Advertisement

ಬೆಳ್ತಂಗಡಿ ತಾ|ಸ್ತ್ರೀ ಶಕ್ತಿ ಭವನ ಕಾಮಗಾರಿ ಬಹುತೇಕ ಪೂರ್ಣ

10:27 AM Jul 29, 2018 | Team Udayavani |

ಬೆಳ್ತಂಗಡಿ: ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ತಾಲೂಕು ಸ್ತ್ರೀಶಕ್ತಿ ಬ್ಲಾಕ್‌ ಸೊಸೈಟಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ತ್ರೀಶಕ್ತಿ ಭವನಗಳನ್ನು ನಿರ್ಮಿಸುತ್ತಿದೆ. ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಸ್ತ್ರೀಶಕ್ತಿ ಭವನದ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ತಿಂಗಳೊಳಗೆ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.

Advertisement

ಬಿ.ಎಸ್‌. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ 2008ರ ಬಜೆಟ್‌ನಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲಿ ಸ್ತ್ರೀಶಕ್ತಿ ಭವನ ನಿರ್ಮಿಸುವುದಾಗಿ ಘೋಷಿಸಿದ್ದರು. ದ.ಕ. ಜಿಲ್ಲೆಯ ಎಲ್ಲೆಡೆ ಸ್ತ್ರೀಶಕ್ತಿ ಭವನಗಳು ನಿರ್ಮಾಣವಾಗಿದ್ದರೂ ಬೆಳ್ತಂಗಡಿಯಲ್ಲಿ ಬಾಕಿ ಇತ್ತು. ಬೆಳ್ತಂಗಡಿ ನಗರದಲ್ಲಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಅವರ ಕಚೇರಿಗೆ ತಾಗಿಕೊಂಡು ಸ್ತ್ರೀಶಕ್ತಿ ಭವನ ನಿರ್ಮಿಸಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. 22 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು, ಪೈಂಟಿಂಗ್‌, ಪೀಠೊಪಕರಣ ಜೋಡಣೆ ಬಾಕಿ ಇದೆ.

ಸ್ತ್ರೀಶಕ್ತಿ ಭವನ ಯಾಕೆ?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸ್ತ್ರೀಶಕ್ತಿ ಗುಂಪುಗಳಿಗೆ ತಾಲೂಕು ಮಟ್ಟದಲ್ಲಿ ತಾ| ಸ್ತ್ರೀಶಕ್ತಿ ಬ್ಲಾಕ್‌ ಸೊಸೈಟಿಗಳು ಕಾರ್ಯಾಚರಿಸುತ್ತಿರುತ್ತವೆ. ಅವರಿಗೆ ಪ್ರತಿ ತಿಂಗಳು ಸಭೆ, ಇನ್ನಿತರ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸ್ತ್ರೀಶಕ್ತಿ ಭವನಗಳನ್ನು ನಿರ್ಮಾಣ ಮಾಡಲಾಗಿದೆ.

ತಾಲೂಕಿನಲ್ಲಿ ಸ್ತ್ರೀಶಕ್ತಿ ಭವನ ನಿರ್ಮಾಣವಾಗದೆ ಸಿಡಿಪಿಒ ಕಚೇರಿಯಲ್ಲೇ ತಿಂಗಳ ಸಭೆ ನಡೆಯುತ್ತಿತ್ತು. ಮಳೆಯ ತೀವ್ರತೆ ಹೆಚ್ಚಿರುವುದರಿಂದ ಪೈಂಟಿಂಗ್‌ ಕಾಮಗಾರಿ ಕಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿ ಗಳು, ಜನಪ್ರತಿನಿಧಿಗಳ ದಿನಾಂಕ ನಿಗದಿ ಮಾಡಿಕೊಂಡು ಉಪನಿರ್ದೇಶಕರ ಮಾರ್ಗದರ್ಶನದಂತೆ ಭವನ ಉದ್ಘಾಟಿಸಲಾಗುವುದು ಎಂದು ಸಿಡಿಪಿಒ ಪ್ರಿಯಾ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ 324 ಅಂಗನವಾಡಿ ಕೇಂದ್ರಗಳನ್ನು 12 ವಲಯಗಳನ್ನಾಗಿ ವಿಂಗಡಿಸಿ, ಒಟ್ಟು 525 ಸ್ತ್ರೀಶಕ್ತಿ ಗುಂಪುಗಳು ಕಾರ್ಯಾಚರಿಸುತ್ತಿವೆ. ತಾಲೂಕಿನಲ್ಲಿ ಪ್ರಸ್ತುತ 1,000 ರೂ.ನಂತೆ ಶುಲ್ಕ ನೀಡಿರುವ 1,010 ಮಂದಿ ಅಜೀವ ಸದಸ್ಯರು ತಾಲೂಕು ಸ್ತ್ರೀಶಕ್ತಿ ಬ್ಲಾಕ್‌ ಸೊಸೈಟಿಯಲ್ಲಿದ್ದಾರೆ. 

Advertisement

ಇವರ ಶುಲ್ಕದ ಮೊತ್ತವನ್ನು ಬ್ಯಾಂಕಿನಲ್ಲಿ ಇರಿಸಲಾಗಿದ್ದು, ಅದರ ಬಡ್ಡಿಯ ಮೊತ್ತವನ್ನು ವಾರ್ಷಿಕ ಖರ್ಚುವೆಚ್ಚಗಳನ್ನು ನಡೆಸಲಾಗುತ್ತದೆ. ಪ್ರತಿವರ್ಷ ಬ್ಲಾಕ್‌ ಸೊಸೈಟಿಯ ಮಹಾಸಭೆ ನಡೆದು 10 ಮಂದಿ ಸದಸ್ಯರನ್ನು ಸಮಿತಿಗೆ ಆಯ್ಕೆಮಾಡಿ ಅದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕೋಶಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದ್ದು, ಕಾರ್ಯದರ್ಶಿ ಇಲಾಖೆಯವರಾಗಿರುತ್ತಾರೆ. ಆದರೆ ಈ ಬಾರಿ ಕಾರ್ಯದರ್ಶಿಯೂ ಅಜೀವ ಸದಸ್ಯರಾಗಿರುತ್ತಾರೆ. 11 ಮಂದಿ ಅಜೀವ ಸದಸ್ಯರನ್ನು ಸಮಿತಿಯ ಆರಿಸಲಾಗುತ್ತದೆ.

ಈ ಹಿಂದೆ ಬೆಳ್ತಂಗಡಿ ತಾಲೂಕಿನ ಬ್ಲಾಕ್‌ ಸೊಸೈಟಿಯು ರಾಜ್ಯದಲ್ಲಿ 2ನೇ ಉತ್ತಮ ಸೊಸೈಟಿ ಎಂಬ ಗೌರವಕ್ಕೆ ಪಾತ್ರವಾಗಿದ್ದು, 70 ಸಾವಿರ ರೂ. ಮೊತ್ತವೂ ಲಭಿಸಿರುತ್ತದೆ. ಪ್ರಸ್ತುತ ಅದೇ ಹಣದಿಂದ ಸ್ತ್ರೀಶಕ್ತಿ ಭವನಕ್ಕೆ ಪೀಠೊಪಕರಣಗಳನ್ನು ಖರೀದಿಸಲಾಗುತ್ತದೆ ಎಂದು ಹಿರಿಯ ಮೇಲ್ವಿಚಾರಕಿ ಸುಧಾ ತಿಳಿಸಿದ್ದಾರೆ.

ತಿಂಗಳೊಳಗೆ ಉದ್ಘಾಟನೆ
ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಸ್ತ್ರೀಶಕ್ತಿ ಭವನ ನಿರ್ಮಾಣವಾಗಿದ್ದು, ಬೆಳ್ತಂಗಡಿಯಲ್ಲಿ ಕೊನೆಯದಾಗಿ ಭವನ ನಿರ್ಮಾಣವಾಗಿದೆ. ಪ್ರಸ್ತುತ ಅದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪೈಂಟಿಂಗ್‌ ಬಾಕಿ ಇದೆ. ಅದನ್ನು ಪೂರ್ತಿಗೊಳಿಸಿ ತಿಂಗಳೊಳಗೆ ಭವನವನ್ನು ಉದ್ಘಾಟಿಸುವ ಯೋಚನೆ ಇದೆ.
– ಸುಂದರ ಪೂಜಾರಿ
ಉಪನಿರ್ದೇಶಕರು, ಮಹಿಳಾ ಮತ್ತು
ಮಕ್ಕಳ ಕಲ್ಯಾಣ ಇಲಾಖೆ, ದ.ಕ.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next