ಬೆಳ್ತಂಗಡಿ : ಧರ್ಮಸ್ಥಳ ಸಮೀಪ ಪತ್ತೆಯಾದ ಸುಟ್ಟ ಸ್ಥಿತಿಯಲ್ಲಿದ್ದ ಶವದ ಗುರುತು ಪತ್ತೆಹಚ್ಚುವಲ್ಲಿ ಆತನ ಬೆಲ್ಟಿನಲ್ಲಿದ್ದ ಪಿಸ್ತೂಲ್ ಪೊಲೀಸರಿಗೆ ಮಹತ್ವದ ಸಹಾಯ ಮಾಡಿದೆ! ಧರ್ಮಸ್ಥಳದಿಂದ 3 ಕಿ.ಮೀ. ದೂರದಲ್ಲಿ ಪಟ್ರಮೆ ದಾರಿಯಲ್ಲಿ ರಸ್ತೆ ಬದಿ ಗುಂಡಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಸುರೇಶ್ ಅವರ ಶವ ಪತ್ತೆಯಾಗಿತ್ತು.
ಯಾವ ಕುರುಹು ಕೂಡ ಇರಲಿಲ್ಲ. ಪೊಲೀಸರಿಗೆ ಕಠಿನ ಸವಾಲಾಗಿತ್ತು. ಈ ಹಾದಿಯಲ್ಲಿ ಕಾಡು ಹಂದಿಗಳು ದೇಹವನ್ನು ಛಿದ್ರ ಮಾಡಿದರೆ ಇನ್ನಷ್ಟು ಗೋಜಲಾಗುವ ಸಾಧ್ಯತೆಯಿದ್ದು, ಹೆಚ್ಚಿನ ಜನರಿಗೆ ಅರಿವಿರದ ಹಾದಿಯಾದ ಕಾರಣ ಗುರುತು ಸಿಗಲು ಸಾಧ್ಯವೇ ಇಲ್ಲ ಎಂಬುದು ಹಂತಕರ ಲೆಕ್ಕಾಚಾರವಾಗಿತ್ತು.
ಈ ಸವಾಲನ್ನು ಸ್ವೀಕರಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ತಂಡಕ್ಕೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಹಿರಿಯ ಅಧಿಕಾರಿಗಳು ತನಿಖೆಗೆ ಮಾರ್ಗದರ್ಶನ ನೀಡಿದರು. ಅದರಂತೆ ಅದೇ ದಿನ ದೂರು ದಾಖಲಾದ ಮಲವಂತಿಗೆ ಗ್ರಾಮದ ಮಾಲ್ದಂಗೆ ಮನೆ ಸುರೇಶ್ ನಾಯ್ಕ (30) ನಾಪತ್ತೆಯಾಗಿದ್ದಾರೆ ಎಂಬ ನಿಟ್ಟಿನಲ್ಲಿ ತನಿಖೆ ಆರಂಭವಾಯಿತು.
ಆದರೆ ಗುರುತು ಪತ್ತೆ ಮಾಡುವುದು ತ್ರಾಸದಾಯಕವಾಗಿತ್ತು. ಯುವಕನ ಸಂಬಂಧಿಕರು ಗುರುತು ಪತ್ತೆ ಹಚ್ಚಲು ವಿಫಲರಾದರು. ಆದರೆ ಯುವಕನ ಮನೆ ಸಮೀಪದ 13ರ ಹರೆಯದ ಬಾಲಕ ಪತ್ತೆಹಚ್ಚಿದ. ಮಾಮ ಹೊರಡುವಾಗ ನಾನು ನೋಡಿದ್ದೆ, ಅವರು ಇನ್‌ಶರ್ಟ್ ಮಾಡಿದ್ದರು. ಬೆಲ್ಟ್ ಸ್ಪಷ್ಟವಾಗಿ ಕಾಣುತ್ತಿತ್ತು. ಅದರಲ್ಲಿ ಪಿಸ್ತೂಲಿನ ಚಿತ್ರ ಇತ್ತು. ಇಂಥದ್ದೇ ಬೆಲ್ಟ್ ಧರಿಸಿದ್ದರು ಎಂದು ಹೇಳಿದ. ಅದರ ಆಧಾರದಲ್ಲಿ ಪೊಲೀಸರು ಸುರೇಶ್ ಅವರ ದೂರವಾಣಿ ಕರೆಗಳ ಪಟ್ಟಿ ತೆಗೆದು ಕರೆ ಮಾಡಿದವರ ಬೆನ್ನತ್ತಿದಾಗ ಚಾರ್ಮಾಡಿಯ ವಿನಯ್ ಕುಮಾರ್ ಸೆರೆಯಾದ. ಆತ ಬಾಯಿ ಬಿಟ್ಟಂತೆ ಒಬ್ಬೊಬ್ಬರನ್ನೇ ಬಂಧಿಸಲಾಯಿತು.
ಬಂಧಿತರಾದ ಬೆಳ್ತಂಗಡಿ ತಾಲೂಕು ನಾವರ ಗ್ರಾಮದ ನಾವರ ಧರ್ಮಗುಡಿಯ ಆನಂದ ನಾಯ್ಕ (35), ಮೂಡುಕೋಡಿ ಗ್ರಾಮದ ಮೂಡಕೋಡಿ ಮನೆ ಪ್ರಕಾಶ (31), ಮೇಲಂತ ಬೆಟ್ಟು ಗ್ರಾಮದ ಪಕ್ಕಿದಕಲ ಮನೆ ನಾಗರಾಜ (39), ಬೆಳ್ತಂಗಡಿ ಚರ್ಚ್ ರಸ್ತೆಯ ಪ್ರವೀಣ್ (35), ಚಾರ್ಮಾಡಿಯ ಮಾರಿಗುಡಿಯ ಬಳಿಯ ವಿನಯ ಕುಮಾರ್ (30), ಬಂಟ್ವಾಳ ತಾಲೂಕು ಪುದು ಗ್ರಾಮದ ಕೊಡ್ಮಣ್ ಕಾಪಿಕಾಡ್ ಮನೆ ಲೋಕೇಶ್ (34) ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಆನಂದ ಎಂಬಾತ ವಿವಾಹ ನಿಶ್ಚಿತಾರ್ಥವಾಗಬೇಕಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಆತ ಎರಡು ಮಕ್ಕಳ ತಂದೆ ಹಾಗೂ ಮಹಮ್ಮಾಯಿ ಗುಡಿಯ ಅರ್ಚಕ. ಒಮ್ಮೆ ಅವರಿಬ್ಬರ ಪ್ರೀತಿಗೆ ತಡೆಯಾಗಿ ಬಾಂಧವ್ಯದಲ್ಲಿ ಹುಳಿಯಾಗಿತ್ತು. ಅನಂತರ ಮಾತುಕತೆ ಮೂಲಕ ಸರಿಯಾಗಿ ಮತ್ತೆ ಮನೆ ಮಂದಿ ಹೋಗಿ ಬರುವಲ್ಲಿವರೆಗೂ ಇತ್ತು. ವಿವಾಹ ನಿಶ್ಚಿತಾರ್ಥಕ್ಕೂ ಬರುವುದಾಗಿ ಆನಂದ ತಿಳಿಸಿದ್ದ. ಆದರೆ ಪ್ರೀತಿಸಿದ್ದ ಯುವತಿಗೆ ಆತನ ಮನಸ್ಸಲ್ಲಿದ್ದ ದ್ವೇಷದ ಕಿಡಿ ಗೊತ್ತೇ ಆಗಲಿಲ್ಲ. ಯುವತಿಯ ಅಪ್ಪನಿಗೂ ಗೊತ್ತಾಗಲಿಲ್ಲ. ಯುವತಿಯ ಭಾವನಿಗೆ ಕೂಡ ಮಾಹಿತಿ ಇರಲಿಲ್ಲ. ಆದರೆ ಆನಂದ ಕೇಳಿದ ಎಂದು ಸುರೇಶನ ದೂರವಾಣಿ ಸಂಖ್ಯೆ ಕೊಟ್ಟಿದ್ದರು.