ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬೆಳ್ತಂಗಡಿ ವತಿಯಿಂದ ಲೋಕಸಭಾ ಚುನಾವಣಾ ಪ್ರಯುಕ್ತ ನಗರದ ಸಂತೆಕಟ್ಟೆಯಿಂದ ಅಂಬೇಡ್ಕರ್ ಭವನದವರೆಗೆ ಬೃಹತ್ ಪಾದಯಾತ್ರೆ ನಡೆಯಿತು.
ದ.ಕ. ಜಿಲ್ಲೆಯ ಲೋಕಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್ ಮಹಮ್ಮದ್ ತುಂಬೆ ಮಾತನಾಡಿ, ಜಿಲ್ಲೆಯಲ್ಲಿ ಕೋಮುವಾದ ಸೃಷ್ಟಿಸಿ, ಸುಳ್ಳು ಭರವಸೆಯಿಂದ ಭ್ರಷ್ಟಾಚಾರದಲ್ಲಿ ತೊಡಗಿರುವ ಪಕ್ಷಗಳು ಜನರನ್ನು ತಪ್ಪುದಾರಿಗೆ ಕೊಂಡೊಯ್ಯುತ್ತಿದೆ. ಮತ ದಾರರು ಎಚ್ಚೆತ್ತುಕೊಂಡು ಈ ಬಾರಿ ಎಸ್‌ಡಿಪಿಐಗೆ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿ ಮತ್ತು ಸಂವಿಧಾನ ರಕ್ಷಣೆ ಜವಾಬ್ದಾರಿ ವಹಿಸಬೇಕು. ಎಸ್‌ಡಿಪಿಐಗೆ ಹಾಕುವ ಒಂದೊಂದು ಮತವು ಪರ್ಯಾಯ ರಾಜಕೀಯ ವ್ಯವಸ್ಥೆಯ ಪರಿಕಲ್ಪನೆ ಯಾಗಿ ಪರಿವರ್ತನೆಯಾಗಬೇಕಾಗಿದೆ ಎಂದು ಹೇಳಿದರು.
ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನವಾಝ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಲತೀಫ್ ಪುತ್ತೂರು ಮಾತನಾಡಿದರು.
ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯ ದರ್ಶಿ ಆಲ್ಫೋನ್ಸ್ ಫ್ರಾಂಕೋ, ಎಸ್‌ಡಿಪಿಐ ದ.ಕ. ಜಿಲ್ಲೆಯ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ದ.ಕ. ಜಿಲ್ಲಾ ಉಪಾಧ್ಯಕ್ಷ ಪಿ.ಡಿ. ಆಂಟನಿ, ಜಿಲ್ಲಾ ಸಮಿತಿ ಸದಸ್ಯ ಅಕºರ್ ಬೆಳ್ತಂಗಡಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಅಧ್ಯಕ್ಷ ಇಕ್ಬಾಲ್ ಬಂಗೇರಕಟ್ಟೆ, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು, ಬೆಂಬಲಿಗರು ಮತ್ತಿತರರಿದ್ದರು.
ಅಕ್ಬರ್ ಸ್ವಾಗತಿಸಿದರು. ನಿಸಾರ್ ಸುನ್ನತ್ ಕೆರೆ ನಿರೂಪಿಸಿದರು.