ಬೆಳ್ತಂಗಡಿ: ಬಡಗಿಯೊಬ್ಬರು ತನ್ನ ಕರ್ತವ್ಯ ಮುಗಿಸಿ ಕಬ್ಬಿಣದ ಏಣಿಯನ್ನು ವಾಹನದಿಂದ ಇಳಿಸುತ್ತಿದ್ದ ವೇಳೆ ಅಚಾನಕ್ ಆಗಿ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟು, ಸಮೀಪದಲ್ಲೆ ಫ್ಲೆಕ್ಸ್ ಅಳವಡಿಸುತ್ತಿದ್ದ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ನ.8ರಂದು ರಾತ್ರಿ 7 ಗಂಟೆ ಸುಮಾರಿಗೆ ಬೆಳ್ತಂಗಡಿ ಮುಖ್ಯಪೇಟೆ ಸಮೀಪ ನಡೆದಿದೆ.
ಬೆಳ್ತಂಗಡಿ ಕೋರ್ಟ್ ರಸ್ತೆಯ ಸಂಜಯನಗರ ನಿವಾಸಿ ಪ್ರಶಾಂತ್ ಆಚಾರ್ಯ (40) ಮೃತಪಟ್ಟವರು. ಮತ್ತೋರ್ವ ಮಲೆಬೆಟ್ಟು ನಿವಾಸಿ ಸತೀಶ್ ಆಚಾರ್ಯ (32) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಶಾಂತ್ ಆಚಾರ್ಯ ಅವರು ವೃತ್ತಿಯಲ್ಲಿ ಮರದ ಕೆತ್ತನೆ (ಬಡಗಿ) ಜತೆಗೆ ಬಾಡಿಗೆ ವಾಹನವನ್ನು ಹೊಂದಿದ್ದರು. ಮಂಗಳವಾರ ಸಂಜೆ ಕರ್ತವ್ಯ ನಿರ್ವಹಿಸಿ ತನ್ನ ವಾಹನದಿಂದ ಕಬ್ಬಿಣದ ಏಣಿಯನ್ನು ಇಳಿಸುತ್ತಿದ್ದರು. ಇದೇ ಸ್ಥಳದಲ್ಲಿ ಸತೀಶ್ ಆಚಾರ್ಯ ಅವರು ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿ ಫ್ಲೆಕ್ಸ್ ಅಳವಡಿಸುತ್ತಿದ್ದರು ಎನ್ನಲಾಗಿದೆ. ಕಬ್ಬಿಣದ ಏಣಿಯು ಫ್ಲೆಕ್ಸ್ ಗೆ ತಗಲಿ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಪ್ರಶಾಂತ್ ಹಾಗೂ ಫ್ಲೆಕ್ಸ್ ಹಿಡಿದಿದ್ದ ಸತೀಶ್ ಅವರಿಗೆ ವಿದ್ಯುತ್ ಸ್ಪರ್ಶಿಸಿ ಎಸೆಯಲ್ಪಟ್ಟಿದ್ದಾರೆ.
ಸ್ಥಳೀಯರು ಗಾಯಾಳುಗಳಿಬ್ಬರನ್ನು ತತ್‌ಕ್ಷಣ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಪ್ರಶಾಂತ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಸತೀಶ್ ಅವರು ಚೇತರಿಸಿಕೊಂಡಿದ್ದಾರೆ. ಮೃತ ಪ್ರಶಾಂತ್ ಪತ್ನಿ ಹಾಗೂ ನಾಲ್ಕು ವರ್ಷದ ಪುತ್ರನನ್ನು ಅಗಲಿದ್ದಾರೆ.
ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಕೆ.ವಸಂತ ಬಂಗೇರ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಆಸ್ಪತ್ರೆಗೆ ಹಾಗೂ ಮೃತರ ಮನೆಗೆ ಭೇಟಿ ನೀಡಿದರು.