Advertisement

ಪ.ಪಂ. ಚುನಾವಣೆ: ಗರಿಗೆದರಲಿದೆ ರಾಜಕೀಯ

12:31 PM Oct 05, 2018 | |

ಬೆಳ್ತಂಗಡಿ: ಆಡಳಿತ ಮಂಡಳಿಯ ಅವಧಿ ಮುಗಿದು ಪ್ರಸ್ತುತ ಆಡಳಿತಾಧಿಕಾರಿಯ ಅಧೀನದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ರಾಜ್ಯ ಚುನಾವಣಾ ಆಯೋಗವು ಚುನಾವಣೆಗೆ ಮುಹೂರ್ತ ಫಿಕ್ಸ್‌ ಮಾಡಿದೆ. ಅ. 28ಕ್ಕೆ ಚುನಾವಣೆ ನಡೆಯಲಿದ್ದು, ರಾಜ್ಯ ವಿಧಾನ ಸಭಾ-ಪರಿಷತ್‌ ಚುನಾವಣೆ ನಡೆದು ರಾಜಕೀಯವಾಗಿ ಕೊಂಚ ಕೂಲ್‌ ಆಗಿದ್ದ ಬೆಳ್ತಂಗಡಿಯಲ್ಲಿ ಮತ್ತೆ ರಾಜಕೀಯ ಮೇಲಾಟಗಳು ಗರಿಗೆದರಲಿವೆ.

Advertisement

ನೀತಿಸಂಹಿತೆ ಜಾರಿ
ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಅ. 3ರಿಂದಲೇ ನೀತಿಸಂಹಿತೆ ಜಾರಿಗೆ ಬಂದಿದ್ದು, ಆಯೋಗದ ನಿರ್ದೇಶನದ ಪ್ರಕಾರ ಅ. 31ರ ವರೆಗೆ ನೀತಿಸಂಹಿತೆ ಮುಂದುವರಿಯಲಿದೆ. ಹೀಗಾಗಿ ಇನ್ನು ಪಂಚಾಯತ್‌ ವ್ಯಾಪ್ತಿಯಲ್ಲಿ ಸರಕಾರಿ ಕಾರ್ಯಕ್ರಮಗಳು, ಹೊಸ ಘೋಷಣೆಗಳು, ಅಭಿವೃದ್ಧಿ ಕಾರ್ಯಗಳ ಚಾಲನೆಗೆ ಅವಕಾಶವಿರದು.

ದ.ಕ. ಜಿಲ್ಲಾಧಿಕಾರಿಯವರ ಮಾಹಿತಿ ಪ್ರಕಾರ, 2013ರಂದು ಪಂಚಾಯತ್‌ನ ಪ್ರಥಮ ಸಭೆ ನಡೆದಿರುವ ಹಿನ್ನೆಲೆಯಲ್ಲಿ 2018ರ ಸೆ. 11ಕ್ಕೆ 5 ವರ್ಷಗಳ ಅಧಿಕಾರಾವಧಿ ಮುಗಿದಿತ್ತು. ಹೀಗಾಗಿ ಅದೇ ದಿನ ತಹಶೀಲ್ದಾರರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.

ಅಧಿಕಾರದ ತವಕ
ಬೆಳ್ತಂಗಡಿ ಪಂಚಾಯತ್‌ನಲ್ಲಿ ಹಾಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಕಾಂಗ್ರೆಸ್‌ ಗೆ ಅಧಿಕಾರ ಉಳಿಸುವ ತವಕವಾದರೆ, ಬಿಜೆಪಿಗೆ ಇದೇ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆಯುವ ತವಕ ಆರಂಭಗೊಂಡಿದೆ. ಈ ಎರಡು ಪಕ್ಷಗಳ ಮಧ್ಯೆ ಎಸ್‌ ಡಿಪಿಐ ಹಾಗೂ ಜೆಡಿಎಸ್‌ ಪಕ್ಷಗಳು ಕೂಡ ಹೆಚ್ಚಿನ ಸ್ಥಾನ ಗಳಿಸುವುದಕ್ಕೆ ಪ್ರಯತ್ನ ನಡೆಸಲಿವೆ. ಕಾಂಗ್ರೆಸ್‌- ಬಿಜೆಪಿಯ ಗೆಲುವಿನಲ್ಲಿ ಎಸ್‌ಡಿಪಿಐ, ಜೆಡಿಎಸ್‌, ಸಿಪಿಐಎಂ ಕೂಡ ಪ್ರಭಾವ ಬೀರುವ ಸಾಧ್ಯತೆ ಇದೆ. ಅಂದರೆ ಈ ಮೂರು ಪಕ್ಷಗಳ ಅಭ್ಯರ್ಥಿಗಳು ಕಾಂಗ್ರೆಸ್‌-ಬಿಜೆಪಿಯ ಮತಗಳನ್ನು ಸೆಳೆದಲ್ಲಿ, ಬಂಟ್ವಾಳದಂತೆ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯನ್ನೂ ಅಳಗಳೆಯುವಂತಿಲ್ಲ.

ಕಾಂಗ್ರೆಸ್‌ ಭದ್ರಕೋಟ
ಬೆಳ್ತಂಗಡಿ ಪಂಚಾಯತ್‌ ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದು, ಬಿಜೆಪಿ ಇಲ್ಲಿ ಅಧಿಕಾರ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಆದರೆ ಹಾಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿಯ ಹರೀಶ್‌ ಪೂಂಜ ಅವರು ಶಾಸಕರಾಗಿರುವುದು ಪ್ಲಸ್‌ ಪಾಯಿಂಟ್‌ ಆಗಿರುತ್ತದೆ. ಈ ನಡುವೆ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಹರೀಶ್‌ಕುಮಾರ್‌ ಅವರು ವಿ.ಪರಿಷತ್‌ಗೆ ಆಯ್ಕೆಯಾಗಿರುವುದು ಕಾಂಗ್ರೆಸ್‌ಗೆ ಒಂದಷ್ಟು ಶಕ್ತಿ ನೀಡಲಿದೆ. ಕಾಂಗ್ರೆಸ್‌ನ ಪ್ರಭಾವಿ ನಾಯಕ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಕೂಡ ನಗರ ಭಾಗದಲ್ಲಿ ಹೆಚ್ಚಿನ ಹಿಡಿತ ಹೊಂದಿರುವುದು ಕೂಡ ಕಾಂಗ್ರೆಸ್‌ನ ಶಕ್ತಿ ಎನಿಸಿಕೊಳ್ಳಲಿದೆ.

Advertisement

ವಿಶೇಷ ಸೂಚನೆಗಳು
ಚುನಾವಣೆಯ ಜವಾಬ್ದಾರಿ ನಿರ್ವಹಿಸುವ ಜಿಲ್ಲಾಧಿಕಾರಿಗಳಿಗೆ ಆಯೋಗವು ಕೆಲವೊಂದು ವಿಶೇಷ ಸೂಚನೆಗಳನ್ನೂ ನೀಡಿದೆ. ವಿಧಾನ ಸಭಾ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಬೇಕು. ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗೆ ಸೂಕ್ತ ತರಬೇತಿ ನೀಡುವುದು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು, ಮತಪತ್ರದಲ್ಲಿ ನೋಟಾಗೆ ಅವಕಾಶ ನೀಡುವುದು, ಜತೆಗೆ ಮತಪತ್ರದಲ್ಲಿ ಅಭ್ಯರ್ಥಿಯ ಭಾವಚಿತ್ರ ಮುದ್ರಿಸುವುದಕ್ಕೂ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದೆ.

ವೇಳಾಪಟ್ಟಿ ಹೀಗಿದೆ
· ಅ.9: ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ.
· ಅ.16: ನಾಮಪತ್ರ ಸಲ್ಲಿಸಲು ಕೊನೆಯ ದಿನ.
· ಅ.17: ನಾಮಪತ್ರ ಪರಿಶೀಲನೆ.
· ಅ.20: ನಾಮಪತ್ರ ಹಿಂಪಡೆಯಲು ಕೊನೆಯದಿನ.
. ಅ.28: ಮತದಾನ.
 .ಅ.30: ಮರುಮತದಾನ (ಅಗತ್ಯವಿದ್ದಲ್ಲಿ)·
ಅ.31: ಮತ ಎಣಿಕೆ.

Advertisement

Udayavani is now on Telegram. Click here to join our channel and stay updated with the latest news.

Next