Advertisement

ಬೇಳೂರು: ಕತ್ತಲಲ್ಲಿದ್ದ ಮನೆಗಳಿಗೆ ಕೊನೆಗೂ ಬೆಳಕು

11:49 PM May 05, 2019 | sudhir |

ತೆಕ್ಕಟ್ಟೆ: ವರ್ಷಗಳಿಂದ ಕತ್ತಲಲ್ಲಿದ್ದ ಬೇಳೂರು ಗ್ರಾ.ಪಂ. ವ್ಯಾಪ್ತಿಯ 5 ಮನೆಗಳಿಗೆ ಕೊನೆಗೂ ವಿದ್ಯುತ್‌ ಸಂಪರ್ಕ ಲಭ್ಯವಾಗಿದೆ. ಗ್ರಾ.ಪಂ. ನಿರಪೇಕ್ಷಣ ಪತ್ರ ನೀಡದಿದ್ದ ಹಿನ್ನೆಲೆಯಲ್ಲಿ ಅರ್ಜಿದಾರರು ನೇರವಾಗಿ ಕೇಂದ್ರದ ರೂರಲ್‌ ಅರ್ಬನ್‌ ಎಲೆಕ್ಟ್ರಿಫಿಕೇಶನ್‌ ಲಿ. (ಆರ್‌ಇಸಿ) ಕಚೇರಿ ಸಂಪರ್ಕಿಸಿ, ಕೇಂದ್ರದ ಸೌಜನ್ಯ ಯೋಜನೆ ಅಡಿಯಲ್ಲಿ ಸಂಪರ್ಕ ಪಡೆದು ಕೊಂಡಿದ್ದಾರೆ.

Advertisement

13 ವರ್ಷಗಳಿಂದ ವಿದ್ಯುತ್‌ ಸಂಪರ್ಕವಿಲ್ಲ
ಬೇಳೂರು ಗ್ರಾ.ಪಂ.ಸದಸ್ಯ ಸೀತಾನದಿ ಕರುಣಾಕರ ಶೆಟ್ಟಿ ಅವರು ಕಳೆದ 13 ವರ್ಷಗಳಿಂದಲೂ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಗ್ರಾ.ಪಂ.ಗೆ ಮನವಿ ನೀಡಿದರಾದರೂ ಗ್ರಾ.ಪಂ.ತಾಂತ್ರಿಕ ಕಾರಣ ನೀಡುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ಸೌಜನ್ಯ ಯೋಜನೆಯ ಜಾಹಿರಾತು ಸಹಾಯವಾಣಿಗೆ ಸಂಪರ್ಕಿಸಿದ್ದರು. ಜತೆಗೆ ಅವರ ಪುತ್ರ ಕೀರ್ತಿ ಕುಮಾರ್‌ ಶೆಟ್ಟಿ ಅವರು ಫೆ. 22ರಂದು ಕೇಂದ್ರದ ರೂರಲ್‌ ಅರ್ಬನ್‌ ಎಲೆಕ್ಟ್ರಿಫಿಕೇಶನ್‌ ಲಿ. (ಆರ್‌ಇಸಿ) ಕಚೇರಿ ಸಂಪರ್ಕಿಸಿದ್ದು ಅಧಿಕಾರಿ ದೂರು ದಾಖಲಿಸಿದ್ದಾರೆ. ಅಲ್ಲದೇ ಅಲ್ಲಿಂದ ದೂರಿನ ಬಗ್ಗೆ ಮಂಗಳೂರಿನ ಮೆಸ್ಕಾಂ ಕಚೇರಿಗೆ ಸಂದೇಶ ಹೋಗಿದೆ. ಬಳಿಕ ಅಧಿಕಾರಿಗಳ ತಂಡ ಬೇಳೂರಿನಲ್ಲಿರುವ ವಿದ್ಯುತ್‌ ಸಂಪರ್ಕ ವಂಚಿತ ಮನೆಗಳಿಗೆ ಭೇಟಿ ನೀಡಿದ್ದು, ವಿದ್ಯುತ್‌ ಸಂಪರ್ಕವನ್ನು ದೂರು ಬಂದ 2 ತಿಂಗಳೊಳಗಾಗಿ ಕಲ್ಪಿಸಿದ್ದಾರೆ.

ಗ್ರಾ.ಪಂ.ವ್ಯಾಪ್ತಿಯ ಬೇಳೂರು ಉಗ್ರಾಣಿಬೆಟ್ಟಿನ ಸೀತಾನದಿ ಕರುಣಾಕರ ಶೆಟ್ಟಿ, ಮಧುಕರ ಶೆಟ್ಟಿ ಬೇಳೂರು, ಬಿ.ಗೋಪಾಲ ಬಾಯರಿ ದೇವಸ್ಥಾನ ಬೆಟು, ಮೊಗೆಬೆಟ್ಟಿನ ಅಪಘಾತದಲ್ಲಿ ತೀವ್ರ ಸ್ವರೂಪದ ಗಾಯಗಳಾಗಿ ಮನೆಯಲ್ಲಿಯೇ ಇರುವ ಚಂದ್ರಶೇಖರ್‌ ಇವರ ಪತ್ನಿ ಗೀತಾ ಮೊಗವೀರ, ಬೇಳೂರು ಕರಾಣಿಯ ಸುಜಾತ ಕುಲಾಲ್‌ ಅವರಿಗೆ ಸೌಜನ್ಯ ಯೋಜನೆಯ ಲಾಭವಾಗಿದೆ.

ಪ್ರಧಾನ ಮಂತ್ರಿ ಸಹಜ್‌ ಬಿಜಲೀ ಹರ್‌ ಘರ್‌ ಯೋಜನೆ – ಸೌಭಾಗ್ಯ
ದೇಶದ ಎಲ್ಲ ಮನೆಗಳಿಗೂ ಉಚಿತ ವಿದ್ಯುತ್‌ ಸಂಪರ್ಕ ನೀಡಲು ಭಾರತ ಸರಕಾರವು ಪ್ರಧಾನ ಮಂತ್ರಿ ಸಹಜ್‌ ಬಿಜಲೀ ಹರ್‌ ಘರ್‌ ಯೋಜನಾ – ಸೌಭಾಗ್ಯ ಆರಂಭಿಸಿದೆ. 2017 ಅಕ್ಟೋಬರ್‌ನಲ್ಲಿ ಈ ಯೋಜನೆ ಆರಂಭಗೊಂಡಿದ್ದು ಇಂದಿನ ವರೆಗೆಸುಮಾರು 2ಕೋಟ 51 ಲಕ್ಷ ಮನೆಗಳನ್ನು ಬೆಳಗಿಸಿದೆ. ಈಗಾಗಲೇ ರಾಜ್ಯದಲ್ಲಿ ಸೌಭಾಗ್ಯ ರಥ ಸಂಚರಿಸುತ್ತಿದ್ದು ಕಾರಣಾಂತರಗಳಿಂದ ವಿದ್ಯುದೀಕರಣವಾಗಿರದಿದ್ದಲ್ಲಿ ಉಚಿತವಾಗಿ ಸಹಾಯವಾಣಿಗೆ ಕರೆ ಮಾಡಬಹುದು.

ಪತ್ರ ಬರೆಯಲಾಗಿದೆ
ಈ ಹಿಂದೆ ಗ್ರಾ.ಪಂ. ವಿದ್ಯುತ್‌ ಸಂಪರ್ಕವಿಲ್ಲದವರ ಮನೆಗೆ ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗಾಗಿ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆಗೊಳಿಸಿ ಕಳುಹಿಸಲಾಗಿದ್ದು, ಮೆಸ್ಕಾಂ ಅದನ್ನು ತಿರಸ್ಕರಿಸಿತ್ತು. ಆದ್ದರಿಂದ ಸೌಜನ್ಯ ಯೋಜನೆಗೆ ಅವರ ಹೆಸರು ಸೇರ್ಪಡೆಯಾಗಿರಲಿಲ್ಲ. ಯಾವ ಆಧಾರದಲ್ಲಿ ಆ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ಮೆಸ್ಕಾಂನ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
– ವೀರಶೇಖರ್‌, ಪಿಡಿಒ, ಗ್ರಾ.ಪಂ. ಬೇಳೂರು

Advertisement

ಯಶಸ್ವಿಯಾಗಿದ್ದೇವೆ
ಕಳೆದ ಹದಿಮೂರು ವರ್ಷಗಳಿಂದ ವಿದ್ಯುತ್‌ ಸಂಪರ್ಕಕ್ಕಾಗಿ ಗ್ರಾ.ಪಂ.ನಲ್ಲಿ ಅರ್ಜಿ ನೀಡಿದರೂ ವಿದ್ಯುತ್‌ ಸಂಪರ್ಕಕ್ಕಾಗಿ ಗ್ರಾ.ಪಂ. ನಿರಾಕ್ಷೇಪಣಾ ಪತ್ರ ನೀಡದೆ ನಿರ್ಲಕ್ಷé ಧೋರಣೆಯನ್ನು ತಳೆದಿತ್ತು. ಈ ಹಿನ್ನೆಲೆಯಲ್ಲಿ ಫೆ. 22ರಂದು ಕೇಂದ್ರದ ರೂರಲ್‌ ಅರ್ಬನ್‌ ಎಲೆಕ್ಟ್ರಿಫಿಕೇಶನ್‌ ಕಚೇರಿ ಸಂಪರ್ಕಿಸಿ ಸೌಜನ್ಯ ಯೋಜನೆಯ ಅಡಿ ಕೇವಲ 2 ತಿಂಗಳಲ್ಲಿ ವಿದ್ಯುತ್‌ ಸಂಪರ್ಕ ಪಡೆಯಲು ಯಶಸ್ವಿಯಾಗಿದ್ದೇವೆ.
-ಸೀತಾನದಿ ಕರುಣಾಕರ ಶೆಟ್ಟಿ , ಸದಸ್ಯರು. ಗ್ರಾ.ಪಂ.ಬೇಳೂರು (ಅರ್ಜಿದಾರರು)

ಸಂಪರ್ಕ ಕಲ್ಪಿಸಲಾಗಿದೆ
ಸೌಜನ್ಯ ಯೋಜನೆಯ ಅಡಿಯಲ್ಲಿ ಈಗಾಗಲೇ ಸುಮಾರು 230 ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಈ 5 ಪ್ರಕರಣಗಳು ಮಾತ್ರ ವಿಶೇಷವಾಗಿದ್ದು ನೇರವಾಗಿ ಆರ್‌ಇಸಿ ಕಚೇರಿಗೆ ದೂರು ನೀಡಿ ವಿದ್ಯುತ್‌ ಸಂಪರ್ಕವನ್ನು ಪಡೆದುಕೊಂಡಿದ್ದಾರೆ.
-ಅಶೋಕ್‌ ಪೂಜಾರಿ , ಸ.ಕಾ.ಎಂಜಿನಿಯರ್‌, ಮೆಸ್ಕಾಂ ಕುಂದಾಪುರ

– ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next