ತೆಕ್ಕಟ್ಟೆ: ಬೇಳೂರು ಗ್ರಾ.ಪಂ.ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷ ಜಯಶೀಲ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜು.25 ರಂದು ಗ್ರಾ.ಪಂ. ಸಭಾ ಭವನದಲ್ಲಿ ನಡೆಯಿತು.
ಸಭೆ ಆರಂಭದಲ್ಲಿಯೇ ಗ್ರಾ.ಪಂ. ಸಿಬಂದಿ ವೀಣಾ ಅವರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಯ ವಿವರಗಳನ್ನು ವಿವರಿಸುತ್ತಿರುವ ಸಂದರ್ಭದಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿನ ಪ್ರತಿ ಕಾಮಗಾರಿಯ ವಿಚಾರಗಳನ್ನು ದಾಖಲೆ ಸಹಿತ ಗ್ರಾಮಸ್ಥರಿಗೆ ವಿವರಿಸುವಂತೆ ಆಗ್ರಹಿಸಿದ ಘಟನೆ ಕೂಡಾ ನಡೆಯಿತು.
ಈ ಸಂದರ್ಭದಲ್ಲಿ ಸ್ಥಳೀಯರಾದ ದಯಾನಂದ ಕೊಠಾರಿ ಮಾತನಾಡಿ, ನಾನು ಕೃಷಿಕನ ಮಗ. ನಾನು ಕೃಷಿ ಚಟುವಟಿಕೆಗಾಗಿ ಹುಲ್ಲು ಕಟಾವು ಯಂತ್ರವನ್ನು ಕೃಷಿ ಇಲಾಖೆಯಿಂದ ಸಿಗುವ ಸವಲತ್ತು ಪಡೆಯಬೇಕು ಎನ್ನುವ ನಿಟ್ಟಿನಿಂದ ಗ್ರಾ.ಪಂ.ನ ಶಿಫಾರಸ್ಸು ಪತ್ರಕ್ಕಾಗಿ ದಾಖಲೆ ಸಹಿತ ಮಾ.3 ರಂದು ಮನವಿ ನೀಡಿದ್ದೇನೆ . ಆದರೆ ಗ್ರಾ.ಪಂ. ಅಧ್ಯಕ್ಷರು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಶಿಫಾರಸ್ಸು ಪತ್ರವನ್ನು ನೀಡುತ್ತೇನೆ ಎಂದು ಹೇಳಿ ಶಿಫಾರಸ್ಸು ಪತ್ರ ಕೊಡುವಲ್ಲಿಯೂ ಕೂಡಾ ರಾಜಕೀಯ ಮಾಡಿದ್ದಾರೆ. ಇದರಿಂದ ರೈತರ ಮಗನಿಗೆ ಅನ್ಯಾಯವಾಗಿದೆ ಎಂದರು. ಪೂರಕವಾದ ದಾಖಲೆಗಳನ್ನು ನೀಡಿದರೂ ದುರುದ್ದೇಶ ಪೂರಕವಾಗಿ ರಾಜಕೀಯ ಮಾಡಿದ್ದಾರೆ ಎಂದು ಸಭೆಯಲ್ಲಿ ದಾಖಲೆಗಳನ್ನು ಪ್ರದರ್ಶಿಸಿದಾಗ ಗ್ರಾಮಸ್ಥರು ಒಂದಾಗಿ ಗ್ರಾ.ಪಂ.ಅಧ್ಯಕ್ಷರು ಸಾಮೂಹಿಕವಾಗಿ ರಾಜಿನಾಮೆ ನೀಡುವಂತೆ ಒತ್ತಾಯಿಸಿದರಲ್ಲದೇ, ಬಹಿರಂಗ ಕ್ಷಮೆಯಾಚಿಸುವಂತೆ ಪಟ್ಟು ಹಿಡಿಯುತ್ತಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ರು ಸಭೆಯಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ ಘಟನೆ ಕೂಡಾ ನಡೆಯಿತು.
ಈ ಕುರಿತು ಗ್ರಾ.ಪಂ.ಅಧ್ಯಕ್ಷ ಜಯಶೀಲ ಶೆಟ್ಟಿ ಅವರು ಪ್ರತಿಕ್ರಿಯಿಸಿ, ಕೃಷಿ ಪರಿಕರಕ್ಕಾಗಿ ಶಿಫಾರಸ್ಸು ಪತ್ರವನ್ನು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ, ಶಿಫಾರಸ್ಸು ಪತ್ರವನ್ನು ನೀವು ಮಾತ್ರ ಪಡೆದುಕೊಂಡು ಹೋಗಲಿಲ್ಲ ಎಂದು ಹೇಳಿದರು.
ನ್ಯಾಯವಾದಿ ಅವಿನಾಶ್ ಶೆಟ್ಟಿ ಬೇಳೂರು ಮಾತನಾಡಿ, ಈ ಬೇಳೂರು ಗ್ರಾಮದಲ್ಲಿ 1980ನೇ ಇಸವಿಯಲ್ಲಿ ಬೇಳೂರು ಗ್ರಾಮಕ್ಕೆ ರಸ್ತೆ ಇಲ್ಲದಾಗ ಚಂದು ಮಡಿವಾಳ (80) ಎನ್ನುವವರು ಗ್ರಾಮೀಣ ರಸ್ತೆಗಾಗಿ ತನ್ನ ಸ್ವಂತ ಜಾಗವನ್ನೇ ನೀಡಿದ್ದಾರೆ. ಅವರಲ್ಲಿರುವ 15.5 ಸೆಂಟ್ಸ್ ಜಾಗದಲ್ಲಿ 2017ನೇ ಇಸವಿಯಲ್ಲಿ ಮಗ ರವಿರಾಜ್ ಮಡಿವಾಳರಿಗಾಗಿ ವಾಣಿಜ್ಯ ಕಟ್ಟಡ ಕಟ್ಟಲು ಭೂ ಪರಿವರ್ತನೆ ಮಾಡಿ, ಗ್ರಾ.ಪಂ. ಗೆ ಕಟ್ಟಡ ನಿರ್ಮಾಣದ ಪರವಾನಿಗಾಗಿ ಅರ್ಜಿ ನೀಡುತ್ತಾರೆ ಎಂದು ಹೇಳಿದರು.
ಕಟ್ಟಡ ಪೂರ್ಣಗೊಂಡು ತಾತ್ಕಾಲಿಕ ವಿದ್ಯುತ್ ಸಂಪರ್ಕದಲ್ಲಿದ್ದ ಇವರು ಗ್ರಾ.ಪಂನಲ್ಲಿ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡುತ್ತಾರೆ. ಆವಾಗ ಮಾಜಿ ಅಧ್ಯಕ್ಷರು ಪರವಾನಿಗೆ ನೀಡಲು ನಿರಾಕರಿಸುತ್ತಾರೆ. ಆಗ ಅವರು ಕರ್ನಾಟಕ ಉಚ್ಛ ನ್ಯಾಯಾಲಯದ ಮೊರೆ ಹೋಗಿ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯುತ್ತಾರೆ. ಆದರೆ ಅವರ ವಿರುದ್ಧವೂ ಕೂಡಾ ಗ್ರಾ.ಪಂ.ನ ಖಾತೆಯಿಂದ ಸುಮಾರು 25 ಸಾವಿರವನ್ನು ಖರ್ಚು ಮಾಡಿ ಬಡ ಚಂದು ಮಡಿವಾಳ ಅವರ ಕಟ್ಟಡವನ್ನು ನೆಲ ಸಮಮಾಡಲು ಒತ್ತಾಯಿಸಿದ್ದು, ಹೈಕೋರ್ಟ್ ಆದೇಶಕ್ಕೂ ಬೆಲೆ ನೀಡದೇ ದ್ವೇಷ ರಾಜಕೀಯ ಮಾಡಿದ್ದಾರೆ. ಆದರೆ ನ್ಯಾಯಾಲಯದಲ್ಲಿ ನಾವು ಜಯಸಾಧಿಸಿದ್ದೇವೆ ಎಂದರು.
ಆದರೆ ಇಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಗ್ರಾ.ಪಂ.ಅಧ್ಯಕ್ಷರು 4ನೇ ವಾರ್ಡ್‌ನಲ್ಲಿ ನಿಯಮ ಮೀರಿ ವಾಣಿಜ್ಯ ಕಟ್ಟಡವನ್ನು ಕಟ್ಟಿದ್ದಾರೆ . ಭೂಪರಿವರ್ತನೆಯಾಗದೇ ಕಟ್ಟಡ ಹಾಗೂ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಆ ಕಟ್ಟಡವನ್ನು ಕೂಡಾ ನೆಲ ಸಮಗೊಳಿಸಬೇಕು. ಸಾಮಾನ್ಯ ನಾಗರಿಕನಿಗೂ ಒಂದೇ ಕಾನೂನು ಅಧ್ಯಕ್ಷರಿಗೂ ಒಂದೇ ಕಾನೂನು ಎಂದು ತೀವ್ರ ವಿರೋಧ ವ್ಯಕ್ತಪಡಿಸಿ, ಸಭೆಯಲ್ಲಿ ಮಹತ್ವದ ನಿರ್ಣಯ ತಗೆದುಕೊಳ್ಳುವಂತೆ ಒತ್ತಾಯಿಸಿದರು.
ಯುವ ಸಂಘಟಕ ಡಿ.ಸಿ.ಉಮೇಶ್ ಶೆಟ್ಟಿ ದೇಲಟ್ಟು ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ನಿರ್ಮಾಣಕ್ಕೆ ಸ್ಥಳ ಗುರುತು ಮಾಡಲಾಗಿದೆ. ಆದರೆ ಗ್ರಾಮ ಪಂಚಾಯತ್ ಅಭಿವೃದ್ದಿಯ ಬಗ್ಗೆ ಚಿಂತಿಸದೇ ವಸತಿ ಶಾಲೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸದಿರುವುದು ದುರದೃಷ್ಟಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಿನೇಶ್ ಶೆಟ್ಟಿ ದೇಲಟ್ಟು ಅವರು ಮಾತನಾಡಿ, ದೇಲಟ್ಟು ಗ್ರಾಮದಲ್ಲಿನ ಬಯಲು ಹಾಡಿಯಲ್ಲಿ ಶ್ಮಶಾನಕ್ಕಾಗಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸದೇ ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ. ಕಳೆದ 40 ವರ್ಷಗಳಿಂದಲೂ ಏಕಪಕ್ಷೀಯವಾಗಿ ಆಡಳಿತ ನಡೆಸಿ ಜನರ ಸಮಸ್ಯೆಗಳಿಗೆ ಯಾರೋ ಒಬ್ಬ ವ್ಯಕ್ತಿಯ ಮನೆಯ ಜಗುಲಿಯಲ್ಲಿ ಚರ್ಚಿಸುತ್ತಿರುವುದು ಖೇದಕರ ಸಂಗತಿ, ಹೆಣದ ಮೇಲೆ ರಾಜಕೀಯ ಮಾಡುತ್ತಿರುವ ಪದ್ಧತಿ ಸಂಪೂರ್ಣ ನಿರ್ಮೂಲನವಾಗಬೇಕಾಗಿದೆ ಎಂದು ಹೇಳಿದರು.
ಸದಾಶಿವ ಶೆಟ್ಟಿ ಮಾತನಾಡಿ, ಶಾಲಾ ಅವಧಿಯಲ್ಲಿ ಸರಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರನ್ನು ಗ್ರಾ.ಪಂ.ಗೆ ಕರೆಯುವುದು ಸರಿಯಲ್ಲ , ಅಲ್ಲದೇ ಗ್ರಾ.ಪಂ. ಸಿಬಂದಿಗಳನ್ನು ತಮ್ಮ ಸ್ವಂತ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಹಾಗೂ ಅನಾರೋಗ್ಯ ಪೀಡಿತರಿಗೆ ಧನ ಸಹಾಯ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ನೊಡೆಲ್ ಅಧಿಕಾರಿ ತುಳಸಿ, ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಕೊಠಾರಿ, ಗ್ರಾ.ಪಂ. ಸದಸ್ಯರಾದ ಬಿ.ಕರುಣಾಕರ ಶೆಟ್ಟಿ, ಸೀತಾನದಿ ಕರುಣಾಕರ ಶೆಟ್ಟಿ, ದೇವಕಿ, ಮುಕ್ತ, ರಾಣಿ.ಆರ್.ಶೆಟ್ಟಿ, ರಾಘವೇಂದ್ರ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ಸುನಿಲ್ ಸ್ವಾಗತಿಸಿ, ಕಾರ್ಯದರ್ಶಿ ಉದಯ ನಿರೂಪಿಸಿ, ವಂದಿಸಿದರು.
ಗ್ರಾಮಸ್ಥರ ಬೇಡಿಕೆ :
ಗ್ರಾ.ಪಂ.ಅಧ್ಯಕ್ಷರ ಸಾಮೂಹಿಕ ರಾಜಿನಾಮೆ ನೀಡಲಿ ಪೂರ್ಣಕಾಲಿಕ ಪಿಡಿಒ ನೇಮಿಸಿ ನಿಯಮ ಮೀರಿ ನಿರ್ಮಿಸಿದ ವಾಣಿಜ್ಯ ಕಟ್ಟಡ ತೆರವುಗೊಳಿಸಿ ದೇಲಟ್ಟು ಬಯಲು ಹಾಡಿ ಶ್ಮಶಾನಕ್ಕಾಗಿ ದುರ್ಬಳಕೆಯಾದ ಹಣದ ಬಗ್ಗೆ ತನಿಖೆಯಾಗಬೇಕು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಹಾಲುಡೈರಿ ಕಟ್ಟಡ ನಿರ್ಮಾಣಕ್ಕೆ ಸರಕಾರಿ ಜಾಗ ನೀಡಿ ಗುಳ್ಳಾಡಿ ಪ. ಕಾಲನಿಯಲ್ಲಿ ನಿರ್ಮಿಸಿದ ಇಂಗುಗುಂಡಿ ಸರಿಪಡಿಸಿ ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಿ ನೆರೆಯಿಂದ ಬೆಳೆಹಾನಿಯಾದ ರೈತರಿಗೆ ಪರಿಹಾರ ನೀಡಿ ಶಾಲಾ ಅವಧಿಯಲ್ಲಿ ಶಿಕ್ಷಕರನ್ನು ಗ್ರಾ.ಪಂ.ಗೆ ಕರೆಯಬೇಡಿ ಗ್ರಾ.ಪಂ. ಸಿಬಂದಿಗಳನ್ನು ಗ್ರಾ.ಪಂ.ಸದಸ್ಯರು ತಮ್ಮ ಸ್ವಂತ ಕೆಲಸಕ್ಕಾಗಿ ಬಳಸಿಕೊಳ್ಳಬೇಡಿ. ಎನ್‌ಆರ್‌ಇಜಿ ವೈಯಕ್ತಿಕ ಕಾಮಗಾರಿಗಳಿಗೆ ಜಿಎಸ್‌ಟಿ ಬಿಲ್ ಬೇಡ.