Advertisement

ಗ್ಯಾಸ್‌ ಸಂಪರ್ಕಕ್ಕೆ  ಕಾರ್ಯಕರ್ತೆಯರ ಮೊಬೈಲ್‌

06:34 AM Feb 23, 2019 | Team Udayavani |

ಬೆಳ್ತಂಗಡಿ : ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಅನಿಲ ಸಂಪರ್ಕ ನೀಡುವ ಸಂದರ್ಭ ಕೇಂದ್ರ ಕಾರ್ಯಕರ್ತೆಯರ ಮೊಬೈಲ್‌ ಸಂಖ್ಯೆ ನೀಡಲಾಗುತ್ತಿದ್ದು, ಇದರಿಂದ ಅವರು ಮನೆಯ ಅನಿಲ ಸಂಪರ್ಕಕ್ಕೆ ಅರ್ಜಿ ಹಾಕಿದರೆ ತಿರಸ್ಕಾರ ಗೊಳ್ಳುತ್ತಿದೆ. ಈ ಸಮಸ್ಯೆ ಬಗೆಹರಿಸುವ ಕುರಿತು ಸರಕಾರಕ್ಕೆ ಬರೆಯಲು ಬೆಳ್ತಂಗಡಿ ತಾ.ಪಂ. ಸಾಮಾನ್ಯ ಸಭೆ ತೀರ್ಮಾನಿಸಿತು.

Advertisement

ಶುಕ್ರವಾರ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆ ಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೇಲಿನ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯ ಜೋಯಲ್‌ ಮೆಂಡೊನ್ಸಾ, ಎರಡೆರಡು ಕಡೆ ಅಡುಗೆ ಅನಿಲಕ್ಕೆ ಮೊಬೈಲ್‌ ಸಂಖ್ಯೆ ನೀಡಲು ಅಸಾಧ್ಯವಾಗಿದ್ದು, ಇದರಿಂದ ಸರಕಾರ ಉಚಿತವಾಗಿ ನೀಡುವ ಅನಿಲ ಸಂಪರ್ಕ ಪಡೆಯಲು ಅಂಗನವಾಡಿ ಕಾರ್ಯಕರ್ತರು . ಅನರ್ಹರಾಗುತ್ತಿದ್ದಾರೆ ಎಂದರು. ಬಳಿಕ ಈ ಕುರಿತು ಚರ್ಚೆ ನಡೆದು ಸರಕಾರಕ್ಕೆ ಬರೆಯಲು ತೀರ್ಮಾನಿಸಲಾಯಿತು.

ಅಂಗನವಾಡಿ ಮಕ್ಕಳಿಗೆ ನೀಡುವ ಮೊಟ್ಟೆ ಹಾಗೂ ಗ್ಯಾಸ್‌ ಸಂಪರ್ಕ ಕಾರ್ಯ ಕರ್ತೆಯರೇ ಹಣ ನೀಡಬೇಕಿದೆ, ಜತೆಗೆ ಅವರಿಗೆ ವೇತನವೂ ವಿಳಂಬವಾಗುತ್ತಿದೆ ಎಂದು ತಿಳಿಸಿದಾಗ, ಕಚೇರಿಯಲ್ಲಿ ಲೆಕ್ಕಿಗರು ಸಹಿತ ಸಿಬಂದಿ ಕೊರತೆ ಇರುವುದರಿಂದ ತೊಂದರೆಯಾಗುತ್ತಿದೆ ಎಂದು ಸಿಡಿಪಿಒ ಪ್ರಿಯಾ ಆ್ಯಗ್ನೇಸ್‌ ಸಭೆಯ ಗಮನಕ್ಕೆ ತಂದರು.

ಕ್ಯಾಂಟೀನ್‌
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಸಂಬಂಧಪಟ್ಟ ಅಧಿಕಾರಿ ಔಷಧ ಹಾಗೂ ಇತರ ಕೆಮಿಕಲ್‌ಗ‌ಳನ್ನು ಒಟ್ಟಿಗೆ ಇಟ್ಟಿದ್ದಾರೆ ಎಂಬ ಪ್ರಕರಣ ಸಾಬೀತಾಗಿದ್ದು, ಅವರ ವಿರುದ್ಧ ಕ್ರಮ ಜರಗಿಸಬೇಕು ಎಂದು ಸದಸ್ಯ ಸುಧಾಕರ್‌ ಆಗ್ರಹಿಸಿದರು. ಜತೆಗೆ ಕ್ಯಾಂಟೀನನ್ನು ಶೀಘ್ರ ತೆರೆಯುವಂತೆ ಒತ್ತಾಯಿಸಿದರು.

ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್‌ ಇಲ್ಲದೆ ಗರ್ಭಿಣಿಯರು ಹಾಗೂ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯೆ ಧನಲಕ್ಷ್ಮೀ ತಿಳಿಸಿದರು. ಆ್ಯಂಬುಲೆನ್ಸ್  ಗೆ ಪ್ರಸ್ತಾವನೆ ಹೋಗಿದೆ ಎಂದು ಇಲಾಖೆ ಅಧಿಕಾರಿ ತಿಳಿಸಿದರು. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ನಡೆಸದೆ ಔಷಧ ನೀಡುತ್ತಿದ್ದಾರೆ ಎಂದು ಸದಸ್ಯ ಜಯರಾಮ್‌ ಆರೋಪಿಸಿದರು.

Advertisement

ಒತ್ತುವರಿ ತೆರವು
ವೇಣೂರಿನ ಅಜಿಲ ಕೆರೆ ಸಹಿತ ತಾ|ನ ಎಲ್ಲ ಕೆರೆಗಳ ಒತ್ತುವರಿ ತೆರವಿಗೆ ಸದಸ್ಯ ವಿಜಯ ಗೌಡ ಅವರು ತಹಶೀಲ್ದಾರ್‌ ಗೆ ಮನವಿ ಮಾಡಿದರು. ಜತೆಗೆ 94ಸಿ ಯೋಜನೆಯ ಅರ್ಜಿ ತಿರಸ್ಕಾರದಿಂದ ಅರ್ಹರಿಗೆ ತೊಂದರೆಯಾಗಿರುವ ಕುರಿತು ತಿಳಿಸಿದಾಗ, ಅವರು ಮತ್ತೂಮ್ಮೆ ಅರ್ಜಿ ಸಲ್ಲಿಸಿದರೆ ಅದನ್ನು ಸರಿಪಡಿಸುವುದಾಗಿ ತಹಶೀಲ್ದಾರ್‌ ತಿಳಿಸಿದರು.

ಗುರುವಾಯನಕೆರೆ ಪ್ರೌ.ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕದ ಕುರಿತು ಸದಸ್ಯ ಗೋಪಿನಾಥ್‌ ನಾಯಕ್‌ ತಿಳಿಸಿದಾಗ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕ್ರಮ ಕೈಗೊಳ್ಳುವುದಾಗಿ ಬಿಇಒ ತಿಳಿಸಿದರು. ಚಾರ್ಮಾಡಿಯಲ್ಲಿ ಕೆಲವು ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡದ ಕುರಿತು ಸದಸ್ಯ ಕೊರಗಪ್ಪ ಗೌಡ ಪ್ರಸ್ತಾವಿಸಿದರು. ಹೊಸ ಮೀಟರ್‌ ಹಾಗೂ ಬಾಕ್ಸ್‌ ಅಳವಡಿಕೆಯಿಂದ ಕೆಲವು ಮನೆಗಳ ಗೋಡೆಗಳಲ್ಲಿ ಶಾಕ್‌ ಹೊಡೆಯುತ್ತಿದೆ ಎಂದು ಸದಸ್ಯ ಶಶಿಧರ್‌ ಕಲ್ಮಂಜ ತಿಳಿಸಿದರು.

ನನ್ನ ಕಚೇರಿಗೆ ಸಿಸಿ ಕೆಮರಾ
ಸಭೆಯಲ್ಲಿ ಕುವೆಟ್ಟು ಗ್ರಾಮ ಪಂಚಾಯತ್‌ ಅಧ್ಯಕ್ಷ ಅಶೋಕ್‌ ಕೋಟ್ಯಾನ್‌ ಅವರು ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ವ್ಯಾಪಾಕವಾಗಿದೆ ಎಂದು ಆರೋಪಿಸಿದಾಗ, ತಹಶೀಲ್ದಾರ್‌ ಅವರು ಉದಾಹರಣೆ ಸಹಿತ ಮಾತನಾಡುವಂತೆ ತಿಳಿಸಿದರು. ಅನಂತರ ಮಾತು ಮುಂದುವರಿಸಿದ ತಹಶೀಲ್ದಾರ್‌, ನಾನು ಬಂದ ಬಳಿಕ ನನ್ನ ಕಚೇರಿಗೂ ಸಿಸಿ ಕೆಮರಾ ಅಳವಡಿಸಿದ್ದು, ಇತರೆಡೆಗೂ ಅನುಷ್ಠಾನಗೊಳಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ನನ್ನ ಕಚೇರಿಗೆ ಬರುವುದಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದ್ದು, ನೇರವಾಗಿ ಫಲಾನುಭವಿಗಳೇ ಬಂದರೆ ತತ್‌ಕ್ಷಣ ಕೆಲಸ ಮಾಡಿಸಿಕೊಡುತ್ತೇನೆ ಎಂದರು. ತಾಲೂಕು ಪಂಚಾಯತ್‌ ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್‌ ಮೊದಲಾದವರು ಉಪಸ್ಥಿತರಿದ್ದರು.

ಫೆ. 28ಕ್ಕೆ ಗಡಿಗುರುತು ಕಲ್ಲು 
ಮಾಲಾಡಿ ಶಾಲೆಯ ಜಾಗದ ಸರ್ವೆ ಕಾರ್ಯ ಮುಗಿದರೂ ಗಡಿ ಗುರುತು ಕಲ್ಲು ಹಾಕುವ ಕಾರ್ಯ ನಡೆಯದ ಕುರಿತು ಜೋಯಲ್‌ ಸಭೆಗೆ ತಿಳಿಸಿದರು. ಈ ಸಂದರ್ಭ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಅವರು ಫೆ. 28ರಂದು ಪೊಲೀಸ್‌ ರಕ್ಷಣೆಯೊಂದಿಗೆ ಸರ್ವೆ ಕಾರ್ಯ ನಡೆಸಲು ಬಿಇಒ ತಾರಾಕೇಸರಿ ಅವರಿಗೆ ಸೂಚಿಸಿದರು. ಸರ್ವೆ ಕಾರ್ಯದಲ್ಲಿ ತಾನೂ ಭಾಗವಹಿಸುವುದಕ್ಕೆ ಪ್ರಯತ್ನ ಪಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next