ಸಾಗರ: ಕಳೆದ ಸಾಲಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಹಾನಿಗೀಡಾದ ಮನೆಗಳಿಗೆ ಸರ್ಕಾರದಿಂದ ಇನ್ನೂ ಪರಿಹಾರ ಸಿಕ್ಕಿಲ್ಲ. ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದುವರೆಗೆ ತೊಂಬತೈದು ಸಾವಿರ ಮಾತ್ರ ಕೊಟ್ಟಿದ್ದಾರೆ. ಇನ್ನೂ ನಾಲ್ಕು ಲಕ್ಷ ನೀಡಬೇಕಿದ್ದು, ಸಂತ್ರಸ್ತರ ಗೋಳು ಕೇಳುವವರಿಲ್ಲದಂತಾಗಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ತ್ಯಾಗರ್ತಿ ಭಾಗದಲ್ಲಿ ಸೋಮವಾರ ಸುರಿದ ಭಾರೀ ಗಾಳಿಮಳೆಗೆ ಹಾನಿಗೀಡಾದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ, ಸಂತ್ರಸ್ತರ ಕುಟುಂಬ ಗಳಿಗೆ ವೈಯಕ್ತಿಕ ಹಣಕಾಸು ನೆರವು ನೀಡಿದ ಅವರು ಪತ್ರಿಕೆಯೊಂದಿಗೆ ಮಾತನಾಡಿ, ಕೆಲವು ಊರುಗಳಲ್ಲಿ ಸರ್ಕಾರದ ಹಣ ನಂಬಿ ಅರ್ಧ ಮನೆ ಕಟ್ಟಿಕೊಂಡು ಪ್ಲಾಸ್ಟಿಕ್ ಹೊದಿಕೆ ಮಾಡಿಕೊಂಡಿದ್ದಾರೆ. ಈಗ ಮತ್ತೆ ಅಕಾಲಿಕ ಮಳೆಯಾಗುತ್ತಿರುವುದರಿಂದ ಸಂತ್ರಸ್ತರ ಬದುಕಿಗೆ ಆತಂಕ ಎದುರಾಗಿದೆ. ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಸರ್ಕಾರ ತಕ್ಷಣವೇ ನೆರವಿಗೆ ಧಾವಿಸಬೇಕು ಎಂದರು.
ನಿನ್ನೆ ಅಕಾಲಿಕವಾಗಿ ಸುರಿದ ಗುಡುಗು ಸಿಡಿಲು ಸಹಿತ ಭಾರಿ ಗಾಳಿ ಮಳೆಗೆ ಜಿಗಳೇಮನೆ, ನೇದರವಳ್ಳಿ ಮುಂತಾದ ಕಡೆಗಳಲ್ಲಿ ಕೊಟ್ಟಿಗೆಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ತ್ಯಾಗರ್ತಿ ಭಾಗದಲ್ಲಿ ಸಿಡಿಲಿಗೆ ರೈತರ ಎತ್ತುಗಳು ಮೃತಪಟ್ಟಿರುವ ಘಟನೆ ನಡೆದಿದೆ. ಅಂತವರಿಗೆ ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕು. ಕೊಟ್ಟಿಗೆ ದುರಸ್ತಿ ಮಾಡಿಕೊಳ್ಳಲು ಗ್ರಾಮ ಪಂಚಾಯ್ತಿಯಿಂದ ಸಹಾಯ ಮಾಡಬೇಕು. ಮಳೆಯಿಂದ ಅನೇಕ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ತಕ್ಷಣ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಒಂದು ವೇಳೆ ಜನರು ನಾರಾಯಣ ಗುರುಗಳ ಸಂದೇಶ ಪಾಲಿಸಿದ್ದರೆ ದೇಶದಲ್ಲಿ ಒಗ್ಗಟ್ಟು: ಪ್ರಧಾನಿ ಮೋದಿ
ಈ ಸಂದರ್ಭದಲ್ಲಿ ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಹೊಸೂರು ಗ್ರಾಪಂ ಸದಸ್ಯ ಆನಂದ್ ಐಗಿನಬೈಲು, ಉಳ್ಳೂರು ಗ್ರಾಪಂ ಸದಸ್ಯ ದುಷ್ಯಂತ ಸಿರುಗುಪ್ಪೆ, ಕನ್ನಪ್ಪ ಜಿಗಳೇಮನೆ ಮತ್ತಿತರರು ಇದ್ದರು.