 3 ಗ್ರಾಮಗಳನ್ನೊಳಗೊಂಡ ತ್ಯಾಜ್ಯ ವಿಲೇವಾರಿ ಘಟಕ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಸದ್ಯ ತಾತ್ಕಲಿಕವಾಗಿ ಆರಂಭಿಸಲಾಗಿದೆ.
– ಪ್ರಭಾಶಂಕರ್‌ ಪುರಾಣಿಕ್‌, ಪಿಡಿಒ, ಬೆಳ್ವೆ ಗ್ರಾ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next