ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ಆರೋಪದಲ್ಲಿ ಗುರುವಾಯನ ಕೆರೆಯ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಅವರಿಗೆ ಶಿಕ್ಷೆ ವಿಧಿಸಿ ಬೆಳ್ತಂಗಡಿ ಸಿವಿಲ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ರಾಜ್ಯ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.
ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ ಅಪಪ್ರಚಾರ ಮಾಡುತ್ತಿದ್ದ ಸೋಮನಾಥ ನಾಯಕ್‌ಗೆ ಬೆಳ್ತಂಗಡಿಯ ಸಿವಿಲ್ ನ್ಯಾಯಾಲಯವು ಜೈಲು ಶಿಕ್ಷೆ, ಆಸ್ತಿ ಮುಟ್ಟುಗೋಲು ಹಾಗೂ ದಂಡನೆ ವಿಧಿಸಿತ್ತು. ಇದನ್ನು ರದ್ದು ಗೊಳಿಸುವಂತೆ ನಾಯಕ್ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್ ಮೇ 5ರಂದು 148 ಪುಟಗಳ ಸುದೀರ್ಘ ತೀರ್ಪು ಪ್ರಕಟಿಸಿ ಸೋಮನಾಥ ನಾಯಕ್‌ರ ಅರ್ಜಿಯನ್ನು ವಜಾಗೊಳಿಸಿದೆ.
ಸೋಮನಾಥ ನಾಯಕರು ಹೆಗ್ಗಡೆಯವರ ಬಗ್ಗೆ ಸುಳ್ಳು ಆರೋಪ ಮಾಡಿರುವುದು ಸಾಬೀತಾಗಿದೆ. ಹೆಗ್ಗಡೆಯವರು ಮಿತಿಗಿಂತ ಹೆಚ್ಚು ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಮಾಡಿರುವ ಆರೋಪಗಳು ಸುಳ್ಳು. ದಾಖಲೆ ಗಳನ್ನು ಪರಾಮರ್ಶಿಸುವಾಗ ಹೆಗ್ಗಡೆ ಮತ್ತವರ ಕುಟುಂಬದವರು ತಮ್ಮ ಬಹಳಷ್ಟು ಆಸ್ತಿಗಳನ್ನು ಸಾಗು ವಳಿ ದಾರರಿಗೆ ಬಿಟ್ಟುಕೊಟ್ಟಿರುವುದು ಕಂಡುಬರುತ್ತದೆ ಎಂದು ಕೋರ್ಟ್ ತಿಳಿಸಿದೆ.
ಹೆಗ್ಗಡೆಯವರ ಚಾರಿತ್ರ್ಯ ಹಾಗೂ ಕ್ಷೇತ್ರದ ಘನತೆಗೆ ದಕ್ಕೆ ತರುವ ದುರುದ್ದೇಶದಿಂದ ಸೋಮನಾಥ ನಾಯಕ್ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನೂ ಉಲ್ಲಂಘಿಸಿ ಸುಳ್ಳು ಆರೋಪಗಳನ್ನು ಸಾರ್ವಜನಿಕ ಮಾಧ್ಯಮ ಹಾಗೂ ಜಾಲತಾಣಗಳಲ್ಲಿ ಮಾಡುತ್ತಿರುವುದು ಕ್ಷಮಾರ್ಹವಲ್ಲ. ಹೆಗ್ಗಡೆ ಹಾಗೂ ಕುಟುಂಬದವರ ಮೇಲೆ ಆರೋಪ ಮಾಡುವುದರ ಹೊರತು ಸಮಾಜಕ್ಕೆ ತನ್ನ ಕೊಡುಗೆ ಏನು ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸುವಲ್ಲಿಯೂ ನಾಯಕ್ ವಿಫಲರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
ಬೆಳ್ತಂಗಡಿ ನ್ಯಾಯಾಲಯ ಈಗಾಗಲೇ ಸೋಮನಾಥ ನಾಯಕರ ವಿರುದ್ಧ ಬಂಧನಕ್ಕೆ ವಾರಂಟ್ ಹೊರಡಿಸಿದೆ. ನ್ಯಾಯವಾದಿಗಳಾದ ಕೆ. ಚಂದ್ರನಾಥ ಆರಿಗ ಬೆಂಗಳೂರು ಹಾಗೂ ರತ್ನವರ್ಮ ಬುಣ್ಣು ಬೆಳ್ತಂಗಡಿ ಅವರು ಕ್ಷೇತ್ರದ ಪರವಾಗಿ ವಾದಿಸಿದ್ದರು.