ಬೆಳ್ತಂಗಡಿ : ಮಲೆಕುಡಿಯ ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಶೀಘ್ರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಿತ ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ನಿಡ್ಲೆ ಗ್ರಾಮದ ಬರೆಂಗಾಯದ ಹಿ.ಪ್ರಾ. ಶಾಲೆಯಲ್ಲಿ ನಡೆದ ಮಲೆಕುಡಿಯ ಸಂಘ ವಲಯ ಸಮಿತಿ ನಿಡ್ಲೆ (ನಿಡ್ಲೆ, ಕಳೆಂಜ, ಪುದುವೆಟ್ಟು) ಇದರ ತ್ತೈಮಾಸಿಕ ಸಭೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಲೆಕುಡಿಯ ಸಂಘದ ವಲಯಾಧ್ಯಕ್ಷ ಜಯೇಂದ್ರ ಎಂ. ಅವರು ಸಮುದಾಯ ಭವನ ನಿರ್ಮಾಣಕ್ಕಾಗಿ ಶಾಸಕರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಶಾಸಕರನ್ನು ವಲಯ ಸಮಿತಿ ವತಿಯಿಂದ ಗೌರವಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಅಣ್ಣಪ್ಪ ಎನ್., ಜಿಲ್ಲಾಧ್ಯಕ್ಷ ಶ್ರೀನಿವಾಸ್ ಸಿ., ಉಜಿರೆ ತಾಲೂಕು ಅಧ್ಯಕ್ಷ ನೋಣಯ್ಯ ಮಚ್ಚಿನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೊಳಲಿ ಹಾಗೂ ನಿಡ್ಲೆ ಗ್ರಾ.ಪಂ. ಅಧ್ಯಕ್ಷೆ ಶುಭಾ ದೇವದರ್ ಉಪಸ್ಥಿತರಿದ್ದರು. ಸುಶ್ಮಿತಾ ತೊಟ್ಲಾಯ ಸ್ವಾಗತಿಸಿ, ಲಲಿತಾ ಕಂಬರಂಡ ವರದಿ ವಾಚಿಸಿದರು. ರಮೇಶ್ ನಂದಿಲ ವಂದಿಸಿದರು. ಗಿರೀಶ್ ನಿಡ್ಲೆ ನಿರೂಪಿಸಿದರು.
ಕಂದಾಯ ಅದಾಲತ್
ಮಲೆಕುಡಿಯ ಸಮುದಾಯದ ಅನೇಕರು ಎದುರಿಸುತ್ತಿರುವ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ ಅದಾಲತ್ ನಡೆಸಿ, ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗುವುದು. ಪ್ರಧಾನಮಂತ್ರಿ ಮುದ್ರಾ ಯೋಜನೆ, ಸ್ವ- ಉದ್ಯೋಗ ಯೋಜನೆಗಳನ್ನು ಬಳಸಿಕೊಂಡು ಸ್ವ ಉದ್ಯೋಗಿಗಳಾಗಿ.
– ಹರೀಶ್ ಪೂಂಜ ಶಾಸಕರು