ಮಂಗಳೂರು/ಉಡುಪಿ: ಬೆಳ್ತಂಗಡಿ ತಾಲೂಕಿನಲ್ಲಿ ಶನಿವಾರ ಸಿಡಿಲು-ಮಿಂಚಿನಿಂದ ಕೂಡಿದ ಗಾಳಿ ಮಳೆಯಾಗಿದೆ. ಸಿಡಿಲು ಬಡಿದು ವ್ಯಕ್ತಿಯೋರ್ವರು ಗಾಯಗೊಂಡಿದ್ದಾರೆ.
ಕಡಿರುದ್ಯಾವರ ಪರಿಸರದಲ್ಲಿ ಗಾಳಿಗೆ ಗ್ರಾ.ಪಂ. ಸದಸ್ಯ ನೇಮಿರಾಜ್ ಅವರ ಕಟ್ಟಡ, ಚೋಮ ಅವರ ಮನೆ ಹಾಗೂ ನೀಲಯ್ಯ ಗೌಡ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ.
ರಾಜೇಶ್ ಕಾನರ್ಪ ಅವರಿಗೆ ಸೇರಿದ ರಬ್ಬರ್, ಅಡಿಕೆ, ತೆಂಗಿನ ಮರಗಳು ನೆಲಕ್ಕೊರಗಿವೆ. ಸುಮಾರು 20 ಮನೆಗಳಿಗೆ ಸೇರಿದ ರಬ್ಬರ್ ಹಾಗೂ ಅಡಿಕೆ ಮರಗಳಿಗೆ ಹಾನಿಯಾಗಿದೆ.
ಕಡಿರುದ್ಯಾವರ ಗ್ರಾಮದ ಎರ್ಮಾಲಪಲ್ಕೆ ನಿವಾಸಿ ಜಯಗೌಡ ಅವರು ಕಾನರ್ಪ ಪಣಿಕಲ್‌ನಲ್ಲಿ ತನಿಯ ಅವರಿಗೆ ಸೇರಿದ ಮರದ ಗೆಲ್ಲು ಕಡಿಯಲು ಮರ ಹತ್ತಿದ್ದ ವೇಳೆ ಸಿಡಿಲು ಬಡಿದು ಗಂಭೀರ ಗಾಯಗೊಂಡಿದ್ದಾರೆ. ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸುಳ್ಯ ಪರಿಸರದಲ್ಲಿ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಬಜಪೆ ಪರಿಸರದಲ್ಲಿ ಬೆಳಗ್ಗೆ ಮೋಡ ಕಂಡಿತ್ತಾದರೂ ಮಳೆಯಾಗಿಲ್ಲ. ನಾರಾವಿ ಪರಿಸರದಲ್ಲಿ ಗುಡುಗು- ಸಿಡಿಲು ಕಾಣಿಸಿಕೊಂಡಿತ್ತು. ಮೂಲ್ಕಿ- ಸುರತ್ಕಲ್ ಪ್ರದೇಶದಲ್ಲಿ ಸಂಜೆ ವೇಳೆ ತಣ್ಣನೆ ವಾತಾವರಣ ನೆಲೆಸಿತ್ತು.
ತೆಕ್ಕಟ್ಟೆ, ಬೇಳೂರು, ಕೆದೂರು, ಕುಂಭಾಸಿ, ಹೆಸ್ಕಾತ್ತೂರು ಭಾಗಗಳಲ್ಲಿ ಮಿಂಚು ಸಹಿತ ಉತ್ತಮ ಮಳೆಯಾದರೆ, ಕೊಲ್ಲೂರು, ಜಡ್ಕಲ್, ಮುದೂರು, ವಂಡ್ಸೆ, ಕೋಟೇಶ್ವರ, ಗೋಪಾಡಿ ಮೊದಲಾದೆಡೆ ಮಿಂಚು ಸಹಿತ ಸಾಧಾರಣ ಮಳೆಯಾಗಿದೆ. ಉಡುಪಿ, ಕಾರ್ಕಳದಲ್ಲಿ ಹನಿಹನಿ ಮಳೆ ಬಂದಿದೆ.