ಬೆಳ್ತಂಗಡಿ : ದೇಶದ ದೀನರು, ದುರ್ಬಲರೇ ದೇವರಾಗಿದ್ದು, ಅವರಿಗೆ ಅನ್ನ, ವಿದ್ಯೆ, ಶಕ್ತಿ ನೀಡಿದಾಗಲೇ ನಾವು ನಿಜವಾದ ಮಾನವರಾಗಲು ಸಾಧ್ಯ. ವಿವೇಕಾನಂದರ ವೈಚಾರಿಕತೆಯೇ ಭಾರತ ವನ್ನು ವಿಶ್ವಗುರುವನ್ನಾಗಿರುವ ಶಕ್ತಿಯನ್ನು ಹೊಂದಿದೆ ಎಂದು ಎಬಿವಿಪಿಯ ರಾಷ್ಟ್ರೀಯ ಉಪಾಧ್ಯಕ್ಷ ಡಾ| ಬಿ.ವಿ.ವಸಂತ್‌ಕುಮಾರ್ ಹೇಳಿದರು.
ಅವರು ಶನಿವಾರ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ವಿವೇಕ ಹಬ್ಬ -2019 ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಎಬಿವಿಪಿ ಸಂಘಟನೆಯು ವ್ಯಕ್ತಿತ್ವ ನಿರ್ಮಾಣ ಹಾಗೂ ದೇಶ ಕಟ್ಟುವ ಯುವಕರನ್ನು ಸಿದ್ಧ ಮಾಡುತ್ತಿದ್ದು, ಸ್ವಾಮಿ ವಿವೇಕಾನಂದರೇ ಈ ಸಂಘಟನೆಯ ಸರ್ವಸ್ವವೂ ಆಗಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್‌ಡಿಎಂ ಕಾಲೇಜಿನ ಉಪಪ್ರಾಂಶುಪಾಲ ಪ್ರೊ| ಸತೀಶ್ಚಂದ್ರ ಎಸ್. ಮಾತನಾಡಿ, ಯುವಕರು ಒಂದು ಜಲಾಶಯ ರೀತಿಯಲ್ಲಿ ಜತೆಯಾಗಬೇಕಿದ್ದು, ಆಗ ಮಾತ್ರ ಅವರಿಂದ ಸಮಾಜಮುಖೀ ಕಾರ್ಯಗಳು ಹೊರಬರಲು ಸಾಧ್ಯವಾಗಿದೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ವಿವೇಕ ಹಬ್ಬ ಕಾರ್ಯಕ್ರಮವನ್ನು ಆಯೋಜಿಸುವುದು ಯುವಕ ಬಾಳಿಗೆ ನಿಜವಾದ ಅರ್ಥಕೊಡುವ ಕಾರ್ಯವಾಗಿದೆ ಎಂದು ತಿಳಿಸಿದರು.
ಎಬಿವಿಪಿ ನಗರ ಅಧ್ಯಕ್ಷ ಡಾ| ಶಶಿಕಾಂತ್ ಕುರೋಡಿ, ತಾಲೂಕು ಸಂಚಾಲಕ ಅಜಯ್ ಪ್ರಭು, ನಗರ ಕಾರ್ಯದರ್ಶಿಗಳಾದ ವಿಘ್ನೇಶ್ ಲಾೖಲ, ಭಗತ್, ಗುರುಪ್ರಸಾದ್ ಉಪಸ್ಥಿತರಿದ್ದರು. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕೇಶವ ಬಂಗೇರ ಸ್ವಾಗತಿಸಿದರು. ಜಿಲ್ಲಾ ಪ್ರಮುಖ್ ಡಾ| ರವಿ ಮಂಡ್ಯ ವಂದಿಸಿದರು. ಪೃಥ್ವೇಶ್ ನಿರೂಪಿಸಿದರು.
ಅನುಷ್ಠಾನ
ವಿವೇಕಾನಂದರ ವಿಚಾರಗಳು ಸೆಮಿನಾರ್, ಪುಸ್ತಕಗಳಿಗೆ ಸೀಮಿತವಾಗದೆ ಬದುಕಿನಲ್ಲಿ ಅನುಷ್ಠಾನಕ್ಕೆ ಬಳಕೆಯಾಗಬೇಕು. ವ್ಯಕ್ತಿತ್ವ ನಿರ್ಮಾಣವಾದಾಗ ಮಾತ್ರ ರಾಷ್ಟ್ರದ ನಿರ್ಮಾಣ ಸಾಧ್ಯವಾಗುತ್ತದೆ. ಪ್ರಸ್ತುತ ರಾಷ್ಟ್ರವಾದವನ್ನು ಕೋಮುವಾದ ಎಂಬ ರೀತಿಯಲ್ಲಿ ಅಪಪ್ರಚಾರ ಮಾಡುವ ಕಾರ್ಯವೂ ನಡೆಯುತ್ತಿದೆ.
– ಡಾ| ವಸಂತ್‌ಕುಮಾರ್
ಎಬಿವಿಪಿ ರಾಷ್ಟ್ರೀಯ ಉಪಾಧ್ಯಕ್ಷರು