Advertisement

ಬೆಳ್ತಂಗಡಿ: ಬಯಲಾಯಿತು ವಿಕೋಪದ ಬರೆ

02:15 AM Aug 12, 2019 | sudhir |

ಬೆಳ್ತಂಗಡಿ: ಮಳೆ ಕಡಿಮೆಯಾಗಿ ನೆರೆ ಇಳಿಯುತ್ತಿದ್ದಂತೆ ಬೆಳ್ತಂಗಡಿ ತಾಲೂಕಿನಲ್ಲಿ ಅದು ನಡೆಸಿದ ನಾಶ ನಷ್ಟದ ಸ್ಪಷ್ಟ ಚಿತ್ರಣ ಹೊರಲೋಕಕ್ಕೆ ಅನಾವರಣವಾಗುತ್ತಿದೆ.

Advertisement

ಮಳೆ- ಪ್ರವಾಹದಿಂದ ಪಶ್ಚಿಮ ಘಟ್ಟದ ಸೆರಗುಗಳ ಮಣ್ಣು ಕುಸಿದು ನೀರಿನೊಂದಿಗೆ ಮರಗಳು, ಬಂಡೆ ಗಲ್ಲುಗಳ ಜತೆ ಸೇರಿ ಹರಿದು ಬಂದ ಅನಾಹುತ ತಾಲೂಕಿನ ನದಿ ತಟದ ಪ್ರದೇಶವನ್ನೆಲ್ಲ ಬಯಲಾಗಿಸಿದೆ. ಸಾವಿರಾರು ಹೆಕ್ಟೇರ್‌ ಕೃಷಿ ಭೂಮಿ ಸೇರಿದಂತೆ ಜನವಸತಿ ಪ್ರದೇಶ ರಾಡಿ ಮಿಶ್ರಿತ ಮರಳಿನಿಂದ ಮಟ್ಟಸವಾಗಿದೆ.

ಶತಮಾನಗಳಿಂದ ಬದುಕು ಕಟ್ಟಿದ್ದ ಕೃಷಿ ಭೂಮಿ, ಪೂರ್ವಜರು ಬಾಳಿ ಬದುಕಿದ ಮನೆ, ದಾಖಲೆ ಪತ್ರಗಳು ಸರ್ವನಾಶವಾಗಿವೆ. ಸಂಪರ್ಕ ಸೇತುವೆಗಳು ಮುರಿದು ಬಿದ್ದಿವೆ. ಬೃಹತ್‌ ಮರದ ದಿಮ್ಮಿಗಳು ಛಿದ್ರವಾಗಿ ಮಲಗಿರುವುದು ಪ್ರವಾಹದ ಭೀಭತ್ಸ ಸ್ವರೂಪವನ್ನು ಬಿಚ್ಚಿಡುತ್ತಿದೆ.

ಅಧಿಕಾರಿಗಳು ದೌಡು
ನೆರೆ ಪೀಡಿತ ಪ್ರದೇಶಕ್ಕೆ ರವಿವಾರ ಜನಪ್ರತಿನಿಧಿಗಳು, ಅಧಿಕಾರಿಗಳ ತಂಡವೇ ದೌಡಾಯಿಸಿ ಬಂದಿದೆ. ಸಂಸದ ನಳಿನ್‌ ಕುಮಾರ್‌ ಕಟೀಲು, ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿ ಕಾರಿ ಶಶಿಕಾಂತ ಸೆಂಥಿಲ್‌, ಎಸ್‌.ಪಿ. ಬಿ.ಎಂ. ಲಕ್ಷ್ಮೀಪ್ರಸಾದ್‌ ಮತ್ತಿತರರು ಸಂತ್ರಸ್ತರ ನೋವನ್ನು ಆಲಿಸಿ ಸೂಕ್ತ ಪರಿಹಾರಕ್ಕಾಗಿ ತತ್‌ಕ್ಷಣ ಕ್ರಮದ ಭರವಸೆ ನೀಡಿದ್ದಾರೆ.

ಪುನರ್ವಸತಿಗೆ ಸಂಕಷ್ಟ
200ಕ್ಕೂ ಅಧಿಕ ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಪುನರ್ವಸತಿ ಸವಾಲಾಗಿದೆ. ಪ್ರಾಕೃತಿಕ ವಿಕೋಪ ನಿಧಿಯಿಂದ ತುರ್ತು ಪರಿಹಾರವಾಗಿ 95 ಸಾವಿರ ರೂ. ಸಿಗುತ್ತಿದ್ದು, ಅಷ್ಟರಲ್ಲಿ ಮನೆ ನಿರ್ಮಾಣ ಅಸಾಧ್ಯ. ಉಳಿದಂತೆ ಕೃಷಿ  ಪ್ರದೇಶಗಳಿಗೆ ಎಕರೆಗೆ 12 ಸಾವಿರ ರೂ. ಸಿಗುತ್ತದೆ. ಇದರಿಂದ ಕೃಷಿ ಮರುಸೃಷ್ಟಿಯಾಗದು. ಈ ನಿಟ್ಟಿನಲ್ಲಿ ತೀವ್ರ ಹಾನಿಗೊಳಗಾದ ಮನೆಗಳಿಗೆ ಕೊಡಗು ವಿಶೇಷ ಪ್ಯಾಕೇಜ್‌ ರೀತಿಯಲ್ಲಿ 5 ಲಕ್ಷ ರೂ. ಪರಿಹಾರ ನೀಡಬೇಕೆಂಬ ಕೂಗು ಕೇಳಿ ಬಂದಿದೆ.

Advertisement

ಸೇತುವೆಗಳಿಂದ ಮರ ತೆರವು
ವಿವಿಧ ಸೇತುವೆಗಳಲ್ಲಿ ಸಿಲುಕಿರುವ ಬೃಹದಾ ಕಾರದ ಮರಗಳ ತೆರವಿಗೆ 50 ಜೆಸಿಬಿ, 10 ಕ್ರೇನ್‌ ಸತತ ಕಾರ್ಯಾಚರಣೆಗಿಳಿದಿವೆ. 10 ಸಾವಿರಕ್ಕೂ ಅಧಿಕ ಮರಗಳ ತೆರವು ಸವಾಲಾಗಿದೆ.

ತೋಟ ಮರುಭೂಮಿ ಸಾಧ್ಯತೆ
ಮೂರ್ನಾಲ್ಕಡಿ ಶೇಖರವಾಗಿರುವ ಮರಳಿನ ರಾಶಿ ಕೃಷಿ ಚಟುವಟಿಕೆ ಮುಂದುವರಿಸದ ಪರಿಸ್ಥಿತಿ ನಿರ್ಮಿಸಿದ್ದು, ಹೂಳೆತ್ತಲು ಹಲವು ತಿಂಗಳುಗಳೇ ಬೇಕು.

ಭರದಿಂದ ಸಾಗಿದೆ ರಕ್ಷಣೆ
80 ಮಂದಿಯ ಎನ್‌ಡಿಆರ್‌ಎಫ್‌ ತಂಡ ಮೂರು ಭಾಗವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಮಲೆಕುಡಿಯರ ರಕ್ಷಣೆಗೆಂದೇ ಒಂದು ತಂಡ ಬಾಂಜಾರು ಮಲೆಯಲ್ಲಿ ಠಿಕಾಣಿ ಹೂಡಿದೆ. ಬೆಳ್ತಂಗಡಿ, ಉಪ್ಪಿನಂಗಡಿ, ಮೂಡುಬಿದಿರೆಯ ಅಗ್ನಿಶಾಮಕ ತಂಡ, 20ಕ್ಕೂ ಅಧಿಕ ಪೊಲೀಸರ ತಂಡ ಸಾಥ್‌ ನೀಡುತ್ತಿದೆ.

ಯುವತಿಯ ರಕ್ಷಣೆ
ಸೇತುವೆ ದಾಟಿ ಬೆಳ್ತಂಗಡಿಗೆಂದು ಬಂದಿದ್ದ ಬಾಂಜಾರು ಮಲೆಯ ಸಂಗೀತಾ ಎಂಬವರು ಹಿಂದಿರುಗ ಲಾಗದೆ ಸಂಕಷ್ಟದಲ್ಲಿದ್ದರು. ಅವರನ್ನು ರಕ್ಷಣಾ ತಂಡ ನದಿ ದಾಟಿಸಿದೆ.

ಭಾವನಾತ್ಮಕ ಸಂಪರ್ಕ ಕಡಿತ
ಮಳೆಗೆ ಡಿಸಿ ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದರಿಂದ ಪೋಷಕರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಇತ್ತ ಸೇತುವೆ ಕುಸಿತದಿಂದ ಹಿಂದಿರುಗಲಾಗದೆ ಮಕ್ಕಳನ್ನು ಕಾಣದೆ ಭಯಭೀತರಾಗಿದ್ದರು. ಕೊನೆಗೆ ರಕ್ಷಣಾ ತಂಡವೇ ಸಂಪರ್ಕ ಸೇತುವಾಯಿತು.

ಅನಾರಿಗೆ ಜಿಲ್ಲಾಧಿಕಾರಿ ಭೇಟಿ
ಕತ್ತರಿಗುಡ್ಡ ಅನಾರು ಸಂಪರ್ಕ ಸೇತುವೆ ಕಡಿತಗೊಂಡ ಮಲೆಕುಡಿಯ ಕಾಲನಿಗೆ ಜಿಲ್ಲಾಧಿಕಾರಿಗಳು ರಕ್ಷಣಾ ತಂಡದೊಂದಿಗೆ ಬೋಟ್‌ ಸಹಾಯದಿಂದ ನದಿ ದಾಟಿ ಸಂತ್ರಸ್ತರನ್ನು ಭೇಟಿಯಾಗಿದ್ದಾರೆ. 21 ಕುಟುಂಬವಿರುವ ಅನಾರು ಜನರ ಸುರಕ್ಷತೆಗೆ ಸಂಪೂರ್ಣ ಕ್ರಮ ಕೈಗೊಂಡು ಒಂದು ಪಿಕಪ್‌ ಲೋಡ್‌ ಆಹಾರ ಸಾಮಗ್ರಿ ವಿತರಿಸಲಾಗಿದೆ. ಸಮೀಪದ ಬಾಂಜಾರು ಮಲೆಗೂ ಜಿಲ್ಲಾಧಿಕಾರಿ ತೆರಳಲು ಬಯಸಿದ್ದರೂ ಸಂಪರ್ಕ ಕಡಿತದಿಂದ ಸಾಧ್ಯವಾಗಿಲ್ಲ. ಅಲ್ಲಿಗೂ ಒಂದು ಲೋಡ್‌ ಆಹಾರ ಸಾಮಗ್ರಿ ಕಳುಹಿಸಲಾಗಿದೆ.

ವಿಶೇಷ ಪ್ಯಾಕೇಜ್‌ಗೆ ಆಗ್ರಹ
ಬೆಳ್ತಂಗಡಿ ತಾಲೂಕಿಗೆ ರವಿವಾರ ಭೇಟಿ ನೀಡಿದ ಜನಪ್ರತಿನಿಧಿಗಳಾದ ನಳಿನ್‌ ಕುಮಾರ್‌ ಕಟೀಲು, ಕೋಟ ಶ್ರೀನಿವಾಸ ಪೂಜಾರಿ, ಯು.ಟಿ. ಖಾದರ್‌ ಕಳೆದ ವರ್ಷ ಕೊಡಗು ಜಿಲ್ಲೆಗೆ ನೀಡಿದಂತಹುದೇ ವಿಶೇಷ ಪರಿಹಾರ ಪ್ಯಾಕೇಜ್‌ ಅನ್ನು ಬೆಳ್ತಂಗಡಿಗೂ ಘೋಷಿಸ ಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.

ಗರ್ಭಿಣಿ ಸುರಕ್ಷಿತ
ಚಾರ್ಮಾಡಿ ಫರ್ಲಾನಿಯ ತಾಯಿ ಮನೆಗೆ ಬಂದಿದ್ದ ಗರ್ಭಿಣಿ ದಿವ್ಯಾ ಶಿವಕುಮಾರ್‌ ಮತ್ತು ಶ್ವೇತಾ ಅವರನ್ನು ರಕ್ಷಣಾ ತಂಡ ಸಾಹಸದಿಂದ ಫರ್ಲಾನಿ ಸೇತುವೆ ದಾಟಿಸಿದ ಶನಿವಾರದ ಚಿತ್ರಣ ಎಲ್ಲೆಲ್ಲೂ ಮನ ಮಿಡಿದಿತ್ತು. ದಿವ್ಯಾ ಅವರೀಗ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶ್ವೇತಾ ಕಕ್ಕಿಂಜೆ ಸಮೀಪ ತಮ್ಮ ಸ‌ಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಜಿಲ್ಲೆಯಲ್ಲಿ 73 ಮನೆಗಳಿಗೆ ಹಾನಿಯಾಗಿದೆ, 31 ಸಂತ್ರಸ್ತ ಕೇಂದ್ರ ತೆರೆಯಲಾಗಿದ್ದು, 1,129 ಮಂದಿ ಅಲ್ಲಿದ್ದಾರೆ. ಎಲ್ಲೆಡೆ ರಕ್ಷಣೆಗೆ ಮುಂದಾಗಿದ್ದೇವೆ. ತುರ್ತು ಅವಶ್ಯವಿರುವ ವಸ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳೆಲ್ಲರೂ ಸಂತ್ರಸ್ತರ ಜತೆಗಿದ್ದೇವೆ. ಭಯಪಡಬೇಕಿಲ್ಲ.
– ಶಶಿಕಾಂತ್‌ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next