Advertisement

ಬೆಳ್ತಂಗಡಿ: ತಾಲೂಕು ಭಾಗಶಃ ಸ್ತಬ್ಧ

10:34 PM Mar 27, 2020 | Sriram |

ಬೆಳ್ತಂಗಡಿ: ಕೋವಿಡ್‌ 19 ವೈರಸ್‌ ಆತಂಕದಿಂದ ಲಾಕ್‌ಡೌನ್‌ ತಾಲೂಕಿನಲ್ಲಿ ಶುಕ್ರವಾರ ಯಥಾಸ್ಥಿತಿ ಕಾಯ್ದುಕೊಂಡಿದೆ.ಬೆಳಗ್ಗೆ 11ರ ವರೆಗೆ ಸಂತೆಮಾರುಕಟ್ಟೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅಲ್ಲಲ್ಲಿ ಜನಸಾಮಾನ್ಯರ ಓಡಾಟ ಕಂಡು ಬಂದಿರುವುದು ಬಿಟ್ಟರೆ ಭಾಗಶಃ ಸ್ತಬ್ಧವಾಗಿತ್ತು.

Advertisement

ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಹಾಗೂ ತಹಶೀಲ್ದಾರ್‌ ರೌಂಡ್ಸ್‌ ಹೊಡೆದು ಜನರನ್ನು ಎಚ್ಚರಿಸುವ ಕಾರ್ಯ ನಡೆಸಿದರು.ಔಷಧ ಮಳಿಗೆಗಳು ಸಂಜೆವರೆಗೂ ತೆರೆದಿದ್ದರೆ, ಪೆಟ್ರೋಲ್‌ ಬಂಕ್‌ಗಳು ಕಾರ್ಯಾಚರಿಸಿಲ್ಲ. ಹೊಟೇಲ್‌ ಗಳನ್ನು ಸಂಪೂರ್ಣ ಬಂದ್‌ ಮಾಡಲಾಗಿತ್ತು.ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸದಂತೆ ವಕ್ಫ್ಬೋರ್ಡ್‌ ಆದೇಶ ನೀಡಿದರೂ ಕಾನೂನು ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆಗೆ ಯತ್ನಿಸಿದವರ ವಿರುದ್ಧ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತು.

ವಾರ್‌ ರೂಂಗೆ ಉತ್ತಮ ಸ್ಪಂದನೆ
ಮಿನಿ ವಿಧಾನಸೌಧ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಕೋವಿಡ್‌ 19 ವಾರ್‌ ರೂಂಗೆ ಉತ್ತಮ ಸ್ಪಂದನೆ ವ್ಯಕ್ತ ವಾಗಿದೆ. ಈಗಾಗಲೇ ಗ್ಯಾಸ್‌ ವಿತರಣೆ, ಆವಶ್ಯಕ ವಸ್ತುಗಳ ಪೂರೈಕೆಗೆಗಾಗಿ ಕರೆಗಳು ಬರುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಉಳಿದಂತೆ ಆಶಾ ಕಾರ್ಯಕರ್ತೆಯರಿಂದ ಮನೆ ಭೇಟಿ ಮುಂದುವರಿದಿದೆ. ಪೊಲೀಸ್‌ ಇಲಾಖೆಯ ಜತೆ ಕಂದಾಯ, ಆರೋಗ್ಯ ಇಲಾಖೆ, ಪ.ಪಂ. ಸೇರಿದಂತೆ ಇತರ ಇಲಾಖೆಗಳ ಅಧಿಕಾರಿ, ಸಿಬಂದಿ ಯಾವುದೇ ಅಹಿತಕರ ಘಟನೆಗಳು, ಜನತೆ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ವಹಿಸುವ ಕಾರ್ಯ ನಿರ್ವಹಿಸಿದರು.

ಸರಕಾರಿ ಕಚೇರಿ ಮತ್ತು ಬ್ಯಾಂಕ್‌ಗಳು ಕಾರ್ಯನಿರ್ವಹಿಸಿದವು. ಸ್ಥಳೀಯ ದಿನಸಿ ಅಂಗಡಿಗಳು ಗ್ರಾಹಕರ ಸಂಖ್ಯೆ ಕಡಿಮೆ ಇದ್ದ ಕಾರಣ ಬೆಳಗಿನ ಒಂದೆರಡು ಗಂಟೆ ಮಾತ್ರ ತೆರೆದಿದ್ದವು.

ಚಾರ್ಮಾಡಿ ಗೇಟ್‌ನಲ್ಲಿ ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಯಿತು.ಕಕ್ಕಿಂಜೆ ಪ್ರದೇಶದಲ್ಲಿ ಅನಗತ್ಯ ಸುತ್ತಾಟ ನಡೆಸುತ್ತಿದ್ದವರನ್ನು ಧರ್ಮಸ್ಥಳ ಪೊಲೀಸರು ತೆರವುಗೊಳಿಸಿದರು.

Advertisement

ಲಾಕ್‌ಡೌನ್‌ ಕಾರಣ ಮನೆಯಲ್ಲೇ ಇರುವ ಟೈಲರಿಂಗ್‌ ವೃತ್ತಿಯ ಹಲವರು, ಬೇಡಿಕೆಯ ಹಿನ್ನೆಲೆಯಲ್ಲಿ ವಸ್ತ್ರದ ಮಾಸ್ಕ್ ತಯಾರಿಸುತ್ತಿರುವುದು ಕಂಡುಬಂತು.

ಅಂತಿಮ ದರ್ಶನಕ್ಕೂ ಅಡ್ಡಿ
ಯಾರಾದರೂ ಮೃತಪಟ್ಟರೆ ಸಂಬಂಧಿಕರು ಅಥವಾ ಮನೆಮಂದಿಗೆ ಅವರ ಅಂತಿಮ ದರ್ಶನಕ್ಕೂ ಅವಕಾಶ ಸಿಗದ ಸ್ಥಿತಿ ನಿರ್ಮಾಣವಾಗಿದ್ದು ಈ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ತಾಲೂಕಿನಲ್ಲಿ ಅಂತಹ ಎರಡು ಪ್ರಕರಣಗಳು ವರದಿಯಾಗಿವೆ.

ಆಹಾರ ಧಾನ್ಯ ಪೂರೈಕೆಗೆ ಅವಕಾಶ
ಗ್ರಾಮೀಣ ಭಾಗವಾದ ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ ಸೇರಿದಂತೆ ಪೇಟೆಯಿಂದ 20 ಕಿ.ಮೀ.ಗಿಂತ ದೂರವಿರುವ ಅಂಗಡಿಗಳಲ್ಲಿ ದಿನಬಳಕೆ ವಸ್ತುಗಳು ಲಭ್ಯವಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈ ಕುರಿತು ಅಂಗಡಿ ಮಾಲಕರು ಮಧ್ಯವರ್ತಿಗಳನ್ನು ಸಂಪರ್ಕಿಸದಿರುವುದರಿಂದ ಗೊಂದಲಕ್ಕೆ ಕಾರಣ. ಬೇಡಿಕೆಯ ಆಹಾರ ಪೂರೈಸಲು ತಹಶೀಲ್ದಾರ್‌ ಅನುಮತಿ ನೀಡಿದ್ದಾರೆ. ಅಂಗಡಿ ಮಾಲಕರು ತತ್‌ಕ್ಷಣ ಸ್ಪಂದಿಸುವಂತೆ ಶಾಸಕರ ವಾರ್‌ ರೂಂ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next