Advertisement

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

08:45 PM Apr 24, 2024 | Team Udayavani |

ಸಾಗರ: ಕಾನೂರು, ಮೆಗ್ಗಾನೆ, ಉರುಳುಗಲ್ಲು ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕೊಡಿ ಎಂದು ಪತ್ರ ಬರೆದಿದ್ದೇನೆಯೇ ವಿನಾ ಒಕ್ಕಲೆಬ್ಬಿಸಿ ಎಂದು ಅರಣ್ಯ ಸಚಿವರಿಗೆ ಪತ್ರ ಬರೆದಿಲ್ಲ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ವಿಷಯವನ್ನು ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

Advertisement

ಇಲ್ಲಿನ ಗಾಂಧಿ ಮಂದಿರದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಈ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಸಿಗದೆ ಇರುವ ಬಗ್ಗೆ ನಾನು ಸದನದಲ್ಲಿ ಸಹ ಚರ್ಚೆ ನಡೆಸಿ, ಅಗತ್ಯ ಸೌಲಭ್ಯ ಕಲ್ಪಿಸಲು ಮನವಿ ಮಾಡಿದ್ದೇನೆ. ಇಂಧನ ಸಚಿವರಿಗೆ ಮನವಿ ಮಾಡಿ ಕೇಬಲ್ ಮೂಲಕ ವಿದ್ಯುತ್ ಪೂರೈಕೆಗೆ ಒಪ್ಪಿಸಿದ್ದೇನೆ. ಇಂತಹ ಸಂದರ್ಭದಲ್ಲಿ ನಾನು ಅವರನ್ನು ಒಕ್ಕಲೆಬ್ಬಿಸಿ ಎಂದು ಹೇಳಲು ಹೇಗೆ ಸಾಧ್ಯ ಎಂದ ಅವರು, ಬಿಜೆಪಿಯವರು ಓಟಿನ ಆಸೆಗಾಗಿ ಸಣ್ಣ ಕಿಡಿ ಹೊತ್ತಿಸಿದ್ದಾರೆ. ಬಿ.ವೈ.ರಾಘವೇಂದ್ರ ಎರಡು ಬಾರಿ ಸಂಸದರಾಗಿದ್ದರೂ ಈ ಗ್ರಾಮಗಳ ಬಗ್ಗೆ ಏಕೆ ಗಮನ ಹರಿಸಿಲ್ಲ. ಹಿಂದಿನ ಶಾಸಕ ಹರತಾಳು ಹಾಲಪ್ಪ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಯಾವ ಪ್ರಯತ್ನ ನಡೆಸಿದ್ದಾರೆ ಎಂದು ಪ್ರಶ್ನಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ಗ್ಯಾರಂಟಿ ನಡುವೆಯೂ ದೊಡ್ಡಪ್ರಮಾಣದಲ್ಲಿ ಅನುದಾನ ತರಲಾಗಿದೆ. ಬಿಜೆಪಿಯವರು ಅನುದಾನ ತಂದಿಲ್ಲ ಎಂದು ಸುಳ್ಳುಸುದ್ದಿ ಹರಡುವ ಪ್ರಯತ್ನ ನಡೆಸುತ್ತಿದ್ದಾರೆ. ಅನುದಾನ ತಂದಿರುವ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ ಬೇಳೂರು, ಕ್ಷೇತ್ರವ್ಯಾಪ್ತಿಯಲ್ಲಿ ನಮ್ಮ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಬಗ್ಗೆ ಉತ್ತಮ ವಾತಾವರಣ ಇದೆ. ಪ್ರಚಾರಕ್ಕೆ ಹೋದಲೆಲ್ಲಾ ಜನರು ಸ್ವಯಂಪ್ರೇರಿತವಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆ. ಕಾರ್ಯಕರ್ತರು ಸಹ ಅತ್ಯುತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಕಲಸೆ ಚಂದ್ರಪ್ಪ, ರವಿಕುಮಾರ್ ಎಚ್.ಎಂ., ಗಣಪತಿ ಮಂಡಗಳಲೆ, ಉಷಾ ಎನ್., ಎಲ್.ಚಂದ್ರಪ್ಪ, ಸುರೇಶಬಾಬು, ಮಕ್ಬೂಲ್ ಅಹ್ಮದ್, ಮಂಜೂರಾಲಿ ಖಾನ್, ಮಧುಮಾಲತಿ, ಹಮೀದ್, ಶಾಹೀನಾ ಅಲ್ತಾಫ್, ವೈ.ಕೆ.ರವಿಕುಮಾರ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next