Advertisement

Belthangady: ಖಾಸಗಿ ಕಟ್ಟಡದ ಅವ್ಯವಸ್ಥೆ ವಿರುದ್ಧ ಸದಸ್ಯರು ಗರಂ

01:04 PM Jan 01, 2025 | Team Udayavani |

ಬೆಳ್ತಂಗಡಿ: ಪಟ್ಟಣ ಪಂಚಾಯತ್‌ ಸಮೀಪ ಇರುವ ಬಹು ಮಹಡಿ ಖಾಸಗಿ ಕಟ್ಟಡದ ಮುಂಭಾಗ ತೆರೆದ ಚರಂಡಿಯಿಂದಾಗಿ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ಇತ್ತೀಚೆಗೆ ಬಾಡಿಗೆ ದಾರರು ಪಟ್ಟಣ ಪಂಚಾಯತ್‌ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಮುಂದಾಗಿದೆ.

Advertisement

ಪಟ್ಟಣ ಪಂಚಾಯತ್‌ ಸಭಾಂಗಣದಲ್ಲಿ ಡಿ.31 ರಂದು ಅಧ್ಯಕ್ಷ ಜಯಾನಂದ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಅನೇಕ ಕೊರತೆಗಳ ನಡುವೆ ಹಲವು ಬಾರಿ ವಿವಾದಕ್ಕೆ ಗುರಿಯಾಗಿದ್ದ ಖಾಸಗಿ ಕಟ್ಟಡದ ಮುಂಭಾಗ ಚರಂಡಿ ಅವ್ಯವಸ್ಥೆಯಿಂದ ಮಳೆಗಾಲದಲ್ಲಿ ನೀರು ನಿಂತು ರಸ್ತೆ ಹಾಳಾಗಿತ್ತು. ಮತ್ತೂಂದೆಡೆ ಕಟ್ಟಡದ ಬಾಡಿಗೆದಾರರು ಚರಂಡಿ ಅವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿ ದುರಸ್ತಿಗೆ ಆಗ್ರಹಿಸಿದ್ದರು.

ಆದರೆ ಈ ಖಾಸಗಿ ಕಟ್ಟಡವು ಪಾರ್ಕಿಂಗ್‌ ಸೌಲಭ್ಯದ ಜಾಗದಲ್ಲಿ ಅಂಗಡಿ ಮುಂಗಟ್ಟು ಮಾಡಿದ್ದು ಇದಕ್ಕೆ ಅನುಮತಿ ನೀಡುವಾಗಲೇ ಪರಿಶೀಲಿಸದಿರುವುದು ತಾಂತ್ರಿಕ ತಜ್ಞರ ಲೋಪವಾಗಿದೆ ಎಂದು ಸದಸ್ಯ ಜಗದೀಶ್‌ ಆಕ್ಷೇಪಿಸಿದರು. ಬಹು ಮಹಡಿಯ ಕಟ್ಟಡಕ್ಕೆ ವಯಸ್ಕರು, ಅಂಗವಿಕಲರು ತೆರಳಲು ಸೂಕ್ತ ಲಿಫ್ಟ್‌ ವ್ಯವಸ್ಥೆಯಿಲ್ಲ. ಆದರೆ ಇದನ್ನು ಮಾಲಕರ ಬಳಿ ಕೇಳುವ ಬದಲು ಬಾಡಿಗೆದಾರರು ಪಟ್ಟಣ ಪಂಚಾಯತ್‌ ಮುಂಭಾಗ ಗಲಾಟೆ ಮಾಡುತ್ತಾರೆ. ಆದರೆ ಪ.ಪಂ.ನಿಂದ ಮೇಲಾಧಿಕಾರಿಗಳಿಗೆ ಪತ್ರ ಬರೆಯಬೇಕಿತ್ತು ಎಂದರು.

ಉಪಾಧ್ಯಕ್ಷೆ ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷ ಶರತ್‌ ಶೆಟ್ಟಿ, ಎಂಜಿನಿಯರ್‌ ಮಹಾವೀರ ಆರಿಗ ಸಹಿತ ಸದಸ್ಯರು ಉಪಸ್ಥಿತರಿದರು.

Advertisement

ಚರ್ಚೆಯಾದ ಪ್ರಮುಖ ವಿಚಾರಗಳು
-ಸಂತೆಕಟ್ಟೆಯಲ್ಲಿ ಬಸ್‌ ನಡು ರಸ್ತೆಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿ ಇಳಿಸುವುದರಿಂದ ಆಗುವ ಸಮಸ್ಯೆಗೆ ಕ್ರಮಕ್ಕೆ ಆಗ್ರಹ
-ಸುದೆಮುಗೇರು, ಸಂಜಯನಗರದಲ್ಲಿ ಮಿನಿ ಹೈಮಾಸ್ಟ್‌ ದುರಸ್ತಿಗೆ ಸೂಚನೆ
-ಕೃಷಿ ಇಲಾಖೆ ಸಮೀಪ 10 ಸೆಂಟ್ಸ್‌ ಜಾಗ ಯುಜಿಡಿ ಘಟಕ ನಿರ್ಮಾಣಕ್ಕೆ ಅವಕಾಶ ಕೋರಿ ಸರಕಾರಕ್ಕೆ ಪತ್ರ ಬರೆಯಲು ಚಿಂತನೆ
-40 ಲಕ್ಷ ರೂ. ವೆಚ್ಚದಲ್ಲಿ ಬೆಳ್ತಂಗಡಿ ರುದ್ರಭೂಮಿ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ

ಉದಯವಾಣಿ ವರದಿ ಉಲ್ಲೇಖ
ಖಾಸಗಿ ಕಟ್ಟಡದ ಸಮಸ್ಯೆ ಮತ್ತು ಕೊಳಚೆ ನೀರಿನ ಬಗ್ಗೆ ಅಧ್ಯಕ್ಷ ಜಯಾನಂದ್‌ ಪ್ರತಿಕ್ರಿಯಿಸಿ ಸೋಮಾವತಿ ನದಿಗೆ ಚರಂಡಿ ಮೂಲಕ ಕೊಳಚೆ ನೀರು ಸಾಗುವುದನ್ನು ಉದಯವಾಣಿ ಪತ್ರಿಕೆ ವರದಿ ಮಾಡಿ ಎಚ್ಚರಿಸಿದೆ. ಆ ಕಟ್ಟಡ ಸಹಿತ ಯಾವುದೇ ಮನೆ, ಖಾಸಗಿ ಕಟ್ಟಡದವರು ತೆರೆದ ಚರಂಡಿಗೆ ಕೊಳಚೆ ನೀರು ಬಿಡುವಂತಿಲ್ಲ. ಬಹು ಮಹಡಿ ಕಟ್ಟಡ ಮುಂಭಾಗ ಪಾರ್ಕಿಂಗ್‌ ವ್ಯವಸ್ಥೆಯನ್ನು ಮಾಲಕರು ಗುರುತಿಸಬೇಕು. ತೆರೆದ ಚರಂಡಿಗೆ ಪ.ಪಂ. ಕಲ್ಲು ಹಾಸಿಕೊಡುವ ನಿರ್ಧಾರವಿಲ್ಲ. ಮಾಲಕರೇ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು. ಆದರೆ ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ಪ.ಪಂ. ಅನುಮತಿ ಪಡೆದು ಮಳೆಗಾಲದಲ್ಲಿ ನೀರು ಸರಾಗವಾಗಿ ಸಾಗಲು ವ್ಯವಸ್ಥೆ ಕಲ್ಪಿಸಿಕೊಟ್ಟರಷ್ಟೆ ಅನುಮತಿ ನೀಡಲಾಗುವುದು ಎಂದರು.

ಎಲ್ಲೆಂದರಲ್ಲಿ ರಿಕ್ಷಾ ಪಾರ್ಕಿಂಗ್‌
ನಗರದಲ್ಲಿ ಎಲ್ಲೆಂದರಲ್ಲಿ ರಿಕ್ಷಾ ಪಾರ್ಕಿಂಗ್‌ ಮಾಡಲಾಗುತ್ತಿದೆ ಇದಕ್ಕೆ ಸಂಚಾರ ಠಾಣೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದಾಗ ಉಪನಿರೀಕ್ಷಕ ಅರ್ಜುನ್‌ ಪ್ರತಿಕ್ರಿಯಿಸಿ, ಸ್ಥಳೀಯಾಡಳಿತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕು. ಉಜಿರೆಯಲ್ಲಿ 1,000 ಕ್ಕೂ ಮಿಕ್ಕಿ ಆಟೋಗಳಿವೆ, ಬೆಳ್ತಂಗಡಿಯಲ್ಲಿ 800 ಕ್ಕೂ ಅಧಿಕ ಆಟೋಗಳಿವೆ. ಇದರಿಂದ ಸಮಸ್ಯೆ ಎದುರಾಗುತ್ತಿದೆ ಎಂದರು. ಮಿನಿ ವಿಧಾನ ಸೌಧ ಸಮೀಪ ಆಟೋ ಪಾರ್ಕ್‌ ಅನಧಿಕೃತವಾಗಿದ್ದು ತೆರವುಗೊಳಿಸುವ ಬಗ್ಗೆ ಹಾಗೂ ವಿಘ್ನೇಶ್‌ ಸಿಟಿ ಕಟ್ಟಡದೆದುರು ರಸ್ತೆಯಲ್ಲಿ ಪಾರ್ಕಿಂಗ್‌ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯಿಸಲಾಯಿತು.

ಸಂತೆಕಟ್ಟೆ ಬಸ್‌ ನಿಲ್ದಾಣದ ಕಟ್ಟಡ ಸಾಮರ್ಥ್ಯ ಪರೀಕ್ಷೆ
ಬೆಳ್ತಂಗಡಿ ಪ.ಪಂ. ಒಳಪಟ್ಟ ಸಂತೆಕಟ್ಟೆ ಬಸ್‌ನಿಲ್ದಾಣ ವಿರುವ ರಾಜೀವ್‌ಗಾಂಧಿ ಕಟ್ಟಡ 2016ರಲ್ಲಿ ಉದ್ಘಾಟನೆಗೊಂಡಿದ್ದು, ಪ್ರಸಕ್ತ ಅಪಾಯದಲ್ಲಿರುವ ಕುರಿತು ಚರ್ಚೆ ನಡೆದಾಗ ಸಾಮರ್ಥ್ಯ ಪರಿಶೀಲನೆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದೆಂದು ನಿರ್ಣಯಿಸಲಾಯಿತು. ಸಂತೆಕಟ್ಟೆ ನೂತನ ಕಟ್ಟಡವೂ ಅವೈಜ್ಞಾನಿಕವಾಗಿ ರಚಿಸಲಾಗಿದೆ ಎಂದು ಸದಸ್ಯ ಜಗದೀಶ್‌ ಸಭೆಯ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next