Advertisement

ಬೆಳ್ತಂಗಡಿ:10 ರೂ. ಊಟ, 5 ರೂ. ತಿಂಡಿ ಭಾಗ್ಯ ಶೀಘ್ರ

10:43 AM Sep 26, 2018 | Team Udayavani |

ಬೆಳ್ತಂಗಡಿ: ಕಳೆದ ಅವಧಿಯ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಕಡಿಮೆಯ ಬೆಲೆಯಲ್ಲಿ ಆಹಾರೋತ್ಪನ್ನ ಒದಗಿಸುವ ‘ಇಂದಿರಾ ಕ್ಯಾಂಟೀನ್‌’ ಕಾಮಗಾರಿ ಬೆಳ್ತಂಗಡಿಯಲ್ಲೂ ಆರಂಭಗೊಂಡಿದ್ದು, ಶೀಘ್ರದಲ್ಲಿ ಬೆಳ್ತಂಗಡಿಯ ನಾಗರಿಕರೂ ಇಂದಿರಾ ಕ್ಯಾಂಟೀನ್‌ ರುಚಿ ಅನುಭವಿಸಬಹುದಾಗಿದೆ!

Advertisement

ನಗರದ ಹೃದಯ ಭಾಗವಾಗಿ ಗುರುತಿಸಲ್ಪಟ್ಟಿರುವ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಪ.ಪಂ. ಸ್ಥಳದಲ್ಲಿ ಕ್ಯಾಂಟೀನ್‌ನ ಕಾಮಗಾರಿ ಆರಂಭಗೊಂಡಿದೆ. ಪ್ರಸ್ತುತ ಜೇಸಿಬಿ ಮೂಲಕ ಸಮತಟ್ಟುಗೊಳಿಸುವ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ.

ದ.ಕ. ಜಿಲ್ಲೆಯಲ್ಲಿ ಮಂಗಳೂರಿನಲ್ಲಿ 5, ಪ್ರತಿ ತಾಲೂಕು ಕೇಂದ್ರಕ್ಕೆ ಒಂದೊಂದು ಇಂದಿರಾ ಕ್ಯಾಂಟೀನ್‌ ಆರಂಭಗೊಳ್ಳಲಿದೆ ಎಂದು ಹಿಂದಿನ ಸರಕಾರ ಘೋಷಿಸಿತ್ತು. ಅದೇ ರೀತಿ ಮಂಗಳೂರಿನಲ್ಲಿ 5 ಹಾಗೂ ಮಂಗಳೂರು ತಾ| ಕೇಂದ್ರದ ಕ್ಯಾಂಟೀನ್‌ ತೊಕ್ಕೊಟ್ಟಿನಲ್ಲಿ ಕಾರ್ಯಾಚರಿ ಸುತ್ತಿದೆ. ಉಳಿದ ತಾ| ಕೇಂದ್ರಗಳಲ್ಲಿ ಇನ್ನೂ ಕ್ಯಾಂಟೀನ್‌ ಕಾರ್ಯಾರಂಭಗೊಂಡಿಲ್ಲ.

ಕ್ಯಾಂಟೀನ್‌ಗೆ ಪ.ಪಂ. ಸ್ಥಳ ಹಾಗೂ ಇತರ ವ್ಯವಸ್ಥೆಗಳನ್ನು ನೋಡಿಕೊಳ್ಳಬೇಕಿದೆ. ಆದರೆ ಪ್ರಸ್ತುತ ಬೆಳ್ತಂಗಡಿ ಪಂ.ನಲ್ಲಿ ಆಡಳಿತ ಮಂಡಳಿಯ ಅವಧಿ ಮುಗಿದಿದ್ದು, ತಹಶೀಲ್ದಾರ್‌ ಆಡಳಿತಾಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕ್ಯಾಂಟೀನ್‌ಗೆ ಜಾಗ ಮಂಜೂರಾತಿ ಸಹಿತ ಕಾಮಗಾರಿ ಅವರ ನಿರ್ದೇಶನದಂತೆಯೇ ನಡೆಯಲಿದೆ.

ಮುಂದೆ ಯಾವುದೇ ಅಡ್ಡಿಗಳು ವ್ಯಕ್ತವಾಗದೇ ಇದ್ದರೆ ಬೆಳ್ತಂಗಡಿಯ ಜನತೆಯೂ ಇಂದಿರಾ ಕ್ಯಾಂಟೀನ್‌ ಮೂಲಕ 5 ರೂ.ಗಳ ಉಪಾಹಾರ, 10 ರೂ.ಗಳ ಊಟದ ಸವಿಯನ್ನು ಸವಿಯಬಹುದಾಗಿದೆ. ಕ್ಯಾಂಟೀನ್‌ಗೆ ತಳಪಾಯ ಹಾಕಿದ ಬಳಿಕ ರೆಡಿಮೇಡ್‌ ಸಲಕರಣೆಗಳ ಮೂಲಕ ಕಾಮಗಾರಿ ನಡೆಯುವುದರಿಂದ ಕ್ಯಾಂಟೀನ್‌ ಶೀಘ್ರವೇ ಕಾರ್ಯಾರಂಭಗೊಳ್ಳುವ ಸಾಧ್ಯತೆ ಇದೆ.

Advertisement

ಹಿಂದೆ ಬೇರೊಂದು ಜಾಗ ನಿಗದಿ
ಇಂದಿರಾ ಕ್ಯಾಂಟೀನ್‌ ನಿರ್ಮಿಸುವುದಕ್ಕೆ ಸ್ಥಳ ನೀಡುವಂತೆ ಪಟ್ಟಣ ಪಂಚಾಯತ್‌ ಗೆ ಹಿಂದೆ ಜಿಲ್ಲಾಧಿಕಾರಿ ಕಚೇರಿಯಿಂದ ಪತ್ರ ಬಂದಾಗ ಅಟಲ್‌ ಸೇವಾ ಕೇಂದ್ರದ ಬಳಿ ಸುಮಾರು 6 ಸೆಂಟ್ಸ್‌ ಸ್ಥಳವನ್ನು ಪಂಚಾಯತ್‌ ನಿಗದಿ ಪಡಿಸಿತ್ತು. ಆದರೆ ಕ್ಯಾಂಟೀನ್‌ ನಿರ್ಮಿಸುವ ಸಮಿತಿಯು ಅದನ್ನು ಪರಿಶೀಲಿಸಿ, ಈ ಸ್ಥಳ ಆಗುವುದಿಲ್ಲ ಎಂದಿತ್ತು. ಅಂದರೆ ಅದು ಎತ್ತರದ ಪ್ರದೇಶ, ಅಲ್ಲಿ ಕ್ಯಾಂಟೀನ್‌ನ ಜತೆಗೆ ತಡಗೋಡೆಯನ್ನೂ ನಿರ್ಮಿಸಬೇಕಾಗುತ್ತದೆ. ಜತೆಗೆ ನಿಗದಿಯಂತೆ 60×60 ಫೀಟ್‌ ಸ್ಥಳ ಇಲ್ಲ ಎಂದು ಸೂಚಿಸಿತ್ತು. ಹೀಗಾಗಿ ಬೇರೆ ಸ್ಥಳವನ್ನು ಸೂಚಿಸುವಂತೆ ಪಂ.ಗೆ ಸೂಚನೆ ಬಂದಿತ್ತು. ಪ್ರಸ್ತುತ ಜಿಲ್ಲಾಧಿಕಾರಿ ಕಚೇರಿಯಿಂದ ಬೇಗ ಸ್ಥಳ ನಿಗದಿಗೆ ಒತ್ತಡ ಬಂದ ಹಿನ್ನೆಲೆಯಲ್ಲಿ ಬಸ್‌ ನಿಲ್ದಾಣದ ಸಮೀಪದ ಸ್ಥಳವನ್ನು ನಿಗದಿ ಪಡಿಸಲಾಗಿದೆ.

ಪಾರ್ಕಿಂಗ್‌ ಸ್ಥಳ
ಬೆಳ್ತಂಗಡಿ ನಗರದ ಪಾರ್ಕಿಂಗ್‌ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪಂ.ನಿಂದ ಬಸ್‌ ನಿಲ್ದಾಣದ ಹಿಂಬದಿಯ ಸ್ಥಳದಲ್ಲಿ ಇಂಟರ್‌ಲಾಕ್‌ ಅಳವಡಿಸಿ, ಪೇ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಂ. ಆಡಳಿತ ಮಂಡಳಿ ಅದನ್ನು ರದ್ದುಗೊಳಿಸಿತ್ತು. ಇದೀಗ ಅದೇ ಸ್ಥಳದ ಒಂದು ಬದಿಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಸ್ಥಳ ನಿಗದಿ ಮಾಡಿ, ಕಾಮಗಾರಿ ಆರಂಭಿಸಲಾಗಿದೆ.

ಕಾಮಗಾರಿ
ಪ.ಪಂ.ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಡಿಸಿ ನಿರ್ದೇಶನದಂತೆ ಬಸ್‌ ನಿಲ್ದಾಣ ಪಕ್ಕ ಇಂದಿರಾ ಕ್ಯಾಂಟೀನ್‌ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರ ಕಾರ್ಯಾರಂಭಗೊಳಿಸುವ ಆಲೋಚನೆ ಇದೆ.
– ಮದನ್‌ಮೋಹನ್‌ ಸಿ.
ತಹಶೀಲ್ದಾರ್‌, ಪ.ಪಂ. ಆಡಳಿತಾಧಿಕಾರಿ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next