Advertisement

ಬೆಳ್ತಂಗಡಿ -ಗುರುವಾಯನಕೆರೆ: ಹೆದ್ದಾರಿ ಹೊಂಡಕ್ಕೆ ಮುಕ್ತಿ 

11:45 AM Nov 09, 2018 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ನಗರ ಸಹಿತ ಗುರುವಾಯನಕೆರೆ, ಉಜಿರೆ ಪರಿಸರದ ಹೆದ್ದಾರಿ ಅವ್ಯವಸ್ಥೆಗೆ ನಿತ್ಯವೂ ಹೆದ್ದಾರಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದ ವಾಹನ ಚಾಲಕರು/ಸವಾರರಿಗೆ ಹೊಂಡಗಳಿಂದ ಕೊಂಚ ಮುಕ್ತಿ ಸಿಕ್ಕಿದ್ದು, ಸದ್ಯಕ್ಕೆ ಬೆಳ್ತಂಗಡಿ- ಗುರುವಾಯನಕೆರೆ ಮಧ್ಯೆ ಹೆದ್ದಾರಿಯ ಹೊಂಡಗಳಿಗೆ ತೇಪೆ ಕಾರ್ಯ ನಡೆದಿದೆ.

Advertisement

ಕಳೆದ ಕೆಲವು ದಿನಗಳ ಹಿಂದೆ ಗುರುವಾಯನಕೆರೆ ಪೇಟೆಯಿಂದ ದುರಸ್ತಿ ಕಾರ್ಯ ಆರಂಭಗೊಂಡಿದ್ದು, ಗುರುವಾರ ಬೆಳ್ತಂಗಡಿ ನಗರದಲ್ಲಿನ ಹೊಂಡಗಳಿಗೆ ತೇಪೆ ಕಾರ್ಯ ನಡೆದಿದೆ. ಗುರುವಾಯನ ಕರೆಯಿಂದ ಉಜಿರೆವರೆಗೆ ಸುಮಾರು 50ಕ್ಕೂ ಅಧಿಕ ಕಡೆಗಳಲ್ಲಿ ಹೆದ್ದಾರಿಯಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನಗಳು ಎದ್ದು ಬಿದ್ದು ಸಾಗಬೇಕಾದ ಸ್ಥಿತಿ ಇತ್ತು.

ಗುರುವಾಯನಕರೆ ಜಂಕ್ಷನ್‌ನಲ್ಲಿ ಹೆದ್ದಾರಿ ಪೂರ್ತಿ ಹದಗೆಟ್ಟ ಪರಿಣಾಮ ಮಳೆಗಾಲದಲ್ಲಿ ಜಲ್ಲಿ ಹುಡಿಗಳನ್ನು ಹಾಕಿ ಹೊಂಡ ಮುಚ್ಚಲಾಗಿತ್ತು. ಆದರೆ ಮಳೆ ಹೋದ ತತ್‌ಕ್ಷಣ ಇಡೀ ಪೇಟೆಯೇ ಧೂಳಿನಿಂದ ತುಂಬಿ ವರ್ತಕರು ನಿತ್ಯವೂ ಧೂಳು ತಿನ್ನಬೇಕಾದ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿ ಸ್ಥಳೀಯ ವರ್ತಕರು ಸೇರಿ ಒಂದಷ್ಟು ಮೊತ್ತ ಸಂಗ್ರಹಿಸಿ, ಹೆದ್ದಾರಿಗ ನೀರು ಹಾಕುವ ಕಾರ್ಯ ಮಾಡುತ್ತಿದ್ದರು.

ಆದರೆ ಇಲಾಖೆಯು ದಸರಾ ಮುಗಿದ ತತ್‌ಕ್ಷಣ ಹೆದ್ದಾರಿಗೆ ತೇಪೆ ಕಾರ್ಯ ನಡೆಸಲಾಗುವುದು ಎಂದು ಹೇಳಿದಂತೆ ಪ್ರಸ್ತುತ ದೀಪಾವಳಿಯ ಸಂದರ್ಭದಲ್ಲಿ ತೇಪೆ ಕಾರ್ಯ ನಡೆದಿದೆ. ದಸರಾ ಮುಗಿದ ಬಳಿಕ ಕೆಲವು ದಿನ ಮಳೆ ಸುರಿದ ಹಿನ್ನೆಲೆಯಲ್ಲಿ ತೇಪೆ ಕಾರ್ಯ ವಿಳಂಬವಾಗಿತ್ತು. ಪ್ರಸ್ತುತ ಹೊಂಡಗಳಿಂದ ವಾಹನಗಳಿಗೆ ಮುಕ್ತಿ ಸಿಕ್ಕಿದರೆ, ವರ್ತಕರಿಗೆ ಧೂಳಿನಿಂದ ಮುಕ್ತಿ ಸಿಕ್ಕಿದಂತಾಗಿದೆ.

ಅಪಘಾತಗಳಿಗೂ ಬ್ರೇಕ್‌
ಬೆಳ್ತಂಗಡಿ ಮೂರು ಮಾರ್ಗದ ಬಳಿ ತಿರುವಿನಲ್ಲೇ ಹೊಂಡಗಳಿದ್ದ ಪರಿಣಾಮ ವಾಹನಗಳು ವೇಗವಾಗಿ ಬಂದು ತತ್‌ ಕ್ಷಣ ಬ್ರೇಕ್‌ ಹಾಕುತ್ತಿದ್ದ ಪರಿಣಾಮ ನಿತ್ಯವೂ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿದ್ದವು. ಆ ಸಂದರ್ಭ ವಾಹನದವರು ರಸ್ತೆಯಲ್ಲೇ ತಮ್ಮ ವಾಹನ ನಿಲ್ಲಿಸಿ, ಇನ್ನೊಂದು ವಾಹನದವರ ಜತೆಗೆ ಗಲಾಟೆ ನಡೆಸುತ್ತಿದ್ದರು. ಆದರೆ ಈಗ ಹೊಂಡಗಳಿಗೆ ಮುಕ್ತಿ ಸಿಕ್ಕಿರುವುದರಿಂದ ಸಣ್ಣಪುಟ್ಟ ಅಪಘಾತಗಳಿಗೂ ಬ್ರೇಕ್‌ ಬಿದ್ದಂತಾಗಿದೆ. ಆದರೆ ಕಾಮಗಾರಿ ಅವಸರದಲ್ಲಿ ನಡೆದಿರುವುದರಿಂದ ಈ ತೇಪೆ ಕಾರ್ಯ ಎಷ್ಟು ದಿನಗಳವರೆಗೆ ನಿಲ್ಲುತ್ತದೆ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ.

Advertisement

ತೇಪೆ ಕಾರ್ಯ
ಗುರುವಾಯನಕರೆಯಿಂದ ಆರಂಭಗೊಂಡ ತೇಪೆ ಕಾರ್ಯವು ಜೈನ್‌ಪೇಟೆ, ಹಳೆಕೋಟೆ, ಚರ್ಚ್‌ ರೋಡ್‌, ಸಂತೆಕಟ್ಟೆ, ಬೆಳ್ತಂಗಡಿ ಮೂರು ಮಾರ್ಗದ ಬಳಿ, ಬಸ್‌ ನಿಲ್ದಾಣದ ಬಳಿ ನಡೆದು ಗುರುವಾರಕ್ಕೆ ಲಾೖಲವರೆಗೆ ತಲುಪಿದೆ. ಕಾಮಗಾರಿಯ ಸಂದರ್ಭ ಸಂಚಾರಕ್ಕೆ ಅಡಚಣೆಯಾದರೂ ಸದ್ಯ ವಾಹನಗಳು ಸರಾಗವಾಗಿ ಸಾಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next