Advertisement

ಬಾರದ ಆ್ಯಂಬುಲೆನ್ಸ್‌: ಗರ್ಭದಲ್ಲೇ ಮಗು ಸಾವು

04:10 PM Aug 10, 2023 | Team Udayavani |

ಬೇಲೂರು: ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕದಿಂದ ಸಾರ್ವಜನಿಕರು, ಬಡವರು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುವುದೇ ಹೆಚ್ಚು. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಏನೆಲ್ಲಾ ಸೌಕರ್ಯ ಕಲ್ಪಿಸಿದರೂ ಎಡವಟ್ಟುಗಳು ನಿರಂತರ.

Advertisement

ಬೇಲೂರು ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್‌ ಚಾಲಕನ ವಿರುದ್ಧ ಗರ್ಭಿಣಿಯ ಪೋಷಕರು ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು ಒಂದೆಡೆಯಾದರೆ, ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ನಂತರ ಸಕಾಲಕ್ಕೆ ಆಸ್ಪತ್ರೆಗೆ ತಲುಪಲಾಗದ್ದರಿಂದ ತಾಯಿ ಗರ್ಭದಲ್ಲೇ ಹಸುಗೂಸು ಕಣ್ಮುಚ್ಚಿದ ಅಮಾನವೀಯ ಘಟನೆ ನಡೆದಿದೆ.

ಬೇಲೂರು ಪಟ್ಟಣದ ಅಂಬೇಡ್ಕರ್‌ ನಗರದ ನಿವಾಸಿ ಆಶಾರನ್ನು ಹಾಸನದ ವಾದಿರಾಜಗೆ ವಿವಾಹ ಮಾಡಿ ಕೊಡಲಾಗಿತ್ತು. 9 ತಿಂಗಳ ತುಂಬು ಗರ್ಭಿಣಿ ಆಶಾಗೆ ಇದೇ ತಿಂಗಳು 15ಕ್ಕೆ ಹೆರಿಗೆಯ ದಿನಾಂಕವನ್ನು ಕೊಡಲಾಗಿದ್ದು, ತವರುಮನೆ ಬೇಲೂರು (ಅಂಬೇಡ್ಕರ್‌ ನಗರ) ಬಂದಿದ್ದರು. ಮಂಗಳ ವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಶಾ ತಾಯಿಗೆ ತಿಳಿಸಿದ್ದು, ಬಳಿಕ 11 ಗಂಟೆಗೆ ಪಕ್ಕದ ಮನೆಯವರಿಗೆ ವಿಷಯ ತಿಳಿಸಲಾಗಿದೆ. ಬೇಲೂರಿನ ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್‌ ಚಾಲಕರಿಗೆ ಕರೆ ಮಾಡಿದರೂ ಸಹ ಯಾರು ಸಹ ಕರೆ ಸ್ವೀಕರಿಸಿಲ್ಲ ಎನ್ನಲಾಗಿದೆ.

ಆಶಾ ಅವರ ಅಮ್ಮ ಮಗನಿಗೆ ಕರೆ ಮಾಡಿದ್ದು, ಬರುವ ವೇಳೆಗೆ ಹೆರಿಗೆ ನೋವು ಹೆಚ್ಚಾಗಿದ್ದು, ತನ್ನ ವಾಹನದಲ್ಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ತಪಾಸಣೆಗೆ ಒಳಪಡಿಸಿದ ವೈದ್ಯರು ಮಗು ಗರ್ಭದಲ್ಲೇ ಅಸುನೀಗಿದೆ ಎಂದು ತಿಳಿಸಿದ್ದಾರೆ.

ಬೇಲೂರು ಆಸ್ಪತ್ರೆಯ ಆ್ಯಂಬುಲೆನ್ಸ್‌ ಚಾಲಕರು ಬೇಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಟ್ಟಣದಲ್ಲಿ ಈ ರೀತಿಯಾದರೆ ಗ್ರಾಮೀಣ ಭಾಗದ ಸ್ಥಿತಿಯೇನು ಗ್ರಾಮೀಣ ಭಾಗದವರ ಪಾಡೇನು? ಆ್ಯಂಬುಲೆನ್ಸ್‌ ಚಾಲಕರು ಸರಿಯಾಗಿ ಸ್ಪಂದಿಸುತ್ತಿಲ್ಲ. ತಾಲೂಕು ಆರೋಗ್ಯ ಅಧಿಕಾರಿಗಳು ಸಹ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಪೋಷಕರು, ಸಾರ್ವಜನಿಕರಿಂದ ಆರೋಪ ಕೇಳಿಬಂದಿದೆ.

Advertisement

ಆ್ಯಂಬುಲೆನ್ಸ್‌ ಚಾಲಕರ ಲಾಬಿ ಆರೋಪ :

ಕಳೆದ 15 ದಿನಗಳ ಹಿಂದೆ ಕುಶಾವಾರ ಗ್ರಾಮದ ವ್ಯಕ್ತಿಗೆ ವಿದ್ಯುತ್‌ ಸ್ಪರ್ಶ ಹಿನ್ನೆಲೆ ಬೇಲೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರ್ಕಾರಿ ಆಸ್ಪತ್ರೆಗೆ ವೈದ್ಯರು ಶಿಫಾರಸು ಮಾಡಿದರೆ, ಆ್ಯಂಬುಲೆನ್ಸ್‌ ಚಾಲಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸುಮಾರು 2 ಲಕ್ಷ ರೂ. ಬಿಲ್‌ ಬಂದಿದೆ. ಚಾಲಕ ಖಾಸಗಿ ಆಸ್ಪತ್ರೆಯೊಂದಿಗೆ ಶಾಮೀಲಾಗಿದ್ದಾರೆ ಎಂದು ಸಂಬಂಧಿಕರು ಆರೋಪಿಸಿ ಚಾಲಕನ ವಿರುದ್ಧ ತಾಲೂಕು ವೈದ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬುಧವಾರ ಆಸ್ಪತ್ರೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು.

ಆ್ಯಂಬುಲೆನ್ಸ್‌ ಚಾಲಕರಿಗೆ ಕರೆ ಬಂದಿಲ್ಲ: ಟಿಎಚ್‌ಒ :

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್‌, ಮಗು ಸಾವಿನ ಘಟನೆ ನಡೆಯಬಾರದಿತ್ತು. ತಾಲೂಕು ಆಸ್ಪತ್ರೆಯಲ್ಲಿ 6 ಆ್ಯಂಬುಲೆನ್ಸ್‌ಗಳಿದ್ದು, ಇದರಲ್ಲಿ 108 ಆ್ಯಂಬುಲೆನ್ಸ್‌ 30 ಕಿ.ಮಿ. ಒಳಗೆ ತೊಂದರೆಯಾದರೆ ಸ್ಥಳಕ್ಕೆ ಹೋಗಲಿದೆ. ಉಳಿದವುಗಳು ಹೆಚ್ಚಿನ ಚಿಕಿತ್ಸೆಗೆ ಹಾಸನ ಅಥವಾ ರೋಗಿಗಳು ಹೇಳಿದ ಕಡೆ ಹೋಗಿ ಬರಲಿವೆ. ಆದರೆ ಮಂಗಳವಾರ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಾಲಕ ಚರಣ್‌ ಮತ್ತು ಇನ್ನುಳಿದ ಚಾಲಕರನ್ನು ವಿಚಾರಿಸಿದಾಗ ನಮಗೆ ಯಾವುದೇ ಕರೆ ಬಂದಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ಈ ಸಂಖ್ಯೆಗೆ ಕರೆ ಮಾಡಿ :

ಗರ್ಭಿಣಿಯರಿಗೆ ಮತ್ತು ರೋಗಗ್ರಸ್ತ ಶಿಶುಗಳಿಗೆ ಯಾವುದೆ ತೊಂದೆರೆಯಾದರೆ ಜನನಿ ಸುರಕ್ಷಾವಾಹಿನಿ (ಜೆ.ಎಸ್‌.ವಿ) ಮೊ.8147796552 ಕರೆ ಮಾಡಲು ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್‌ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next