ಬೇಲೂರು: ಇಲ್ಲಿನ ವಿಧಾನ ಸಭಾ ಕ್ಷೇತ್ರದ ಶಾಸಕ ವೈ. ಎನ್.ರುದ್ರೇಶಗೌಡ (62) ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರಾಜ್ಯಸಭಾ ಚುನಾವಣೆಗೆ ಮತ ಚಲಾಯಿಸಲು ಬೆಂಗಳೂರಿಗೆ ತೆರಳಿದ್ದ ವೇಳೆ ಹಠಾತ್ ಹೃದಯಾಘಾತವಾಗಿ ವಿಕ್ರಂ ಆಸ್ಪತ್ರೆ ತುರ್ತು ನಿಗಾ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಮೃತರ ಪಾರ್ಥಿವ ಶರೀರ ಶನಿವಾರ ಸಂಜೆ 5ಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಚೀಕನಹಳ್ಳಿ ಅವರ ಸ್ವಗೃಹದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ರಾಜಕೀಯ ನಡೆ: ತಾಲೂಕಿನ ಯಮಸಂಧಿ ಗ್ರಾಮದ ಕಾಫಿ ಬೆಳೆಗಾರರಾದ ದಿ.ವೈ.ಡಿ.ನಂಜೇಗೌಡರ 3ನೇ ಮಗನಾಗಿ ಜನಿಸಿದ ರುದ್ರೇಶಗೌಡರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿಕಟ ಸಂಪರ್ಕದಿಂದ ರಾಜಕೀಯ ಪ್ರವೇಶಿಸಿದರು. 1986ರಲ್ಲಿ ಬೇಲೂರು ತಾಲೂಕು ಕಳ್ಳೇರಿ ಕ್ಷೇತ್ರದಿಂದ ಜಿಲ್ಲಾ ಪರಿಷತ್ ಸದಸ್ಯರಾದರು. 1996ರಲ್ಲಿ ಲೋಕಸಭೆ ಪದಾರ್ಪಣೆ ಮಾಡಿದರು. 2008ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ವಿಧಾನ ಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಪುನಃ 2013ರಲ್ಲಿ ದಾಖಲೆ ನಿರ್ಮಿಸಿದ್ದರು.
ಸೋದರನಿಗೆ ಟಿಕೆಟ್: ಮಿತ ಭಾಷಿ ಆದ ರುದ್ರೇಶಗೌಡರಿಗೆ ಕಳೆದ 5 ವರ್ಷದಿಂದ ಅನಾರೋಗ್ಯ ಕಾಡುತ್ತಲೇ ಇತ್ತು. ಹೀಗಾಗಿ 2018ರ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆಯಿಲ್ಲದ ಕಾರಣ ತಮ್ಮ ಸಹೋದರ ವೈ.ಎನ್.ಕೃಷ್ಣೇಗೌಡರಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಮೇಲೆ ಒತ್ತಡ ಹೇರುತ್ತಿದ್ದರು .