ಬೆಳ್ತಂಗಡಿ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದ್ದು, ನಾವು ಮಾತೆ ಎಂದು ಗೌರವಿಸುತ್ತೇವೆ. ಸರಕಾರವೂ ಮಹಿಳೆಗೆ ಸ್ವಾಭಿಮಾನದ ಬದುಕು ನೀಡುವುದಕ್ಕಾಗಿ ಸ್ತ್ರೀಶಕ್ತಿ ಸಂಘಗಳ ಮೂಲಕ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿದ್ದು, ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನೆ, ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಸಹಯೋಗದಲ್ಲಿ ನಿರ್ಮಾಣಗೊಂಡ ಬೆಳ್ತಂಗಡಿ ತಾಲೂಕು ಸ್ತ್ರೀಶಕ್ತಿ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳ್ತಂಗಡಿ ತಾ.ಪಂ. ಉಪಾಧ್ಯಕ್ಷೆ ವೇದಾವತಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಮಮತಾ ಎಂ. ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್, ಜಿ.ಪಂ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೆನ್ನಪ್ಪ ಮೊಯಿಲಿ, ಬ್ಲಾಕ್ ಸ್ತ್ರೀಶಕ್ತಿ ಸೊಸೈಟಿಯ ಅಧ್ಯಕ್ಷೆ ಯಶೋದಾ ಮತ್ತಿತರರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆ್ಯಗ್ನೇಸ್ ಸ್ವಾಗತಿಸಿ, ಹಿರಿಯ ಮೇಲ್ವಿಚಾರಕಿ ಸುಧಾ ವಂದಿಸಿದರು. ಮೇಲ್ವಿಚಾರಕರಾದ ವಂದನಾ, ವಾಣಿಶ್ರೀ ನಿರೂಪಿಸಿದರು.
ಮಹಿಳೆ ಗೌರವಕ್ಕೆ ಪಾತ್ರ
ಕುಟುಂಬ ನಿರ್ವಹಣೆಯಲ್ಲೂ ಮಹಿಳೆಯ ಪಾತ್ರ ವಿಶೇಷವಾಗಿದ್ದು, ಅದರ ಪೂರ್ಣ ಜವಾಬ್ದಾರಿಯೂ ಅವರ ಮೇಲಿರುತ್ತದೆ. ಕುಟುಂಬದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಸರಕಾರವು ಮಹಿಳೆಗೆ ನೀಡುವ ಯೋಜನೆಗಳನ್ನು ಇಂತಹ ಸ್ತ್ರೀಶಕ್ತಿ ಸಂಘಗಳ ಮೂಲಕ ನೀಡಿದರೆ ಸಂಘಗಳು ಇನ್ನಷ್ಟು ಅಭಿವೃದ್ಧಿ ಹೊಂದಲಿವೆ.
– ಹರೀಶ್ ಪೂಂಜ ಶಾಸಕರು