ಬೆಳ್ತಂಗಡಿ: ಬೇಸಗೆ ತಾಪಮಾನದಿಂದ ಬಸವಳಿದಿದ್ದ ಮಂದಿಗೆ ಮಳೆ ಕೊಂಚ ತಣಿಸಿದ್ದು, ಬೆಳ್ತಂಗಡಿ ತಾಲೂಕಿನ ಹಲವೆಡೆ ಎ.7ರ ಶುಕ್ರವಾರ ಸಂಜೆ ಆಲಿಕಲ್ಲು ಸಹಿತ ಮಳೆಯಾಗಿದೆ.
ಉಜಿರೆ, ಮುಂಡಾಜೆ, ಧರ್ಮಸ್ಥಳ, ಕೊಕ್ಕಡ, ನಾರಾವಿ, ಬೆಳ್ತಂಗಡಿ, ಚಾರ್ಮಾಡಿ, ಸವಣಾಲು, ಕಡಿರುದ್ಯಾವರ ಸಹಿತ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಸುರಿದಿದೆ.
ಗುರುವಾರ ಮಧ್ಯರಾತ್ರಿಯೇ ಮಳೆ ಮುನ್ಸೂಚನೆ ನೀಡಿದ್ದು, ಗುಡುಗು ಸಹಿತ ಹನಿ ಮಳೆಯಾಗಿತ್ತು. ಇದೀಗ ಶುಕ್ರವಾರ ತಣ್ಣನೆ ಗಾಳಿಯೊಂದಿಗೆ ಮಳೆ ಆರಂಭಗೊಂಡು ರಸ್ತೆ, ಚರಂಡಿಗಳ್ಳಿ ನೀರು ಹರಿಯುವ ಮಟ್ಟಿಗೆ ಮಳೆಯಾಗಿದೆ.
ಬೇಸಗೆ ಬಿಸಿಯಿಂದ ಅಂತರ್ಜಲ ಬರಿದಾಗಿ ಕೊಳವೆಬಾವಿಯಲ್ಲಿ ನೀರಿಲ್ಲದೆ ಕೃಷಿಕರು ಕಂಗೆಟ್ಟಿದ್ದರು. ಇದೀಗ ಅರ್ಧ ತಾಸು ಮಳೆಯಿಂದಾಗಿ ವಾತಾವರಣ ತಂಪೇರಿದೆ. ಬಹುತೇಕ ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ.
ಮಳೆ ಪರಿಣಾಮ ಕೆಲವೆಡೆ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.