Advertisement

ಬೆಳ್ತಂಗಡಿ: ತಾಲೂಕಿನಲ್ಲಿ ಸದ್ಯಕ್ಕಿಲ್ಲ ನೀರಿನ ತೊಂದರೆ

12:50 AM Jan 25, 2019 | Harsha Rao |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲವಾದರೂ ಮುಂದಿನ ದಿನಗಳಲ್ಲೂ ಇದೇ ಪರಿಸ್ಥಿತಿ ಇರಬಹುದು ಎನ್ನುವಂತಿಲ್ಲ. ಅಂದರೆ ಬಹುತೇಕ ಕಡೆಗಳಲ್ಲಿ ಕೊಳವೆಬಾವಿಯನ್ನೇ ನಂಬಿರುವುದರಿಂದ ಮಾರ್ಚ್‌-ಎಪ್ರಿಲ್‌ನಲ್ಲಿ ಇದ್ದಕ್ಕಿದ್ದಂತೆ ಕೊಳವೆಬಾವಿಗಳು ಕೈಕೊಟ್ಟರೆ ನೀರಿಗೆ ಹಾಹಾಕಾರ ನಿರ್ಮಾಣವಾಗಬಹುದು.

Advertisement

ತಾಲೂಕಿನಲ್ಲಿ ಈ ವರ್ಷ ಕಳೆದ ಬಾರಿಗಿಂತ ಹೆಚ್ಚಿನ ಮಳೆಯಾದರೂ ಅದು ಅಂತರ್ಜಲದ ಮೇಲೆ ದೊಡ್ಡ ಪರಿಣಾಮ ಬೀರಿಲ್ಲ ಎನ್ನು ತ್ತಾರೆ ತಜ್ಞರು. ಕಳೆದ ವರ್ಷ ನೀರಿನ ಅಭಾವ ಗಂಭೀರ ಎನ್ನುವಷ್ಟರ ಮಟ್ಟಿಗೆ ತಲೆದೋರಿರ ಲಿಲ್ಲ. ಆದರೆ ಪಂಪ್‌, ವಿದ್ಯುತ್‌ ಕೈಕೊಟ್ಟು, ಕೊಳವೆಬಾವಿ ನಿಷ್ಕ್ರಿಯ ವಾಗಿ ತೊಂದರೆಯಾಗಿತ್ತು ಎನ್ನುತ್ತದೆ ತಾಲೂಕು ಆಡಳಿತ.

75 ಕೊಳವೆಬಾವಿ ಬೇಡಿಕೆ
ತಾಲೂಕಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ 75 ಕೊಳವೆಬಾವಿ ಗಳ ಬೇಡಿಕೆ ಇದೆ. ಸಾಮಾನ್ಯವಾಗಿ ಒಂದು ಕೊಳವೆಬಾವಿಗೆ ಒಂದು ಲಕ್ಷ ರೂ. ಅನುದಾನವಾಗಿದ್ದರೆ, 1.25 ಲಕ್ಷ ರೂ. ವರೆಗೆ ಉಪಯೋಗಿಸಬಹುದಾಗಿದೆ. ಆದರೆ 700 ಅಡಿ ಕೊರೆದರೆ 1.50 ಲಕ್ಷ ರೂ. ಬೇಕಾಗುತ್ತದೆ. ಅಷ್ಟು ಖರ್ಚು ಮಾಡಿ ಕೊರೆಸಿದರೂ ನೀರು ಸಿಗುತ್ತದೆ ಎಂಬ ದೃಢ ವಿಶ್ವಾಸ ಇಲ್ಲ  ಎನ್ನುತ್ತಾರೆ ಅಧಿಕಾರಿಗಳು.

ಶಾಶ್ವತ ಯೋಜನೆ: ಪ್ರಸ್ತಾವನೆ
ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೊಳವೆಬಾವಿಗಳನ್ನೇ ನಂಬಿ ಕೂತರೆ ಆಗದು ಎಂದು ಈಗಾಗಲೇ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದಿಂದ ಕುಡಿಯುವ ನೀರಿನ ಶಾಶ್ವತ ಯೋಜನೆಗಾಗಿ ಮೂರು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಆದರೆ ಡಿಪಿಆರ್‌ ಸಿದ್ಧಪಡಿಸುವಂತೆ ಸರಕಾರದಿಂದ ನಿರ್ದೇಶನ ಬಂದಿಲ್ಲ.

ನಗರಕ್ಕೆ ನೀರು ಲಭ್ಯ
ಬೆಳ್ತಂಗಡಿ ನಗರ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ಈಗಾ ಗಲೇ ಸೋಮಾವತಿ ನದಿಗೆ ತಾತ್ಕಾಲಿಕ ಕಟ್ಟ ನಿರ್ಮಿಸ ಲಾಗಿದೆ. ಜತೆಗೆ 9 ಕೊಳವೆಬಾವಿಯಿಂದ ನೀರು ಉಪಯೋಗಿಸ ಲಾಗುತ್ತದೆ. ಒಂದು ವೇಳೆ ಕೊಳವೆಬಾವಿಯಲ್ಲಿ ನೀರಿನ ಕೊರತೆ ಕಂಡುಬಂದರೂ ನದಿಯ ನೀರನ್ನೇ ಪೂರೈಸಲು ಟ್ಯಾಂಕ್‌ಗಳ ವ್ಯವಸ್ಥೆ ಇದೆ. ಪ್ರತಿನಿತ್ಯ 1.05 ಎಂಎಲ್‌ಡಿ ನೀರಿನ ಬೇಡಿಕೆ ಇದ್ದು, 0.6 ಎಂಎಲ್‌ಡಿಯಷ್ಟು ನದಿ ನೀರನ್ನೇ ಬಳಸಲಾಗುತ್ತಿದೆ.

Advertisement

ಸಾಧ್ಯತೆಗಳು
ಬಂಟ್ವಾಳ ತಾಲೂಕಿನ ಎಎಂಆರ್‌ ಡ್ಯಾಮ್‌ನ ಹಿನ್ನೀರನ್ನು ಉಪಯೋಗಿಸಿಕೊಂಡು ತೆಕ್ಕಾರು ಗ್ರಾ.ಪಂ.ನ ವ್ಯಾಪ್ತಿಗೆ ಕುಡಿಯುವ ನೀರಿನ ಯೋಜನೆ ರೂಪಿಸುವುದಕ್ಕೆ 40 ಕೋ.ರೂ. ಪ್ರಸ್ತಾವನೆ ಹೋಗಿದೆ. ಇದು ಕಾರ್ಯಗತವಾದರೆ ಪರಿಸರದ 11 ಗ್ರಾಮಗಳಿಗೆ ಅನುಕೂಲವಾಗುತ್ತದೆ. ಬೆಳಾಲಿನಲ್ಲಿ ನೇತ್ರಾವತಿಗೆ ಸಣ್ಣ ಅಣೆಕಟ್ಟು ನಿರ್ಮಿಸಿದರೆ 6 ಗ್ರಾ.ಪಂ.ಗಳಿಗೆ ನೀರುಣಿಸಬಹುದು. ಇದಕ್ಕಾಗಿ 17 ಕೋ.ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಮೇಲಂತಬೆಟ್ಟು ಗ್ರಾ.ಪಂ.ನ್ನು ದೃಷ್ಟಿಯಲ್ಲಿರಿಸಿ ಅಳದಂಗಡಿಯಲ್ಲಿ ಶಾಶ್ವತ ಯೋಜನೆ ರೂಪಿಸಲು 16 ಕೋ.ರೂ. ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಅಲ್ಲಿ ಅಗತ್ಯಕ್ಕೆ ತಕ್ಕಷ್ಟು ನೀರು ಸಿಗದಿರುವ ಆತಂಕವೂ ಇದೆ.

– ಚೆನ್ನಪ್ಪ ಮೊಲಿ, ಎಇಇ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ

ಸದ್ಯ ತೊಂದರೆಯಿಲ್ಲ
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಗ್ರಾ.ಪಂ.ನಿಂದ ನೀರಿನ ಕೊರತೆಯ ಕುರಿತು ಗಂಭೀರ ದೂರುಗಳು ಬಂದಿಲ್ಲ. ಮೇಲಂತಬೆಟ್ಟಿನ ಹಿರಿಯಾಜೆಯಲ್ಲಿದ್ದ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ. ನೀರಿನ ಕೊರತೆ ನಿವಾರಣೆಗೆ 14ನೇ ಹಣಕಾಸಿನ ಯೋಜನೆಯ ಅನುದಾನ ಉಪಯೋಗಿಸುವಂತೆ ಸರಕಾರ ನಿರ್ದೇಶನ ನೀಡಿದೆ. ಮುಂದಿನ 2 ತಿಂಗಳಲ್ಲಿ  ಮಳೆಯಾಗದಿದ್ದರೆ ಸಮಸ್ಯೆ ಎದುರಾಗಬಹುದು.
– ಕುಸುಮಾಧರ ಬಿ., ಇಒ, ಬೆಳ್ತಂಗಡಿ ತಾ.ಪಂ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next