ಬೆಳ್ತಂಗಡಿ: ಮರದ ಗೆಲ್ಲು ಕಟಾವು ಮಾಡುತ್ತಿರುವ ಸಂದರ್ಭ ವ್ಯಕ್ತಿ ಅಯತಪ್ಪಿ ಕೆಳಗೆ ಬೀಳುವ ಸಂದರ್ಭ ಕಟಾವು ಯಂತ್ರದ ಗರಗಸ ಕುತ್ತಿಗೆಗೆ ಸಿಲುಕಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಾವ್ಯ ಎಂಬಲ್ಲಿ ಡಿ. 20ರಂದು ನಡೆದಿದೆ.
ಇಲ್ಲಿನ ಸಾವ್ಯ ಗ್ರಾಮದ ಹೊಸಮನೆ ನಿವಾಸಿ ಪ್ರಶಾಂತ್ ಪೂಜಾರಿ (36) ಮೃತಪಟ್ಟವರು.ಮೃತರು ತನ್ನ ಮನೆಯ ಬಳಿ ಡಿ.19ರಂದು ಬೆಳಗ್ಗೆ ಮನೆ ಬಳಕೆಗೆ ಕಟ್ಟಿಗೆ ಮಾಡುವ ಸಲುವಾಗಿ ಸಹೋದರ ಪ್ರಮೋದ್ ಜತೆ ಮರ ಕಡಿಯುವ ಕಟ್ಟಿಂಗ್ ಮೆಷಿನ್ ಮೂಲಕ ಮರ ಕಡಿಯುತ್ತಿದ್ದರು.
ಪ್ರಶಾಂತ್ ಪೂಜಾರಿ ಕಟ್ಟಿಂಗ್ ಮಿಷಿನ್ ಜತೆಗೆ ಹಿಡಿತ ತಪ್ಪಿ ನೆಲಕ್ಕೆ ಬಿದ್ದಾಗ ಚಾಲನಾ ಸ್ಥಿತಿಯಲ್ಲಿದ್ದ ಕಟ್ಟಿಂಗ್ ಮೆಷಿನಿನ ಗರಗಸ ಆಕಸ್ಮಿಕವಾಗಿ ಕುತ್ತಿಗೆಯ ಬಳಿ ತಾಗಿ, ಗಂಭೀರವಾಗಿ ಗಾಯಗೊಂಡರು. ತತ್‌ಕ್ಷಣ ಅವರನ್ನು ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಡಿ.20ರಂದು ಬೆಳಗ್ಗೆ ಮೃತಪಟ್ಟರು.
ಈ ಬಗ್ಗೆ ಪ್ರಮೋದ್ ಅವರು ವೇಣೂರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ದೂರು ದಾಖಲಾಗಿದೆ.
ಮೃತ ಪ್ರಶಾಂತ್ ಪೂಜಾರಿ ಅವಿವಾಹಿತರಾಗಿದ್ದು, ಕಳೆದ ಹತ್ತು ದಿನಗಳ ಹಿಂದಷ್ಟೆ ಕಟೀಲು ಎಕ್ಕಾರಿನ ಯುವತಿ ಜತೆ ಮದುವೆ ಕುರಿತು ಮಾತುಕತೆ ನಡೆದಿತ್ತು. ಮಾರ್ಚ್ ನಲ್ಲಿ ಮದುವೆಗೆ ದಿನಾಂಕವೂ ನಿಗದಿಯಾಗಿತ್ತು. ಪ್ರಶಾಂತ್ ಸಾಮಾನ್ಯ ಬಡ ಕುಟುಂಬದವರಾಗಿದ್ದು, ನಾಲ್ವರು ಮಕ್ಕಳ ಪೈಕಿ ದ್ವಿತೀಯ ಪುತ್ರ. ಮೃತರು ತಂದೆ ತಾಯಿ, ಸಹೋದರಿ ಸಹಿತ ಇಬ್ಬರು ಸಹೋದರರನ್ನು ಅಗಲಿದ್ದಾರೆ.